ಮೈಸೂರು: ಡಾ.ರಾಜಕುಮಾರ್ ಅವರು ಸ್ವತಃ ಸಂತರಾಗಿದ್ದರು. ಹಾಗಾಗಿ, ಎಲ್ಲ ಪಾತ್ರಗಳಿಗೂ ಅವರು ಜೀವ ತುಂಬಲು ಸಾಧ್ಯವಾಯಿತು ಎಂದು ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಅವರು ಅಭಿಪ್ರಾಯಪಟ್ಟರು.
ಕದಂಬ ರಂಗ ವೇದಿಕೆ ಹಾಗೂ ಮೈಸೂರು ಆರ್ಟ್ಸ್ ಗ್ಯಾಲರಿ ವತಿಯಿಂದ ಹಮ್ಮಿಕೊಂಡಿದ್ದ ಬೇಗೂರು ಎಲ್.ಮೂರ್ತಿ ಅವರು ಸಂಗ್ರಹಿಸಿರುವ ಡಾ.ರಾಜಕುಮಾರ್ ಅವರ ಛಾಯಾಚಿತ್ರಗಳ ಸಂಗ್ರಹ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ರಾಜ್ ಅವರು ಎಲ್ಲ ಪಾತ್ರಗಳಲ್ಲೂ ಅಭಿನಯಿಸಿ ಜೀವ ತುಂಬಿದ್ದಾರೆ. ಸಂತರ ಪಾತ್ರಗಳಿಗೆ ಜೀವ ತುಂಬುವುದು ಎಲ್ಲರಿಂದ ಸಾಧ್ಯವಿಲ್ಲ. ಅದು ಕೇವಲ ಸಂತರಾದವರಿಗೆ ಮಾತ್ರ ಸಾಧ್ಯವಾಗುವಂಥದ್ದು. ಸರಳತೆ, ನಿರಾಡಂಬರವೇ ರಾಜಕುಮಾರ್. ಸಿನಿಮಾದಂತಹ ಬಣ್ಣದ ಜಗತ್ತಿನಲ್ಲಿದ್ದುಕೊಂಡೂ ಚಾರಿತ್ರ್ಯವನ್ನು ಉಳಿಸಿಕೊಂಡು ಬಾಳಿದ ನಟ ದಿಗ್ಗಜ ಅವರು ಎಂದು ಶ್ಲಾಘಿಸಿದರು.
‘ಇದು ಕೇವಲ ಛಾಯಾಚಿತ್ರಗಳ ಪ್ರದರ್ಶನವಲ್ಲ. ಇದು ವಿಶ್ವರೂಪ ದರ್ಶನ. ಇವು ಸಾರ್ಥಕ ಕ್ಷಣಗಳು. ನಮ್ಮ ನಡುವೆ ಇದ್ದ ಮಹಾ ಕಲಾವಿದರಿವರು. ಕನ್ನಡ ಬೆಳ್ಳಿತೆರೆಯ ಪ್ರಶ್ನಾತೀತ ಸಾಮ್ರಾಟ ರಾಜಕುಮಾರ್. ಹಾಗಾಗಿ, ಅವರ ಬಾಳಿನ ವಿವಿಧ ಘಟನೆಗಳು, ಚಲನಚಿತ್ರಗಳ ಛಾಯಾಚಿತ್ರಗಳನ್ನು ವೀಕ್ಷಿಸುವ ಅವಕಾಶ ಸಿಕ್ಕಿರುವುದು ಮಹಾಪುಣ್ಯ’ ಎಂದು ಅವರು ವರ್ಣಿಸಿದರು.
ಕನ್ನಡ ಕಟ್ಟಿದ ಧೀಮಂತ: ಕನ್ನಡ ನಾಡನ್ನು ಕಟ್ಟಿ ಬೆಳೆಸಿದ ಧೀಮಂತ ಚೇತನ ಡಾ.ರಾಜ್. ಗೋಕಾಕ್ ಚಳವಳಿ ನಿಧಾನ ಗತಿಯಲ್ಲಿ ನಡೆಯುತ್ತಿದ್ದಾಗ, ಚಳವಳಿಗೆ ಧುಮುಕಿ ಚುರುಕು ನೀಡಿದರು. ಅವರಿಲ್ಲದೇ ಇದ್ದಿದ್ದರೆ ಸುಲಭವಾಗಿ ಯಶಸ್ಸು ಸಿಗುತ್ತಿರಲಿಲ್ಲ. ಕನ್ನಡ, ಕರ್ನಾಟಕವೆಂದ ಕೂಡಲೇ ನಿಸ್ವಾರ್ಥದಿಂದ ಅವರು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದರು ಎಂದು ಸ್ಮರಿಸಿದರು.
ಸಾಹಿತಿ ಡಾ.ಲತಾ ರಾಜಶೇಖರ್ ಮಾತನಾಡಿ, ರಾಜಕುಮಾರ್ ಅವರು ಕೇವಲ ಮನರಂಜನೆಗಾಗಿ ಸಿನಿಮಾ ಮಾಡಲಿಲ್ಲ. ನೀತಿ ಬೋಧನೆ ಅವರ ಉದ್ದೇಶವಾಗಿತ್ತು. ಸತ್ಯ ಮತ್ತು ಧರ್ಮ ಅವರ ಎರಡು ಕಣ್ಣುಗಳಾಗಿದ್ದವು. ಹಾಗಾಗಿ, ಅವರ ಸಿನಿಮಾಗಳು ಸಮಾಜ ಕಟ್ಟುವ ಕೆಲಸ ಮಾಡಿದವು ಎಂದರು.
ಪರಭಾಷಾ ಚಿತ್ರಗಳಲ್ಲಿ ನಟಿಸಿದ್ದರೆ ಅವರು ಮತ್ತಷ್ಟು ಆಸ್ತಿ ಸಂಪಾದನೆ ಮಾಡಬಹುದಿತ್ತು. ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಆದರೆ, ಕನ್ನಡದ ಮೇಲಿನ ಅವರ ಅಭಿಮಾನದಿಂದ ಅವರು ಒಪ್ಪಲಿಲ್ಲ. ಆಮಿಷಗಳಿಗೆ ಈಡಾಗಲಿಲ್ಲ. ಪ್ರಶಸ್ತಿಗಳಿಗೆ ಜಪಿಸಲಿಲ್ಲ. ಪ್ರಶಸ್ತಿಗಳಿಗೆ ರಾಜಕುಮಾರ್ ಅವರಿಂದಾಗಿ ಗೌರವ ಹೆಚ್ಚಿತು ಎಂದು ಅಭಿಪ್ರಾಯಪಟ್ಟರು.
ಮೈಸೂರು ಆರ್ಟ್ಸ್ ಗ್ಯಾಲರಿ ಅಧ್ಯಕ್ಷ ಎಲ್.ಶಿವಲಿಂಗಯ್ಯ ಮಾತನಾಡಿ, ರಾಜಕುಮಾರ್ ಅವರಿಂದ ಬೆಳೆದ ಅವರ ಕುಟುಂಬ ಸದಸ್ಯರು ಗಾಜನೂರಿನಲ್ಲಿ ಒಂದು ಕಲಾ ಗ್ಯಾಲರಿ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಚಿತ್ರ ಸಂಗ್ರಹಿಸಿರುವ ಬೇಗೂರು ಎಲ್.ಮೂರ್ತಿ ಮಾತನಾಡಿ, ‘6 ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ನಾನು ಸಂಗ್ರಹಿಸಿರುವೆ. ಇಲ್ಲಿ ಆಯ್ದ 600 ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ರಾಜಕುಮಾರ್ ಅವರ ಅಭಿಮಾನಿಯಾದ ನನ್ನ ಕಿರು ಸೇವೆ ಇದು’ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆವಹಿಸಿದ್ದರು. ಕದಂಬ ರಂಗವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಯು.ಎಸ್.ರಾಮಣ್ಣ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.