ADVERTISEMENT

ದುಬಾರಿ ಮೈಸೂರು | ಮಧ್ಯಮ ವರ್ಗಕ್ಕೆ ನಿವೇಶನ, ಮನೆ ಗಗನಕುಸುಮ!

ಮೈಸೂರು ತಾಲ್ಲೂಕಿನ ಗಡಿಯನ್ನೂ ದಾಟಿ ಚಾಚಿಕೊಂಡಿರುವ ರಿಯಲ್‌ ಎಸ್ಟೇಟ್ ಉದ್ಯಮ

ಎಂ.ಮಹೇಶ
Published 2 ಸೆಪ್ಟೆಂಬರ್ 2024, 5:41 IST
Last Updated 2 ಸೆಪ್ಟೆಂಬರ್ 2024, 5:41 IST
ಮೈಸೂರು ನಗರದ ಹೊರವಲಯದ ಬಡಾವಣೆಯೊಂದರ ನೋಟ (ಸಾಂಕೇತಿಕ ಚಿತ್ರ)
ಮೈಸೂರು ನಗರದ ಹೊರವಲಯದ ಬಡಾವಣೆಯೊಂದರ ನೋಟ (ಸಾಂಕೇತಿಕ ಚಿತ್ರ)   

ಮೈಸೂರು: ಸ್ವಂತಕ್ಕೊಂದು ಬೆಚ್ಚನೆಯ ಮನೆ ಇರಬೇಕು ಎಂಬುದು ಎಲ್ಲ ವರ್ಗದ ಕುಟುಂಬದವರ ಕನಸು. ಇದನ್ನು ನನಸಾಗಿಸಿಕೊಳ್ಳಲು ಅವರು ಹೆಣಗಾಡುತ್ತಲೇ ಇರುತ್ತಾರೆ. ಆದರೆ, ಮಧ್ಯಮ ವರ್ಗದವರು ಮೈಸೂರು ನಗರದಲ್ಲಿ ಮನೆ ಹೊಂದುವ ಆಸೆ ಈಡೇರಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ನಿವೇಶನ ಮತ್ತು ಮನೆಯ ಬೆಲೆ ದುಬಾರಿಯಾಗಿರುವುದೇ ಇದಕ್ಕೆ ಕಾರಣ.

‘ಹೊರಗಿನ ಶ್ರೀಮಂತರ ಪ್ರವೇಶದ ಕಾರಣ’ದಿಂದ ನಿವೇಶನ ಹಾಗೂ ಮನೆಗಳಿಗೆ ಬಹಳ ಬೇಡಿಕೆ ಕಂಡುಬರುತ್ತಿದೆ. ಇದರ ಪರಿಣಾಮವಾಗಿಯೇ ರಿಯಲ್‌ ಎಸ್ಟೇಟ್ ಉದ್ಯಮವು ನಗರದೊಂದಿಗೆ ಹೊರವಲಯವನ್ನೂ ದಾಟಿ ತಾಲ್ಲೂಕಿನ ಗಡಿಯನ್ನೂ ಜಿಗಿದು ಚಾಚಿಕೊಂಡಿದೆ. ತಾಲ್ಲೂಕಿನ ಗಡಿಯನ್ನು ಸಂಪರ್ಕಿಸುವ ಎಲ್ಲ ದಿಕ್ಕುಗಳಲ್ಲೂ, ಎಲ್ಲ ಬಡಾವಣೆಗಳಲ್ಲೂ, ಹಳ್ಳಿಗಳಲ್ಲಿನ ಪ್ರದೇಶಗಳಲ್ಲೂ ನಿವೇಶನ ಬೆಲೆ ಗಗನಕ್ಕೇರಿದೆ. ಕಳೆದ ಮೂರ್ನಾಲ್ಕು ವರ್ಷಗಳಿಗೆ ಹೋಲಿಸಿದರೆ ಸರಾಸರಿ ಏರಿಕೆಯು ಶೇ 30ರಷ್ಟು ದಾಟಿದೆ. ಇದಕ್ಕೂ ಕಡಿವಾಣವೇ ಇಲ್ಲದಂತಾಗಿದೆ.

ಬಡ ಜನರಂತೂ ಇಲ್ಲಿ ನಿವೇಶನ ಅಥವಾ ಮನೆ ಖರೀದಿಸುವುದು ಅಥವಾ ಕಟ್ಟಿಕೊಳ್ಳುವುದು ಅಸಾಧ್ಯವೇ ಸರಿ ಎನ್ನಲಾಗುತ್ತಿದೆ. ಮಧ್ಯಮ ವರ್ಗದವರಿಗೆ ಆಸ್ತಿ ಖರೀದಿಯು ಹರಸಾಹಸದ ಕೆಲಸವೇ ಆಗಿದೆ. ಆದಾಗ್ಯೂ, ಮುಂದಡಿ ಇಟ್ಟವರು ಸಾಲದ ಸುಳಿಗೆ ಸಿಲುಕಿ ನರಳಾಡುತ್ತಿರುವುದು ಕಂಡುಬಂದಿದೆ ಎನ್ನುತ್ತಾರೆ ರಿಯಲ್‌ ಎಸ್ಟೇಟ್ ಏಜೆಂಟರು.

ADVERTISEMENT

ನಗರದ ಹೃದಯಭಾಗದಲ್ಲಿ ಹಾಗೂ ಆಸುಪಾಸಿನಲ್ಲಿ 20x30 ಚ.ಅಡಿ ಅಳತೆಯ ನಿವೇಶನಗಳು ಸಿಗುವುದಿಲ್ಲ. ಹೊಸದಾಗಿ ಬಡಾವಣೆಗಳಲ್ಲೂ ಅವುಗಳ ಪ್ರಮಾಣ ಕಡಿಮೆಯೇ. ಅವು ಲಾಭದಾಯಕ ಅಲ್ಲವಾದ್ದರಿಂದ ಮಾಡುವುದಕ್ಕೆ ಲೇಔಟ್ ಡೆವಲಪರ್‌ಗಳು ಮುಂದಾಗುವುದಿಲ್ಲ. ಹೀಗಾಗಿ, ಆ ಅಳತೆಯ ನಿವೇಶನಗಳನ್ನು ಬಯಸುವವರು ಹೊರವಲಯದಲ್ಲಿ ಅಥವಾ ಗ್ರಾಮಾಂತರ ಪ್ರದೇಶದ ಬಡಾವಣೆಗಳಿಗೇ ಹೋಗಬೇಕಾಗಿದೆ!

ನಗರದೊಳಗೆ ಖರೀದಿಗೆ ಖಾಲಿ ನಿವೇಶನಗಳೇ ದೊರೆಯುವುದಿಲ್ಲದಂತಹ ಸ್ಥಿತಿ ಇದೆ. ವರುಣ, ಚಿಕ್ಕಹಳ್ಳಿ, ಯಾಂದಹಳ್ಳಿ, ಭುಗತಗಳ್ಳಿ, ಮೆಲ್ಲಹಳ್ಳಿ, ವಾಜಮಂಗಲದವರೆಗೂ ಬಡಾವಣೆಗಳು ಅಭಿವೃದ್ಧಿಯಾಗಿವೆ. ವಾಜಮಂಗಲದಲ್ಲೇ 20x30 ಚ.ಅಡಿಯ ನಿವೇಶನಕ್ಕೆ ಸರಾಸರಿ ₹20 ಲಕ್ಷದಿಂದ ₹22 ಲಕ್ಷ ಬೆಲೆ ಇದೆ. ಕೆಲವು ವರ್ಷಗಳ ಹಿಂದಷ್ಟೇ ಅಲ್ಲಿ ₹35 ಲಕ್ಷದಿಂದ ₹40 ಲಕ್ಷ ಇದ್ದ 30x40 ಚ.ಅಡಿ ನಿವೇಶನ ಈಗ ಅರ್ಧ ಕೋಟಿ ರೂಪಾಯಿ ದಾಟಿದೆ. ತಿ.ನರಸೀಪುರ ರಸ್ತೆಯಲ್ಲಿ ರಿಯಲ್‌ ಎಸ್ಟೇಟ್ ಕೀಳನಪುರದವರೆಗೂ ಹೋಗಿದೆ. ಬನ್ನೂರು ರಸ್ತೆಯಲ್ಲಿ ಮೆಲ್ಲಹಳ್ಳಿ ದಾಟಿದೆ. ಹುಣಸೂರು ರಸ್ತೆಯಲ್ಲಿ ಹುಣಸೂರುವರೆಗೂ ಚಾಚಿಕೊಂಡಿದೆ. ಎಚ್‌.ಡಿ. ಕೋಟೆ ರಸ್ತೆಯಲ್ಲಿ ಜಯಪುರದವರೆಗೆ ತಲುಪಿದೆ. ನಂಜನಗೂಡು ಹಾಗೂ ಮೈಸೂರು ಅವಳಿ ನಗರಗಳಾಗಿ ಬೆಳೆಯುತ್ತಿವೆ. ಇಲವಾಲದ ಹೊರವಲಯದಲ್ಲೂ ಸರಾಸರಿ 20x30 ಚ.ಅಡಿಯ ನಿವೇಶನ ₹20 ಲಕ್ಷಕ್ಕೆ ಏರಿಕೆಯಾಗಿದೆ. ಮಹದೇವಪುರ ರಸ್ತೆಯಲ್ಲಿ ರಮ್ಮನಹಳ್ಳಿಯಿಂದಾಚೆಗೂ ಲೇಔಟ್‌ಗಳು ಅಭಿವೃದ್ಧಿಗೊಂಡಿವೆ. ಸಾಕಷ್ಟು ಬೇಡಿಕೆ ಇರುವ ಕಾರಣದಿಂದಲೇ ಹೊಸ ಹೊಸ ಬಡಾವಣೆಗಳು ಅಭಿವೃದ್ಧಿಯಾಗುತ್ತಿವೆ ಎಂದು ಡೆವಲಪರ್‌ವೊಬ್ಬರು ತಿಳಿಸಿದರು.

‘ಮೈಸೂರು ದುಬಾರಿ ಆಗಿರುವುದಂತೂ ನಿಜ. ಉದ್ಯೋಗ ಅವಕಾಶಗಳು ಮೊದಲಾದ ಕಾರಣದಿಂದ ಬೇರೆ ಬೇರೆ ಕಡೆಯವರು ಇಲ್ಲಿಗೆ ಬರುತ್ತಿದ್ದಾರೆ. ನಿವೃತ್ತರು ಇಲ್ಲೊಂದು ಮನೆ ಅಥವಾ ನಿವೇಶನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಸೆಟ್ಲ್‌ ಆಗಲು ಪ್ರಶಸ್ತ ನಗರವಾದ್ದರಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳವರು, ಕೇರಳ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ಬಂದು ಆಸ್ತಿ ಖರೀದಿಸುತ್ತಿದ್ದಾರೆ. ಇದರಿಂದ ಬೆಲೆ ಏರಿಕೆಯಾಗುತ್ತಲೇ ಇದೆ’ ಎನ್ನುತ್ತಾರೆ ನಗರದ ಬ್ಯಾಂಕ್‌ವೊಂದರಲ್ಲಿ ವ್ಯವಸ್ಥಾಪಕರಾಗಿರುವ ಸುರೇಶ್.

‘ಮನೆ ಹಾಗೂ ನಿವೇಶನಗಳಿಗೆ ಬಹಳ ಬೇಡಿಕೆ ಬಂದಿರುವುದರಿಂದಾಗಿ ಬ್ಯಾಂಕ್‌ಗಳಲ್ಲಿ ಗೃಹಸಾಲ ನೀಡಿಕೆಯ ಪ್ರಮಾಣವೂ ಜಾಸ್ತಿಯಾಗಿದೆ. ನಾನ್ ಬ್ಯಾಂಕಿಂಗ್‌ ಫೈನಾನ್ಸ್‌ ಕಂಪನಿಗಳು ಕೂಡ ಹುಟ್ಟಿಕೊಂಡಿವೆ. ಕಳೆದ ಎರಡು ವರ್ಷಗಳಲ್ಲಿ ಅಂತಹ ಸಾಕಷ್ಟು ಹೊಸ ಕಂಪನಿಗಳು ಬಂದಿವೆ. ಸಾಲವನ್ನೂ ಕೊಡುತ್ತಿವೆ. ಇದರಿಂದ ಬ್ಯಾಂಕ್‌ಗಳ ವಹಿವಾಟು ಕೂಡ ಜಾಸ್ತಿಯಾಗಿದೆ. ನಿರ್ಮಾಣ ಕ್ಷೇತ್ರದಲ್ಲಿನ ಅಗತ್ಯಗಳಾದ ಸಿಮೆಂಟ್‌, ಕಬ್ಬಿಣ, ಮರಳು, ಎಲೆಕ್ಟ್ರಿಕ್‌ ಸಾಮಗ್ರಿಗಳು, ಗೃಹೋಪಯೋಗಿ ವಸ್ತುಗಳು ಮೊದಲಾದವುಗಳ ಬೆಲೆಯೂ ಜಾಸ್ತಿಯಾಗಿದೆ’ ಎಂದು ಅವರು ತಿಳಿಸಿದರು.

‘2006ರಲ್ಲಿ ಕಾಳಿದಾಸ ರಸ್ತೆಯ ಬಳಿಯಲ್ಲಿ ಡ್ಯೂಪ್ಲೆಕ್ಸ್‌ ಮನೆಯೊಂದು ₹40 ಲಕ್ಷಕ್ಕೆ ಮಾರಾಟಕ್ಕಿತ್ತು. ಅದೇ ಆಸ್ತಿಯ ಮೌಲ್ಯವೀಗ ₹2.50 ಕೋಟಿಗೂ ಜಾಸ್ತಿಯಾಗಿದೆ. ಇದನ್ನು ಗಮನಿಸಿದರೆ ಮೈಸೂರು ಎಷ್ಟು ಬೆಳೆಯುತ್ತಿದೆ, ದುಬಾರಿಯಾಗುತ್ತಿದೆ ಎಂಬುದನ್ನು ಗಮನಿಸಬಹುದು’ ಎಂದು ಜಯಲಕ್ಷ್ಮಿಪುರಂನ ನಿವಾಸಿ ಸುಧಾಕರ್‌ ಹೇಳಿದರು.

ಸೌಲಭ್ಯ ಇದೆಯೋ ಇಲ್ಲವೋ?!

ಮುಡಾದಿಂದ ನಿವೇಶನ ಬಯಸಿ ಈವರೆಗೆ 85 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ನಿವೇಶನ ಕೊಡುವ ಕೆಲಸವನ್ನು ಪ್ರಾಧಿಕಾರವು ನಿರೀಕ್ಷಿತ ಪ್ರಮಾಣದಲ್ಲಿ ಮಾಡಿಲ್ಲ. ಪರಿಣಾಮ ಖಾಸಗಿ ಡೆವಲಪರ್‌ಗಳು ಹುಟ್ಟುಕೊಂಡಿದ್ದಾರೆ. ರೆವಿನ್ಯೂ ಬಡಾವಣೆಗಳು ಸಾಕಷ್ಟು ಅಭಿವೃದ್ಧಿಯಾಗಿವೆ. ಅಲ್ಲಿ ಮೂಲಸೌಲಭ್ಯ ಇದೆಯೋ ಇಲ್ಲವೋ ನಿವೇಶನ ಖರೀದಿಸುವವರು ಹೆಚ್ಚುತ್ತಿದ್ದಾರೆ. ಭೂಮಿಯ ಮೇಲೆ ಹೂಡಿಕೆ ಮಾಡುವವರೂ ಜಾಸ್ತಿಯಾಗುತ್ತಿದ್ದಾರೆ. ಇದೆಲ್ಲ ಕಾರಣದಿಂದಾಗಿ ನಿವೇಶನ ಮನೆಗಳಿಗೆ ಸಾಕಷ್ಟು ಬೇಡಿಕೆ ಕಂಡುಬಂದಿದೆ. ಪರಿಣಾಮ ರಿಯಲ್ ಎಸ್ಟೇಟ್ ಉದ್ಯಮವೂ ಬಲಗೊಳ್ಳುತ್ತಿದೆ ಎಂದು ತಿಳಿಸುತ್ತಾರೆ ಈ ಉದ್ಯಮದವರು.

ಹೇಗಿದೆ ಸರಾಸರಿ ದರ?

ರಿಯಲ್‌ ಎಸ್ಟೇಟ್‌ ಉದ್ಯಮದವರ ಮಾಹಿತಿ ಪ್ರಕಾರ ನಗರ ಹಾಗೂ ಸುತ್ತಮುತ್ತ ಈಗ 20x30 ಚ.ಅಡಿಯ ಒಂದು ನಿವೇಶನಕ್ಕೆ ಸರಾಸರಿ ₹25 ಲಕ್ಷ– ₹30 ಲಕ್ಷ 30x40 ಚ.ಅಡಿಯ ನಿವೇಶನಕ್ಕೆ ಸರಾಸರಿ ₹40 ಲಕ್ಷದಿಂದ ₹45 ಲಕ್ಷ ಇದೆ. ಮನೆಯಾದರೆ ಹೊರವಲಯದಲ್ಲೇ 20x30 ಚ.ಅಡಿ ಸಿಂಗಲ್‌ ಫ್ಲೋರ್‌ ಇದ್ದರೆ ಸರಾಸರಿ ₹45 ಲಕ್ಷದಿಂದ ₹50 ಲಕ್ಷಕ್ಕೆ ಏರಿಕೆಯಾಗಿದೆ. 2 ಫ್ಲೋರ್‌ ಇದ್ದರೆ ₹60 ಲಕ್ಷಕ್ಕೂ ಜಾಸ್ತಿಯಾಗುತ್ತದೆ. 30x40 ಚ.ಅಡಿಯಲ್ಲಿ ನಿರ್ಮಿಸಿದ ಮನೆಗಾದರೆ ಸಿಂಗಲ್‌ ಫ್ಲೋರ್‌ಗೆ ಸರಾಸರಿ ₹70 ಲಕ್ಷ ಡಬಲ್‌ ಫ್ಲೋರ್‌ನದ್ದಾದರೆ ₹1 ಕೋಟಿಯಿಂದ ₹1.20 ಕೋಟಿವರೆಗೂ ತಲುಪಿದೆ.

ರೆವಿನ್ಯೂ ಬಡಾವಣೆಗಳಲ್ಲೂ...

ತಿ.ನರಸೀಪುರ ರಸ್ತೆಯ ಮೇಗಳಾಪುರದಲ್ಲೇ ಪ್ರತಿ ಚದರಡಿಗೆ ₹1700– ₹1900 ಇದೆ. ಮೈಸೂರು ತಾಲ್ಲೂಕಿನ ಗಡಿಯಲ್ಲಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಚದರಡಿಗೆ ಸರಾಸರಿ ₹1500ರಿಂದ ₹1600 ಇದೆ. ನಗರದೊಳಗಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಪ್ರತಿ ಚದರಡಿಗೆ ಸರಾಸರಿ ₹8 ಸಾವಿರದಿಂದ ₹10 ಸಾವಿರ ಇದೆ. ಕುವೆಂಪುನಗರ ಸರಸ್ವತಿಪುರಂ ರಾಮಕೃಷ್ಣನಗರ ದಟ್ಟಗಳ್ಳಿ ಜೆ.ಪಿ.ನಗರ ವಿಜಯನಗರದಂತಹ ಬಡಾವಣೆಗಳಲ್ಲಿ 30X40 ಚ.ಅಡಿ ನಿವೇಶನವೇ ₹ 1 ಕೋಟಿಯನ್ನೂ ದಾಟಿದೆ. ನಗರದ ಹೊರಗಿನ ಹೂಟಗಳ್ಳಿ ಹಿನಕಲ್‌ನಲ್ಲೂ 30x40 ಚ.ಅಡಿ ನಿವೇಶನಕ್ಕೆ ₹ 40 ಲಕ್ಷ ತಲುಪಿದೆ. ಆಲನಹಳ್ಳಿ ಯರಗನಹಳ್ಳಿ ಲಲಿತಾದ್ರಿಪುರ ರಾಘವೇಂದ್ರ ನಗರ ಗಿರಿದರ್ಶಿನಿ ಲೇಔಟ್ ನೇತಾಜಿ ನಗರ ನಾಡನಹಳ್ಳಿ ಚಿಕ್ಕಹಳ್ಳಿ ಮೊದಲಾದ ಕಡೆಗಳಲ್ಲಿನ ರೆವಿನ್ಯೂ (ಕಂದಾಯ) ಬಡಾವಣೆಗಳಲ್ಲಿ ಐದಾರು ವರ್ಷಗಳ ಹಿಂದೆ ₹ 15 ಲಕ್ಷದಿಂದ ₹20 ಲಕ್ಷಕ್ಕೆ ಸಿಗುತ್ತಿದ್ದ 30x40 ಚ.ಅಡಿ ನಿವೇಶನಗಳ ಬೆಲೆ ಈಗ ₹30 ಲಕ್ಷವನ್ನೂ ದಾಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.