ಡಬ್‌ಸ್ಮ್ಶಾಶ್ ಎಂಬುದು ಟ್ರೆಂಡ್ ಆಗಿಬಿಟ್ಟಿದೆ. ತಮ್ಮಿಷ್ಟದ ನಟನಟಿಯರ ಚಿತ್ರಗಳ ಹಾಡು, ಸಂಭಾಷಣೆಗಳಿಗೆ ಅಭಿನಯಿಸಿ, ಆ ವಿಡಿಯೊವನ್ನು ಪೋಸ್ಟ್ ಮಾಡುವುದೇ ಒಂದು ಕ್ರೇಜ್ ಆಗಿದೆ.
ಕನ್ನಡ ಚಲನಚಿತ್ರ ಗೀತೆಯ ಸಾಹಿತ್ಯ ಅಥವಾ ಸಂಭಾಷಣೆಗೆ ತಕ್ಕಂತೆ ಅಭಿನಯಿಸಿ, ಆ ವಿಡಿಯೊವನ್ನು ಕೊಲಾಜ್ ಮಾಡಿದರೆ ಹೇಗಿರುತ್ತದೆ?
ಹೌದು, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಈಗ ಇಂಥದ್ದೊಂದು ಡಬ್‌ಸ್ಮ್ಯಾಶ್ ಎಂಬ ಪ್ರಯೋಗ ಹೆಚ್ಚು ಜನಪ್ರಿಯವಾಗುತ್ತಿದೆ. ಸಾಮಾಜಿಕ ಜಾಲತಾಣವನ್ನು ಸದಾ ತಡಕಾಡುವ ಯುವಸಮೂಹ ಇದೀಗ ಡಬ್‌ಸ್ಮ್ಯಾಶ್ ಬಲೆಗೆ ಬಿದ್ದಿದೆ.
ಡಬ್‌ಸ್ಮ್ಶಾಶ್ ಎಂಬುದು ಟ್ರೆಂಡ್ ಆಗಿಬಿಟ್ಟಿದೆ. ತಮ್ಮಿಷ್ಟದ ನಟನಟಿಯರ ಚಿತ್ರಗಳ ಹಾಡು, ಸಂಭಾಷಣೆಗಳಿಗೆ ಅಭಿನಯಿಸಿ, ಆ ವಿಡಿಯೊವನ್ನು ಪೋಸ್ಟ್ ಮಾಡುವುದು ಕ್ರೇಜ್ ಆಗಿಬಿಟ್ಟಿದೆ. ಜೊತೆಗೆ ಇಬ್ಬರೂ ಸೇರಿ ಒಂದೇ ಹಾಡು ಅಥವಾ ಸಂಭಾಷಣೆಗೆ ಡಬ್ ಸ್ಮ್ಯಾಶ್ ಜುಗಲ್‌ಬಂದಿ ಜನಪ್ರಿಯವಾಗಿದೆ.
ಜನಸಾಮಾನ್ಯರಷ್ಟೇ ಅಲ್ಲದೇ ಕಿರುತೆರೆ, ಸಿನಿಮಾ ನಟರು ಡಬ್‌ಸ್ಮ್ಯಾಶ್ ಮಾಯೆಯೊಳಗೆ ಸಿಲುಕಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ನಟರು ಸಿನಿಮಾ ಗೀತೆಗಳಿಗೆ ಡಬ್‌ಸ್ಮ್ಯಾಶ್ ಮಾಡಿ ಯೂಟ್ಯೂಬ್‌ನಲ್ಲಿ ಬಿಟ್ಟಿರುವುದು ವೈರಲ್ ಆಗಿದೆ.
ಇನ್ನೂ ನಟ ಗಣೇಶ್ ಅವರ ಮುದ್ದುಮಗಳು ಪ್ರೇಮಲೋಕ ಚಿತ್ರದ ‘ಹಲೋ ಮೈ ಲವ್ಲಿ ಲೇಡಿ’ ಎಂಬ ಹಾಡಿಗೆ ಡಬ್‌ಸ್ಮ್ಯಾಶ್ ಮಾಡಿ ಪೋಸ್ಟ್ ಮಾಡಿದ್ದು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಡಬ್‌ಸ್ಮ್ಯಾಶ್ ಮಾಡಿ ಸಾವಿರಾರು ಮಂದಿ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳಬೇಕು ಎಂಬ ಹಂಬಲದಿಂದ ಕೆಲವರು ಈ ತಂತ್ರವನ್ನು ಉಪಯೋಗಿಸುತ್ತಿದ್ದಾರೆ. ಮತ್ತೆ ಕೆಲವರು ಹವ್ಯಾಸಕ್ಕಾಗಿ ಮಾಡುತ್ತಿದ್ದಾರೆ.
ಕನ್ನಡದಲ್ಲಿ ಡಾ.ರಾಜಕುಮಾರ್ ಅಭಿನಯದ ಬಬ್ರುವಾಹನ ಸಿನಿಮಾದ ಕ್ಲೈಮ್ಯಾಕ್ಸ್‌ನ ಸಂಭಾಷಣೆ, ಸಂಪತ್ತಿಗೆ ಸವಾಲ್ ಚಿತ್ರದ ಮಂಜುಳಾ ಜೊತೆಗಿನ ಜಗಳದ ಸನ್ನಿವೇಶ, ರವಿಂಚಂದ್ರನ್ ಅಭಿನಯದ ಪ್ರೇಮಲೋಕ ಚಿತ್ರದ ಹಾಡುಗಳು ಹಾಗೂ ಇತ್ತೀಚೆಗೆ ತೆರೆಕಂಡು ಯುವಕರ ಮನಗೆದ್ದ ಕಿರಿಕ್ ಪಾರ್ಟಿ ಸಿನಿಮಾ ಹಾಡುಗಳು ಡಬ್‌ಸ್ಮ್ಯಾಶ್‌ಗೆ ವಸ್ತುಗಳಾಗುತ್ತಿವೆ.
ಪ್ಲೇಸ್ಟೋರ್‌ನಲ್ಲಿ ಈಗ ಡಬ್‌ಸ್ಮ್ಯಾಶ್‌ಗೆಂದೆ ಹಲವಾರು ಆ್ಯಪ್‌ಗಳು ಹುಟ್ಟಿಕೊಂಡಿವೆ. ಇವುಗಳ ಸಹಾಯದಿಂದ ಸುಲಭವಾಗಿ ಡಬ್‌ಸ್ಮ್ಯಾಶ್ ಮಾಡಿ ಪೋಸ್ಟ್ ಮಾಡಬಹುದು.
ಮೈಸೂರಿನವರೇ ಆದ ವಿದ್ಯಾರ್ಥಿನಿ, ಬಿಗ್‌ಬಸ್ ಖ್ಯಾತಿಯ ನಿವೇದಿತಾ ಗೌಡ ಡಬ್‌ಸ್ಮ್ಯಾಶ್‌ನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾದವರು. ಇವರು ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಆಯ್ಕೆಯಾಗುವುದಕ್ಕೂ ಮುಂಚೆ ಡಬ್‌ಸ್ಮ್ಯಾಶ್ ಮಾಡಿ, ಪೋಸ್ಟ್ ಮಾಡುತ್ತಿದ್ದ ವಿಡಿಯೊಗಳಿಗೆ 9.5 ಲಕ್ಷ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ‘ಈ ದಾಖಲೆ ಮಾಡಿದ ವಿಶ್ವದ ಎರಡನೆಯವಳು ನಾನಾಗಿದ್ದೆ’ ಎಂದು ಹೇಳಿಕೊಳ್ಳುತ್ತಾರೆ ನಿವೇದಿತಾ.
ಎಲ್ಲವೂ ಹವ್ಯಾಸಕ್ಕಾಗಿ
ಡಬ್‌ಸ್ಮ್ಯಾಶ್‌ಅನ್ನು ಹವ್ಯಾಸಕ್ಕಾಗಿ ಮಾಡುತ್ತಿದ್ದೆ. ಲೈಕ್ ಎಂಬ ಆ್ಯಪ್ ನೆರವಿನಿಂದ ವಿಡಿಯೊ ಎಡಿಟ್ ಮಾಡುತ್ತಿದ್ದೆ. ಲಕ್ಷಾಂತರ ಮಂದಿ ಫಾಲೋವರ್ಸ್ ಇದ್ದಾರೆ ಅಂತ ಗೊತ್ತಾಗಿ ಖುಷಿಯಾಗುತ್ತಿತ್ತು. ನಾನು ಈ ಪ್ರಯೋಗ ಆರಂಭಿಸಿದಾಗ ಇಷ್ಟೊಂದು ಫೇಮಸ್ ಆಗಿರಲಿಲ್ಲ. ಈ ಹವ್ಯಾಸಕ್ಕೆ ನನ್ನ ಸ್ನೇಹಿತರು ಬೆಂಬಲಿಸುತ್ತಿದ್ದರು. ಎಲ್ಲಾ ಭಾಷೆಯಲ್ಲೂ ಡಬ್‌ಸ್ಮ್ಯಾಶ್ ಮಾಡಿದ್ದೇನೆ. ಸಿನಿಮಾಗೆ ಅವಕಾಶ ಸಿಗಲಿ ಅಂಥ ಮಾಡಿದ್ದಲ್ಲ, ಬಿಡುವಿನ ವೇಳೆ ಇಷ್ಟಪಟ್ಟು ಮಾಡುತ್ತಿದ್ದೆ’ ಎಂದು ಡಬ್‌ಸ್ಮ್ಯಾಶ್ ಆರಂಭಿಸಿದ ಬಗೆಯನ್ನು ವಿವರಿಸಿದರು ನಿವೇದಿತಾ.
ಅಮೃತಧಾರೆ ಚಿತ್ರದ ‘ಈ ಅಮೃತಧಾರೆ’ ಗೀತೆಯಿಂದ ಡಬ್‌ಸ್ಮ್ಯಾಶ್ ಆರಂಭಿಸಿದ ನಿವೇದಿತಾ ಲೆಕ್ಕವಿಲ್ಲದಷ್ಟು ಹಾಡಿನ ತುಣುಕುಗಳು ಹಾಗೂ ಸಂಭಾಷಣೆಗಳಿಗೆ ಅಭಿನಯಿಸಿ ಮನೆಮಾತಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ದಿನದಿನವೂ ಹೊಸತು ನೋಡುತ್ತೇವೆ. ಆದರೆ ಡಬ್‌ಸ್ಮ್ಯಾಶ್ ಎಂಬುದೀಗ ಮಕ್ಕಳಿಂದ ಎಲ್ಲ ವರ್ಗದವರನ್ನೂ ಕಾಡುತ್ತಿದೆ, ಜೊತೆಗೆ ಮನರಂಜನೆ ನೀಡುತ್ತಿರುವುದು ಸತ್ಯ. ಇಂಥ ಹಲವು ಕನ್ನಡದ ಡಬ್‌ಸ್ಮ್ಯಾಶ್ ವಿಡಿಯೊಗಳು ಯೂಟ್ಯೂಬ್‌ನಲ್ಲಿ ಲಭ್ಯವಿವೆ. ನೀವು ನೋಡಿ ಆನಂದಿಸಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.