ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಚಾಮಲಾಪುರ ಶಾಲೆಯ ಮುಖ್ಯಶಿಕ್ಷಕ ಸಾಲುಂಡಿ ದೊರೆಸ್ವಾಮಿ, ತಮಗೆ ದೊರೆತ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಹಣ ಹಾಗೂ ವೇತನದಲ್ಲಿ ಮಕ್ಕಳಿಗೆ ಟ್ರ್ಯಾಕ್‌ಸೂಟ್ ಕೊಡುಗೆಯಾಗಿ ನೀಡಿದ್ದಾರೆ.
ಪ್ರಸಕ್ತ ಶೈಕ್ಷಣಿಕ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಅವರಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ₹5 ಸಾವಿರ ಬಂದಿತ್ತು. ಅದರೊಂದಿಗೆ ವೇತನದ ₹5 ಸಾವಿರ ಸೇರಿಸಿ ಒಟ್ಟು ₹10 ಸಾವಿರದಲ್ಲಿ ಟ್ರ್ಯಾಕ್‌ಸೂಟ್ ಹೊಲಿಸಿಕೊಟ್ಟು, ಗುರುವಾರ ಅವುಗಳನ್ನು ವಿತರಿಸಿ ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸಿದರು.
ಹಿಂದುಳಿದ ತಾಲ್ಲೂಕಿನ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ 25 ಮಕ್ಕಳು ದಾಖಲಾತಿ ಪಡೆದಿದ್ದಾರೆ. 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ತಲಾ ಟ್ರ್ಯಾಕ್‌ಸೂಟ್‌ಗೆ ₹425 ತಗುಲಿದೆ. ಮುಖ್ಯ ಶಿಕ್ಷಕರ ಈ ಸೇವಾ ಕಾರ್ಯ ಪೋಷಕರು ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಮಕ್ಕಳ ಪ್ರೀತಿ ಮುಂದೆ...: ಟ್ರ್ಯಾಕ್‌ಸೂಟನ್ನು ಬುಧವಾರ ಹಾಗೂ ಶನಿವಾರ ಧರಿಸಿ ಬರುವಂತೆ ಮಕ್ಕಳಿಗೆ ತಿಳಿಸಲಾಗಿದೆ. ಉಳಿದ ದಿನಗಳಲ್ಲಿ ಸರ್ಕಾರ ನೀಡುವ ಸಮವಸ್ತ್ರವನ್ನು ಧರಿಸಿ ಬರಬಹುದು.
‘ಟ್ರ್ಯಾಕ್‌ಸೂಟ್‌ಗಳನ್ನು ವಿತರಿಸಿದಾಗ ಮಕ್ಕಳು ತೋರಿಸಿದ ಪ್ರೀತಿ ಮುಂದೆ ನಾನು ವೆಚ್ಚ ಮಾಡಿದ ಹಣ ಏನೇನೂ ಅಲ್ಲ ಎನಿಸಿದೆ. ಬಹಳ ದಿನಗಳಿಂದಲೂ ಈ ಆಸೆ ಇತ್ತು. ಪ್ರಶಸ್ತಿಯಿಂದ ಬಂದ ಮೊತ್ತ ಆಸೆಗೆ ನೀರೆರೆಯಿತು’ ಎಂದು ದೊರೆಸ್ವಾಮಿ ಹರ್ಷ ವ್ಯಕ್ತಪಡಿಸಿದರು.
ಮೈಸೂರು ತಾಲ್ಲೂಕಿನ ಡಿ.ಸಾಲುಂಡಿ ಗ್ರಾಮದ ಅವರು, ಚಾಮಲಾಪುರ ಶಾಲೆಯಲ್ಲಿ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೇಖನ ಹಾಗೂ ಕಲಿಕಾ ಸಾಮಗ್ರಿಗಳನ್ನು ಪ್ರತಿ ವರ್ಷವೂ ದಾನಿಗಳ ಮೂಲಕ ಕೊಡಿಸಿ, ಬಡ ಮಕ್ಕಳಿಗೆ ನೆರವಾಗುತ್ತಿದ್ದಾರೆ.
ದಾನಿಗಳಿಂದ ಕಲಿಕಾ ಸಾಮಗ್ರಿ: ‘ಇದನ್ನು ದಾಸೋಹದಂತೆ ಮಾಡುತ್ತಿದ್ದೇನೆ. ದಾನಿಗಳು ಪ್ರತಿ ವರ್ಷವೂ ಕೈಜೋಡಿಸುತ್ತಿದ್ದಾರೆ. ಇದು ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿದ್ದು, ಅವರ ಸೇವೆ ಸ್ಮರಣೀಯವಾದುದು. ಕಾನ್ವೆಂಟ್‌ಗಳಂತೆಯೇ ನಮ್ಮ ಮಕ್ಕಳೂ ಟ್ರ್ಯಾಕ್‌ಸೂಟ್ ಧರಿಸಿ ಬರಲೆಂಬ ಆಶಯದಲ್ಲಿ ಸ್ವಂತ ಹಣದಲ್ಲಿ ಕೊಡಿಸಿದೆ’ ಎಂದು ದೊರೆಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಮಾದರಿ ಕಾರ್ಯಕ್ಕೆ ಹೋಟೆಲ್ ಉದ್ಯಮಿ ಬೈಪಾಸ್ ಮಂಜುನಾಥ್, ಎಂಜಿನಿಯರ್ ಅಭಿಷೇಕ್, ನೆರೆಹೊರೆಯ ಶಾಲೆಗಳ ಮುಖ್ಯಶಿಕ್ಷಕರಾದ ಎಂ.ಮರಿಕಾಳಯ್ಯ, ಶ್ರೀ ಪ್ರೇಮಕುಮಾರ್, ಪೃಥ್ವಿ ಬಿ.ಗೌಡ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ವಿಜಯಕುಮಾರಿ, ಸದಸ್ಯರಾದ ಸ್ವಾಮಿಶೆಟ್ಟಿ, ಮಹಾದೇವು, ನಿಂಗಶೆಟ್ಟಿ, ಮಂಜುನಾಥ್, ಶಿವರಾಜು, ಸುಕನ್ಯಾ ಮಂಜುನಾಥ್, ಪುಟ್ಟಸ್ವಾಮಿ, ವಕೀಲ ಮನು, ಸಹ ಶಿಕ್ಷಕ ಡಿ.ನಾಗರಾಜು ಸಾಕ್ಷಿಯಾದರು.
ನನಗೆ ಉತ್ತಮ ಶಿಕ್ಷಕ ಪ್ರಶಸ್ತಿ ಬರಲು ಶಾಲೆಯ ಮಕ್ಕಳೇ ಕಾರಣ. ಹಾಗಾಗಿ ಆ ಹಣವನ್ನು ಅವರಿಗಾಗಿಯೇ ವಿನಿಯೋಗಿಸಿದ್ದು ಖುಷಿ ತಂದಿದೆ.–ಸಾಲುಂಡಿ ದೊರೆಸ್ವಾಮಿ, ಮುಖ್ಯ ಶಿಕ್ಷಕ ಚಾಮಲಾಪುರ ಸರ್ಕಾರಿ ಶಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.