ADVERTISEMENT

ಅಕ್ಷರ ವಂಚಿತರಿಗೆ ಶಿಕ್ಷಣ; ಮಠಗಳ ಸೇವೆ ಅನನ್ಯ- ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2023, 11:07 IST
Last Updated 29 ಆಗಸ್ಟ್ 2023, 11:07 IST
ಸುತ್ತೂರು ಶಾಖಾ ಮಠದಲ್ಲಿ ಮಂಗಳವಾರ ನಡೆದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಮಹೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಸುತ್ತೂರು ಶಾಖಾ ಮಠದಲ್ಲಿ ಮಂಗಳವಾರ ನಡೆದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಮಹೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.   

ಮೈಸೂರು: ‘ಚಾತುರ್ವರ್ಣ ವ್ಯವಸ್ಥೆಯ ಕಾರಣಕ್ಕೆ ಶೂದ್ರರು ಸಾವಿರಾರು ವರ್ಷಗಳ ಕಾಲ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಸಮಾಜದಲ್ಲಿ ಅಸಮಾನತೆ ನೆಲೆಗೊಂಡಿತ್ತು. ಸ್ವಾತಂತ್ರ್ಯ ನಂತರ ಅಸಮಾನತೆ ತೊಡೆದು ಹಾಕಲು ಸರ್ಕಾರದೊಂದಿಗೆ ಮಠಮಾನ್ಯಗಳು ಕೈಜೋಡಿಸಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಸುತ್ತೂರು ಶಾಖಾ ಮಠದಲ್ಲಿ ಮಂಗಳವಾರ ನಡೆದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜೇಂದ್ರ ಶ್ರೀಗಳು ಯಾವುದೇ ಧರ್ಮ, ಜಾತಿ ಭೇದವಿಲ್ಲದೇ ಸಾವಿರಾರು ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣವನ್ನು ನೀಡಿದರು. ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಹಳ್ಳಿಗಳ ಬಡಮಕ್ಕಳಿಗೆ ವಿದ್ಯಾದಾನ ಮಾಡಿದರು. ಅವರು ಹಾಕಿಕೊಟ್ಟ ಅಡಿಪಾಯದಿಂದಲೇ ಮಠವು ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದಿದೆ. ನಾಡಿನ ಸಾವಿರಾರು ಜಾತಿಗಳ ಲಕ್ಷಾಂತರ ವಿದ್ಯಾರ್ಥಿಗಳು ಅನ್ನ, ಅಕ್ಷರ ದಾಸೋಹ ‍ಪಡೆದು ಉನ್ನತ ಸ್ಥಾನಕ್ಕೇರಿದ್ದಾರೆ’ ಎಂದು ಸ್ಮರಿಸಿದರು.

ADVERTISEMENT

‘ಶಿಕ್ಷಣ ಪ್ರತಿಯೊಬ್ಬರ ಹಕ್ಕು ಎಂದು ಸಂವಿಧಾನವೇ ಹೇಳಿದೆ. ಗುಣಮಟ್ಟದ ಶಿಕ್ಷಣವಿಲ್ಲದಿದ್ದರೆ ವ್ಯವಸ್ಥೆಯನ್ನು ಸುಧಾರಿಸಲಾಗದು. ಕುವೆಂಪು ಅವರ ವಿಶ್ವಮಾನವ ದೃಷ್ಟಿಕೋನದಲ್ಲಿ ಶಿಕ್ಷಣವನ್ನು ನೀಡಬೇಕಾದ್ದು, ಎಲ್ಲರ ಕರ್ತವ್ಯ. ಸ್ವಾತಂತ್ರ್ಯ ನಂತರ ವಿದ್ಯಾವಂತರಾದವರು ಸಾಮಾಜಿಕ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಹೀಗಾಗಿ ಅಸಮಾನತೆ ಮುಂದುವರಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಮಾಜಮುಖಿಯಾಗಿ ಬದುಕಿದರೇ ಅದೇ ಸಾರ್ಥಕತೆ. ಸ್ವಾಮೀಜಿ ಮಕ್ಕಳ ಶಿಕ್ಷಣ ನೀಡುವಲ್ಲಿ ಸಾರ್ಥಕತೆ ಕಂಡರು. ಅವರು ಸ್ಥಾಪಿಸಿದ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ’ ಎಂದರು.

ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ರಾಜರ ನಡುವೆ ನಡೆಯುತ್ತಿದ್ದ ಯುದ್ಧವನ್ನು ತಪ್ಪಿಸಿದವರು ಸುತ್ತೂರಿನ ಶಿವರಾತ್ರೀಶ್ವರರು. ಜನರು ಶಾಂತಿ ನೆಮ್ಮದಿಯಿಂದ ಜೀವಿಸುವ ವಾತಾವರಣ ಸೃಷ್ಟಿಸಿದ ಕೀರ್ತಿ ಮಠಕ್ಕೆ ಸಲ್ಲುತ್ತದೆ. ನಾಡಿನಲ್ಲಿ ಜ್ಞಾನಜ್ಯೋತಿಯನ್ನು ಬೆಳಗಿದವರು ರಾಜೇಂದ್ರ ಶ್ರೀ’ ಎಂದರು.

‘ನೈಜ ಇತಿಹಾಸ ಹೇಳುವ ಕಾರ್ಯಕ್ರಮ’ : ಸಂಸದ ಪ್ರತಾಪಸಿಂಹ ಮಹಾಭಾರತದ ಕಥೆಯನ್ನು ಉದಾಹರಿಸಿ, ಭಾಷಣ ಮಾಡಿದ್ದರು. ಅದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ‘ಕಥೆ, ಪುರಾಣಗಳನ್ನು ಹೇಳುವ ಕಾರ್ಯಕ್ರಮವಲ್ಲ. ಸಾವಿರ ವರ್ಷಗಳ ನೈಜ ಇತಿಹಾಸವನ್ನು ಸುತ್ತೂರಿನ ಸಾಂಸ್ಕೃತಿಕ ಶ್ರೀಮಂತ ಬದುಕಿನ ಹಿನ್ನೆಲೆಯಲ್ಲಿ ನೋಡುವ ಮಹಾನ್ ಕಾರ್ಯಕ್ರಮ’ ಎಂದರು.

‘ಶೂದ್ರ ಸಮುದಾಯ ಕತ್ತಲಲ್ಲಿದ್ದಾಗ ರಾಜೇಂದ್ರ ಸ್ವಾಮೀಜಿ ಅವರು ಜಾತಿ, ಧರ್ಮ, ಮೇಲು– ಕೀಳೆನ್ನದೆ ಮನುಕುಲದ ಉದ್ಧಾರಕ್ಕಾಗಿ ಎಲ್ಲರಿಗೂ ಅನ್ನ– ಅಕ್ಷರ ದಾಸೋಹ ನೀಡಿದರು. ಜಾತೀಯತೆ, ಅಸ್ಪೃಶ್ಯತೆ ತೊಡೆದು ಹಾಕಲು ಶ್ರಮಿಸಿದರು’ ಎಂದು ಸ್ಮರಿಸಿದರು.

‘ಸುತ್ತೂರು ಮಠಕ್ಕೆ ಎಲ್ಲರೂ ಒಂದೇ. ನಾಲ್ಕೂವರೆ ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಊಟವನ್ನು ನೀಡುತ್ತಿದೆ. ಮಕ್ಕಳಿಗೆ ದಾಸೋಹ ಕೊಡಲು ಆಗದಿದ್ದಾಗ ಚಿನ್ನದ ಕರಡಿಗೆಯನ್ನು ಮಾಡಿ ರಾಜೇಂದ್ರಶ್ರೀ ಅನ್ನವಿಕ್ಕಿದರು’ ಎಂದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮೇಯರ್ ಶಿವಕುಮಾರ್, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಟಿ.ಎಸ್‌.ಶ್ರೀವತ್ಸ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಡಿ.ರವಿಶಂಕರ್, ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಮರಿತಿಬ್ಬೇಗೌಡ, ಮುಖಂಡರಾದ ಸಿ.ಎಸ್.ನಿರಂಜನಕುಮಾರ್, ತೋಂಟದಾರ್ಯ, ಮಲ್ಲಿಕಾರ್ಜುನಪ್ಪ, ಎಂ.ಕೆ.ಸೋಮಶೇಖರ್, ಐವಾನ್ ಡಿಸೋಜಾ, ಕೆಎಸ್ ಒಯು ಕುಲಪತಿ ಶರಣಪ್ಪ‌ ಹಲಸೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.