ಮೈಸೂರು: ‘ಪ್ರತಿ ವ್ಯಕ್ತಿ ಹಾಗೂ ಸಂಸ್ಥೆ ದೂರದೃಷ್ಟಿ ಹೊಂದಿರುವುದು ಅಗತ್ಯ. ವಿಕಸಿತ ಭಾರತ ನಿರ್ಮಾಣಕ್ಕೆ ಮುಂದಾಲೋಚನೆಯುಳ್ಳ ಅಭಿವೃದ್ಧಿ ಕಾರ್ಯ ಮತ್ತು ಶೈಕ್ಷಣಿಕ ಪ್ರಗತಿ ಪ್ರಮುಖ ಪಾತ್ರವಹಿಸುತ್ತದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಉದಯಗಿರಿಯ ಡಿ.ಬನುಮಯ್ಯ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಿರ್ಮಾಣಗೊಂಡಿರುವ ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಸುಭದ್ರ, ಶ್ರೇಷ್ಠ ಮತ್ತು ವಿಕಸಿತ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸುವ ಅಗತ್ಯವಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವೂ ಹೌದು’ ಎಂದರು.
‘ನಾವು ಸಾಂಸ್ಕೃತಿಕವಾಗಿ ಶ್ರೀಮಂತ ದೇಶವಾಗಿದ್ದೇವೆ. ಭವಿಷ್ಯದ ಜನರಿಗಾಗಿ ಆರ್ಥಿಕವಾಗಿ ಸದೃಢವಾಗುವುದು ಇಂದಿನ ತುರ್ತು. ಶಿಕ್ಷಣ ಕ್ಷೇತ್ರದಲ್ಲಿ ಬನುಮಯ್ಯ ಸಂಸ್ಥೆ ನೀಡಿದ ಕೊಡುಗೆ ಅಪಾರ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಸಂಸ್ಥೆಗಳಂತೆ ಈ ಸಂಸ್ಥೆಯೂ ಇತಿಹಾಸ ನಿರ್ಮಿಸಿದ್ದು, ಮೈಸೂರಿಗರಿಗೆ ಸ್ಮರಣೀಯವಾಗಿದೆ. ಸಂಸದನಾಗಿ ಸಂಸ್ಥೆಯ ಪ್ರಗತಿಗೆ ಸದಾ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ‘ಬನುಮಯ್ಯ ಕಾಲೇಜಿನ ವಿದ್ಯಾರ್ಥಿಯಾಗಿದ್ದ ನೆನಪು ಈಗಲೂ ನನ್ನಲ್ಲಿ ಅಚ್ಚಳಿಯದೆ ಉಳಿದಿದೆ. ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದು, ಮರೆಯಲಾಗದ ಕ್ಷಣ. ಕಾಲೇಜಿನ ಅಭಿವೃದ್ಧಿಗಾಗಿ ಶಾಸಕರ ನಿಧಿಯಿಂದ ಸಹಕಾರ ನೀಡುತ್ತೇನೆ’ ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ಉದ್ಯಮಿ ಎಂ.ಜಗನ್ನಾಥ ಶೆಣೈ, ಡಿ.ಬನುಮಯ್ಯ ವಿದ್ಯಾಸಂಸ್ಥೆ ಅಧ್ಯಕ್ಷ ವಿ.ಬಿ.ಜಯದೇವ, ಉಪಾಧ್ಯಕ್ಷ ಕೆ.ಎನ್.ತಿಮ್ಮಯ್ಯ, ಗೌರವ ಕಾರ್ಯದರ್ಶಿ ವಿ.ಸಿ.ಕೋಮಲಾ, ಆಡಳಿತಾಧಿಕಾರಿ ಎನ್.ತಿಮ್ಮಯ್ಯ, ಧರ್ಮದರ್ಶಿಗಳಾದ ಪ್ರೊ.ಪಿ.ವಿ.ನರಹರಿ, ಆರ್.ರಮೇಶ್ ಕುಮಾರ್, ಬನುಮಯ್ಯ ವಾಣಿಜ್ಯ ಮತ್ತು ಕಲಾ ಪದವಿ ಕಾಲೇಜಿನ ಪ್ರಾಂಶುಪಾಲ ಬಸವರಾಜ್ ಇದ್ದರು.
ಮೈಸೂರಿಗೆ ಬನುಮಯ್ಯ ಕೊಡುಗೆ ಅಪಾರ ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ಕೆ ಸಹಕಾರದ ಭರವಸೆ ಬನುಮಯ್ಯ ಕಾಲೇಜಿನ ವಿದ್ಯಾರ್ಥಿ ದಿನ ಸ್ಮರಿಸಿದ ಶಾಸಕ
ಅಭಿವೃದ್ಧಿಯತ್ತ ಸರ್ಕಾರಿ ಕಾಲೇಜು
‘ಇಂದು ಸರ್ಕಾರಿ ಶಾಲಾ ಕಾಲೇಜುಗಳು ಉತ್ತಮ ಪ್ರಗತಿ ಸಾಧಿಸುತ್ತಿದೆ. ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2.5 ಸಾವಿರ ಹಾಗೂ ಕುರುಬಾರಹಳ್ಳಿ ಕಾಲೇಜಿಲ್ಲಿ 2 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ’ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು. ‘100 ಅಡಿ ರಸ್ತೆಯಲ್ಲಿರುವ ಬಾಲಕಿಯರ ಪಿ.ಯು ಕಾಲೇಜನ್ನು ಅಭಿವೃದ್ಧಿ ಪಡಿಸಲು ಸೂಕ್ತ ಯೋಜನೆ ರೂಪಿಸಿ ಮೂಲ ಸೌಲಭ್ಯ ಒದಗಿಸಲು ಕ್ರಮವಹಿಸುತ್ತಿದ್ದೇವೆ. 2025ರೊಳಗೆ ಕ್ಷೇತ್ರದಲ್ಲಿ ಯುಜಿಡಿ ಸಮಸ್ಯೆ ಬಗೆಹರಿಸುವ ಯೋಜನೆ ಹೊಂದಿದ್ದೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.