ADVERTISEMENT

ಮೈಸೂರು ಅಭಿವೃದ್ಧಿಗೆ ಪ್ರಣಾಳಿಕೆ: ಲಕ್ಷ್ಮಣ

ವಿವಿಧೆಡೆ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2024, 7:51 IST
Last Updated 9 ಏಪ್ರಿಲ್ 2024, 7:51 IST
ಮೈಸೂರಿನ ನಿವೇದಿತಾ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಸೋಮವಾರ ಮತ ಯಾಚಿಸಿದರು
ಮೈಸೂರಿನ ನಿವೇದಿತಾ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಸೋಮವಾರ ಮತ ಯಾಚಿಸಿದರು   

ಮೈಸೂರು: ‘ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಪ್ರಣಾಳಿಕೆಯೊಂದನ್ನು ಸಿದ್ಧಪಡಿಸಿದ್ದೇನೆ. ಜನರ ಪರವಾಗಿ ನಿಂತು ಕೆಲಸ ಮಾಡಲು ಮತದಾರರು ಅವಕಾಶ ಮಾಡಿಕೊಡಬೇಕು’ ಎಂದು ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ತಿಳಿಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಾಜರಾಜೇಶ್ವರಿ ನಗರದಲ್ಲಿ ಸೋಮವಾರ ನಿವಾಸಿಗಳಿಂದ ಮತಯಾಚಿಸಿ ಅವರು ಮಾತನಾಡಿದರು.

‘ನಾನು ಮೈಸೂರಿನವನೇ ಆಗಿದ್ದು ಸ್ಥಳೀಯ ನಿವಾಸಿ. ಇಲ್ಲಿನ ಸಮಸ್ಯೆಗಳ ಅರಿವಿದೆ. ನೀವು ಗೆದ್ದು ಬಂದರೆ ಏನು ಮಾಡುತ್ತೀರಾ, ನಿಮ್ಮ ಚಿಂತನೆ ಏನು ಎಂದು ಹಲವರು ಕೇಳುತ್ತಿದ್ದಾರೆ. ಹೀಗಾಗಿಯೇ, ಮುಖ್ಯಮಂತ್ರಿ ಮತ್ತು ನಾಯಕರ ಜೊತೆ ಚರ್ಚೆ ಮಾಡಿ ಪ್ರಣಾಳಿಕೆಯನ್ನು ಮೈಸೂರಿನಲ್ಲಿ ಶೀಘ್ರವೇ ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿದರು.

ADVERTISEMENT

‘ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್‌ ಸರ್ಕಾರವನ್ನು ಜನರು ಬೆಂಬಲಿಸಬೇಕು’ ಎಂದು ಕೋರಿದರು.

ವಿಧಾನಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರೀಗೌಡ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ಮುಖಂಡರಾದ ಅರುಣ್ ಕುಮಾರ್, ಎಚ್.ಸಿ. ಕೃಷ್ಣಕುಮಾರ್‌ ಸಾಗರ್, ಮಲ್ಲೇಶ್, ಮಹದೇವ ಪಾಲ್ಗೊಂಡಿದ್ದರು.

ಬಳಿಕ ನಿವೇದಿತಾ ನಗರದಲ್ಲಿ ಮತ ಯಾಚಿಸಿದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ಮಾತನಾಡಿ, ‘8 ವಿಧಾನಸಭಾ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿ ಈಗಾಗಲೇ ಮತಯಾಚನೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಬೇಕು’ ಎಂದು ಕೋರಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜವರಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರುಸ್ವಾಮಿ, ಮಾಜಿ ಮೇಯರ್‌ಗಳಾದ ಚಿಕ್ಕಣ್ಣ ಮತ್ತು ಮೋದಾಮಣಿ ಹಾಜರಿದ್ದರು‌.

ಜನತಾನಗರದಲ್ಲಿ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಜನರಿಂದ ಬೆಂಬಲ ಕೋರಿದರು.

ಮುಡಾ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ‘ಲಕ್ಷ್ಮಣ ಅವರು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಜನಪರ ಹೋರಾಟಗಾರ. ಜನಸಾಮಾನ್ಯರ ಪರ ಕೆಲಸ ಮಾಡುವ ಅವರನ್ನು ನಾವೆಲ್ಲರೂ ಬೆಂಬಲಿಸಬೇಕು’ ಎಂದರು.

‘ನಾನು ಸಾಮಾನ್ಯ ಕಾರ್ಯಕರ್ತ. ಬೀದಿಯಲ್ಲಿ ಇರುವ ವ್ಯಕ್ತಿ. ಯಾವಾಗ ಬೇಕಾದರೂ ಸಿಗುವ ವ್ಯಕ್ತಿ. ಆದರೆ, ಬಿಜೆಪಿ ಅಭ್ಯರ್ಥಿ ಅರಮನೆಯಲ್ಲಿ ಇರುವ ವ್ಯಕ್ತಿ. ಸಾಮಾನ್ಯ ಜನರು ಅರಮನೆಗೆ ಸುಲಭವಾಗಿ ಹೋಗಲಾದೀತೇ?’ ಎಂದು ಕೇಳಿದರು.

ಬಳಿಕ ದಟ್ಟಗಳ್ಳಿಯಲ್ಲಿ ಸಾಯಿ ಟ್ರಸ್ಟ್‌ಗೆ ಭೇಟಿ ನೀಡಿ ಮತಯಾಚಿಸಿದರು.

‘ಮಾರ್ವಾಡಿಗಳು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ದೇಶದ ಪರಿಸ್ಥಿತಿ ಹೇಗಿದೆ ಎಂದು ನೀವೇ ನೋಡಿದ್ದೀರಿ. ಬಣ್ಣದ ಮಾತನಾಡಿ ಯುವಕರಿಗೆ ಕೆಲಸ ಸಿಗದಂತಹ ವಾತಾವರಣ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಜನರು ಬದಲಾವಣೆ ತರಬೇಕು’ ಎಂದು ಲಕ್ಷ್ಮಣ ನಿವಾಸಿಗಳನ್ನು ಕೋರಿದರು.

ಮುಖಂಡರಾದ ವಿಕ್ಕಿವಾಸು, ರಾಣಿಪ್ರಭಾ, ಹರೀಶ್ ಹಾಗೂ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.