ADVERTISEMENT

ಸರಗೂರು | ಆನೆ ದಾಳಿ: ಅರಣ್ಯ ವೀಕ್ಷಕ ಸಾವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 16:37 IST
Last Updated 8 ಫೆಬ್ರುವರಿ 2024, 16:37 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಸರಗೂರು (ಮೈಸೂರು ಜಿಲ್ಲೆ): ತಾಲ್ಲೂಕಿನ ಕೆಬ್ಬೆಪುರ ಹಾಡಿಯ ಸಮೀಪ ಗುರುವಾರ ಕಾಡಾನೆ ದಾಳಿಯಿಂದ ಅರಣ್ಯ ವೀಕ್ಷಕ ಬಿ.ರಾಜು (38) ಸ್ಥಳದಲ್ಲೇ ಮೃತಪಟ್ಟರು. ಅವರು, ನಾಗರಹೊಳೆ ಅರಣ್ಯ ಪ್ರದೇಶದ ಉದ್ಬೂರು ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಬಸ್‌ಗೆ ತೆರಳಲು ಕೆಬ್ಬೆಪುರ ಹಾಡಿಯಿಂದ ಮೊಳೆಯೂರಿಗೆ ನಡೆದು ಹೋಗುವಾಗ ಕಾಡಾನೆ ದಾಳಿ ನಡೆಸಿತ್ತು.

ರಸ್ತೆ ಪಕ್ಕದ ಹಳ್ಳದಲ್ಲಿ ಮೃತದೇಹ ಬಿದ್ದಿದ್ದರಿಂದ ಮಧ್ಯಾಹ್ನದವರೆಗೂ ಯಾರಿಗೂ ಗೊತ್ತಾಗಿರಲಿಲ್ಲ. ಅವರ ಮಗಳು ಬಟ್ಟೆ ಒಗೆಯಲು ಹೋಗುವಾಗ ತಂದೆಯ ಮೃತದೇಹ ಕಂಡು ಗಾಬರಿಗೊಂಡು ಗ್ರಾಮಸ್ಥರಿಗೆ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು, ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದರು.

ADVERTISEMENT

ಆಕ್ರೋಶ: ‘ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದ್ದು, ಆನೆ ದಾಳಿಗೆ ನಿರಂತರವಾಗಿ ಸಾವುಗಳು ಸಂಭವಿಸುತ್ತಿದ್ದರೂ, ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ದಾಳಿ ನಿಯಂತ್ರಣಕ್ಕೆ ಬ್ಯಾರಿಕೇಡ್ ಅಳವಡಿಸುವಂತೆ ಕೋರಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ’ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ, ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.