ADVERTISEMENT

ತುರ್ತು ಪರಿಸ್ಥಿತಿ ಬಡವರ ಪರವಾಗಿತ್ತು: ಎಚ್‌.ವಿಶ್ವನಾಥ್‌

ಕರಾಳ ದಿನವಲ್ಲ: ಕರುಣಾಳು ದಿನ: ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 20:08 IST
Last Updated 26 ಜೂನ್ 2024, 20:08 IST
<div class="paragraphs"><p>ಅಡಗೂರು ಎಚ್‌.ವಿಶ್ವನಾಥ್‌</p></div>

ಅಡಗೂರು ಎಚ್‌.ವಿಶ್ವನಾಥ್‌

   

ಮೈಸೂರು: ‘ತುರ್ತು ಪರಿಸ್ಥಿತಿ ಬಡವರಿಗೆ ಒಳ್ಳೆಯದನ್ನು ಮಾಡಿತ್ತು. ಅದು ಬಡವರ ಪರವಿದ್ದ ಅಲೆ’ ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಹೇಳಿದರು. 

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ಕರಾಳ ದಿನ ಆಚರಿಸಿದೆ. ಆದರೆ, ತುರ್ತು ಪರಿಸ್ಥಿತಿಯು ರಾಜ್ಯದ ಪಾಲಿಗೆ ಕರುಣಾಳು ದಿನಗಳಾಗಿದ್ದವು. ವಾಸ್ತವ ಅರಿತು ಬಿಜೆಪಿಗರು ಮಾತನಾಡಲಿ’ ಎಂದರು.

ADVERTISEMENT

‘ಹಳೇ ವಿಚಾರಗಳನ್ನೇ ಇನ್ನೆಷ್ಟು ದಿನ ಮಾತನಾಡಬೇಕು. ಪ್ರತಿಭಟನೆಯಿಂದ ಲಾಭವಿಲ್ಲ. ಆಗ ಡಿ.ದೇವರಾಜ ಅರಸು ಅವರು ಅಭಿವೃದ್ಧಿಗೆ ಬಳಸಿಕೊಂಡರು. ಅದರಿಂದ ದಲಿತರಿಗೆ, ಬಡವರಿಗಾದ ಲಾಭವನ್ನು ಯಾರೂ ವಿಶ್ಲೇಷಣೆ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷವಾಗಿದೆ. ಬಾಲಕರಾಗಿದ್ದಾಗ ಜೈಲು ಪಾಲಾಗಿದ್ದುದಾಗಿ ಆರ್‌.ಅಶೋಕ ಸುಳ್ಳು ಹೇಳುತ್ತಿದ್ದಾರೆ. ಬಾಲಕರನ್ನು ಜೈಲಿಗೆ ಹಾಕಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಒಂದೇ ಮನೆಯವರೇಕೆ ಜೈಲಿನಲ್ಲಿದ್ದಾರೆ? ಪೋಕ್ಸೊ ಪ್ರಕರಣದಡಿ ಸ್ವಾಮೀಜಿಯೇಕೆ ಜೈಲಿಗೆ ಹೋಗಿದ್ದಾರೆ. ಮೋದಿ ಅವರ ಕಾರಿಗೆ ಚಪ್ಪಲಿ ತೂರಿಬಂದ ಕಾರಣವೇನು? ರಾಮಮಂದಿರ ಏಕೆ ಸೋರುತ್ತಿದೆ. ಇದಕ್ಕೆಲ್ಲ ಕಾಂಗ್ರೆಸ್‌ ಕಾರಣವೇ? ವರ್ತಮಾನದ ಸಂಕಷ್ಟಗಳ ಬಗ್ಗೆ ಅಶೋಕ ಮಾತನಾಡಲಿ’ ಎಂದು ಕಿಡಿಕಾರಿದರು.

‘ಪೆಟ್ರೋಲ್, ಹಾಲು ಬೆಲೆ ಏರಿಕೆಯಿಂದ ಜನ ಸಂಕಷ್ಟದಲ್ಲಿದ್ದಾರೆ. ಬೆಲೆ ಹೆಚ್ಚಿಸುವುದಿಲ್ಲವೆಂದು, ಚುನಾವಣೆಗೆ ಮುನ್ನ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಚನ ಭ್ರಷ್ಟರಾಗಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.