ADVERTISEMENT

‘ಮುಸ್ಲಿಂ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಿ’

ಜಾಮಿಯಾ ಮಸೀದಿ ಮದರಸ ಕಟ್ಟಡ ಉದ್ಘಾಟಿಸಿದ ಶಾಸಕ ತನ್ವೀರ್ ಸೇಠ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 15:56 IST
Last Updated 24 ಜೂನ್ 2024, 15:56 IST
ಸರಗೂರು ತಾಲ್ಲೂಕು ಮುಗುತನ ಮೂಲೆ ಗ್ರಾಮದಲ್ಲಿ ಭಾನುವಾರ ಶಾಸಕ ಅಜೀಜ್ ಸೇಠ್ ಮದರಸವನ್ನು ಉಧ್ಘಾಟಿಸಿದರು. ಶಾಸಕ ಅನಿಲ್ ಚಿಕ್ಕಮದು ಇದ್ದಾರೆ
ಸರಗೂರು ತಾಲ್ಲೂಕು ಮುಗುತನ ಮೂಲೆ ಗ್ರಾಮದಲ್ಲಿ ಭಾನುವಾರ ಶಾಸಕ ಅಜೀಜ್ ಸೇಠ್ ಮದರಸವನ್ನು ಉಧ್ಘಾಟಿಸಿದರು. ಶಾಸಕ ಅನಿಲ್ ಚಿಕ್ಕಮದು ಇದ್ದಾರೆ   

ಸರಗೂರು: ‘ಮುಸ್ಲಿಂ ಸಮುದಾಯವು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಮುಂದಾಗಬೇಕು’ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ತಾಲ್ಲೂಕಿನ ಎಂ.ಸಿ.ತಳಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಗುತನಮೂಲೆ ಗ್ರಾಮದಲ್ಲಿ ಭಾನುವಾರ ನೂತನ ಜಾಮಿಯಾ ಮಸೀದಿ ಮದರಸ ಕಟ್ಟಡ ಹಾಗೂ ಮಕ್ಕಳ ಕಲಿಕಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.

‘ಪ್ರತಿಯೊಂದು ಸಮಾಜವು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ಅದರಲ್ಲೂ ಮುಸ್ಲಿಂ ಸಮುದಾಯ ಶಿಕ್ಷಣದಲ್ಲಿ ಹಿಂದುಳಿದಿದ್ದು, ಪೋಷಕರು ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣವನ್ನು ಕೊಡಿಸಲು ಮುಂದಾಗಬೇಕು’ ಎಂದರು.

ADVERTISEMENT

‘ಎಚ್.ಡಿ.ಕೋಟೆ ಮತ್ತು ಸರಗೂರು ಎರದೂ ತಾಲ್ಲೂಕಿನಲ್ಲಿಯೂ ಹಿಂದೂ–ಮುಸ್ಲಿಂ ಸಮುದಾಯದವರು ಭಾವೈಕ್ಯತೆಗೆ ಹೆಸರಾಗಿದ್ದಾರೆ. ಸರ್ವಸಮಾಜದ ಏಳಿಗೆಗಾಗಿ ಶಾಸಕ ಅನಿಲ್ ಚಿಕ್ಕಮಾದು ತಮ್ಮನ್ನೇ ತೊಡಗಿಸಿಕೊಂಡಿದ್ದು, ಜನರ ಸೇವೆಯ ಮನೋಭಾವಿರುವ ವ್ಯಕ್ತಿ’ ಎಂದರು.

ಶಾಸಕ ಅನಿಲ್ ಚಿಕ್ಕಮಾದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ನಾನು ಯಾವುದೇ ಸಮಾಜಕ್ಕೆ ತಾರತಮ್ಯ ಮಾಡದೇ ಎರಡೂ ಅವಧಿಯಲ್ಲಿ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ಗ್ರಾಮದ ಮುಸ್ಲಿಂ ಸಮುದಾಯದ ಬೇಡಿಕೆಯಂತೆ ಮದಸರಕ್ಕಾಗಿ ₹5 ಲಕ್ಷ ಅನುದಾನವನ್ನು ನೀಡಲಾಗುವುದು. ಅಲ್ಲದೆ ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಒದಗಿಸಲಾಗುವುದು’ ಎಂದರು.

ಸರಗೂರಿನಲ್ಲಿ ಶಾದಿ ಮಹಲ್ ನಿರ್ಮಿಸಿ ಕೊಡುವಂತೆಯೂ ಸಮುದಾಯ ಮುಖಂಡರು ಶಾಸಕರಲ್ಲಿ ಮನವಿ ಮಾಡಿಕೊಂಡರು.

ಎಚ್.ಡಿ. ಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷ, ಪ್ರಮುಖರಾದ ಆಶ್ರಫ್ ಆಲಿ, ಅಯೂಬ್ ಖಾನ್, ಶಬ್ಬೀರ್ ಖಾನ್, ಅಕ್ರಂ ಪಾಷಾ, ಎಂ.ಕೆ. ಮಹಮದ್ ಆಲಿ, ಕಂಬ್ರುದ್ದಿನ್, ಯೂಸುಫ್ ಸಾಬ್, ಫಾರೂಕ್ ಆಲಿ, ಬಾಬು, ಮಹಮದ್ ಅನೀಫ್, ಅಲ್ಪಸಂಖ್ಯಾತರ ತಾಲ್ಲೂಕು ಘಟಕದ ಅಧ್ಯಕ್ಷ ಕೋಟೆ ಶಫಿ, ಸರಗೂರು ಅಮೀರ್ ಸುಹೇಲ್, ಹಿದಾಯತ್ ಮಹಮದ್ ಅಲಿ, ಅನ್ವರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ, ಸದಸ್ಯ ಪ್ರಕಾಶ್, ಚಂದ್ರ, ಕೆಂಡನಾಯಕ, ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಪ್ರತಿನಿಧಿ ಜಯಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.