ADVERTISEMENT

ಬೆಂಗಳೂರಿನಲ್ಲಿ ₹5 ಲಕ್ಷ ಕೋಟಿ ಮೌಲ್ಯದ ಭೂಮಿ ಕಬಳಿಕೆ: ಶಾಸಕ ರಾಮಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 21:18 IST
Last Updated 25 ಸೆಪ್ಟೆಂಬರ್ 2021, 21:18 IST
ಪಿರಿಯಾಪಟ್ಟಣದಲ್ಲಿ ಶನಿವಾರ ‘ನಮ್ಮ ಭೂಮಿ ನಮ್ಮದು’ ಭೂ ಹೋರಾಟದ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿದರು. ಮುಖಂಡ ಎಚ್‌.ಗೋವಿಂದಯ್ಯ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಹರಿಹರ ಆನಂದಸ್ವಾಮಿ, ಶಿವಯೋಗಿ, ಶ್ರೀಕಾಂತ್‌ ಇದ್ದಾರೆ
ಪಿರಿಯಾಪಟ್ಟಣದಲ್ಲಿ ಶನಿವಾರ ‘ನಮ್ಮ ಭೂಮಿ ನಮ್ಮದು’ ಭೂ ಹೋರಾಟದ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿದರು. ಮುಖಂಡ ಎಚ್‌.ಗೋವಿಂದಯ್ಯ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಹರಿಹರ ಆನಂದಸ್ವಾಮಿ, ಶಿವಯೋಗಿ, ಶ್ರೀಕಾಂತ್‌ ಇದ್ದಾರೆ   

ಪಿರಿಯಾಪಟ್ಟಣ: ‘ದುಷ್ಟ ದುರಾಸೆಯ ಜನ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಸಿ ಆನಂದದಿಂದ ಬದುಕುತ್ತಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಅಂಥ ಭೂಮಿಯ ಅಂದಾಜು ಮೌಲ್ಯ ₹5 ಲಕ್ಷ ಕೋಟಿ’ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ತಾಲ್ಲೂಕಿನ ಮಂಚದೇವನಹಳ್ಳಿ ಸಮೀಪ ಕರ್ನಾಟಕ ದಲಿತ ನವನಿರ್ಮಾಣ ವೇದಿಕೆಯು ಶನಿವಾರ ಏರ್ಪಡಿಸಿದ್ದ ‘ನಮ್ಮ ಭೂಮಿ ನಮ್ಮದು’ ಭೂಮಿ ಹಕ್ಕಿಗಾಗಿ ಹೋರಾಟ ಪೂರ್ವಸಿದ್ಧತಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ಅಕ್ರಮ ಎಸಗಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಹಲವು ಬಾರಿ ಸದನದಲ್ಲಿ ಒತ್ತಾಯಿಸಿದರೂ, 39 ದಿನ ಪ್ರತಿಭಟಿಸಿದರೂ ಪ್ರಯೋಜನವಾಗಲಿಲ್ಲ. ಇಂಥ ಪ್ರಕರಣಗಳಲ್ಲಿ ಒಬ್ಬರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹೋರಾಟವನ್ನು ನಡೆಸಲು ಎಷ್ಟರಮಟ್ಟಿಗೆ ಸಿದ್ಧತೆಯಾಗಿದೆ ಎಂಬ ಆತ್ಮಾವಲೋಕನವೂ ನಡೆಯಬೇಕು. ಕಾನೂನು ಉಳ್ಳವರ ಪಾಲಿಗೆ ಉದಾರವಾಗಿ, ಬಡವರ ಪಾಲಿಗೆ ಕಠಿಣವಾಗಿಯೂ ಮಾರ್ಪಾಡಾಗಿದೆ. ನಮ್ಮನ್ನು ಈ ಹಿಂದೆ ಈಸ್ಟ್ ಇಂಡಿಯಾ ಕಂಪನಿ ಆಳುತ್ತಿತ್ತು. ಈಗ ಈಟ್ ಇಂಡಿಯಾ ಕಂಪನಿ ಮನಸ್ಥಿತಿಯವರು ಆಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಬೆಂಗಳೂರಿನ ಸುತ್ತಮುತ್ತ 5 ಸಾವಿರ ಅನಧಿಕೃತ ಬಡಾವಣೆಗಳಿವೆ. ಈ ವಿಷಯದಲ್ಲಿ ನ್ಯಾಯಾಲಯಗಳು ಪಾವಿತ್ರ್ಯವನ್ನು ಕಾಪಾಡಬೇಕು. ಆದರೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ84 ನ್ಯಾಯಾಧೀಶರು ನಿವೇಶನ ಹಗರಣದಲ್ಲಿ ಸಿಲುಕಿಕೊಂಡಿದ್ದರು’ ವಿಷಾದಿಸಿದರು.

‘ಹೋರಾಟಗಳನ್ನು ಸಂಘಟಿಸುವರಲ್ಲೇ ಕೆಲವರು ಭೂ ಹಗರಣಗಳನ್ನು ನಡೆಸಿದವರ ಪರವಾಗಿ ನಿಲ್ಲುವ ನಿದರ್ಶನಗಳು ಇವೆ. ಹೋರಾಟವನ್ನು ಯಾರೂ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ಹೋರಾಟಗಾರರು ಹೋರಾಟದ ಆಶಯಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು’ ಎಂದು ಪ್ರತಿಪಾದಿಸಿದರು.

‘ಅರಣ್ಯ ಹಕ್ಕುಗಳ ಕಾಯ್ದೆಯಡಿ ಜೀವನ ನಿರ್ವಹಣೆಗೆ ಭೂಮಿಯನ್ನು ಹೊಂದುವ ಹಕ್ಕು ಮತ್ತು ಕಾಡಿನ ಸಂಪ‍ನ್ಮೂಲವನ್ನು ಸಂಗ್ರಹಿಸುವ ಹಕ್ಕನ್ನು ನಿರಾಕರಿಸಿರುವುದು ಅಮಾನವೀಯ. ಅದು ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಸಂವಿಧಾನ ವಿರೋಧಿ. ಭೂಹೋರಾಟವು ಈ ಅಂಶವನ್ನೂ ಗಂಭೀರವಾಗಿ ಪರಿಗಣಿಸಬೇಕು’ ಎಂದು ಡೀಡ್ ಸಂಸ್ಥೆಯ ಶ್ರೀಕಾಂತ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಎಚ್.ಗೋವಿಂದಯ್ಯ, ಹರಿಹರ ಆನಂದ ಸ್ವಾಮಿ, ಟಿ.ಈರಯ್ಯ, ನಿವೃತ್ತ ಪಿಡಿಒ ಶಿವಯೋಗಿ ಮಾತನಾಡಿದರು. ಸಂಘಟನೆಯ ಮುಖಂಡರಾದ ಪಿ.ಪಿ.ಮಹದೇವ್, ಸೀಗೂರು ವಿಜಯಕುಮಾರ್, ಎಚ್.ಡಿ.ರಮೇಶ್, ನೇರಳೆಕುಪ್ಪೆ ನವೀನ್, ಗಿರಿಜನ ಮುಖಂಡರಾದ ಎಚ್.ಟಿ.ರವಿ, ಕೃಷ್ಣಯ್ಯ, ಧರ್ಮಣ್ಣ, ಪುಟ್ಟಯ್ಯ, ನಾರಾಯಣಪ್ಪ, ಶಂಬಣ್ಣ, ಡಿ.ಎ.ನಾಗೇಂದ್ರ, ಶಿವಪ್ಪ ಹಾಜರಿದ್ದರು. ಪಿರಿಯಾಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಹೊಸ ಚಳವಳಿ ಕಟ್ಟಲು ಸಕಾಲ’
‘70ರಿಂದ 90ರ ದಶಕದವರೆಗೂ ನಡೆದಿರುವ ಹಲವು ಚಳವಳಿಗಳ ವೈಫಲ್ಯದ ಪಾಠಗಳ ಅರಿವಿನಲ್ಲೇ ಹೊಸ ಚಳವಳಿಗಳನ್ನು ಕಟ್ಟಲು ಇದು ಸಕಾಲ’ ಎಂದು ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಪ್ರತಿಪಾದಿಸಿದರು.

‘ಎಪ್ಪತ್ತರ ದಶಕದಲ್ಲಿ ಪ್ರಾರಂಭವಾದ ದಲಿತ ಚಳವಳಿಗೆ ಪತ್ರಿಕೆಯು ಸಂಪೂರ್ಣ ಬೆಂಬಲವನ್ನು ನೀಡಿತ್ತು. ಈಗಲೂ ಭೂ ಹೋರಾಟಕ್ಕೆ ಬೆಂಬಲ ನೀಡಲು ಸಿದ್ಧ’ ಎಂದರು.

‘ಚಳವಳಿಗಳನ್ನು ಹೇಗೆಲ್ಲಾ ಸಂಘಟಿಸಬಾರದು ಎಂಬುದಕ್ಕೂ ರಾಜ್ಯದಲ್ಲಿ ನಿದರ್ಶನಗಳಿವೆ. ಭೂಹೋರಾಟವು ಮೈಸೂರು ಜಿಲ್ಲೆ ಮೀರಿ ರಾಜ್ಯದಾದ್ಯಂತ ವಿಸ್ತರಿಸಬೇಕು’ ಎಂದು ಸಲಹೆ ನೀಡಿದರು.

***

ಭೂಕಬಳಿಕೆ ಹಗರಣವನ್ನು ‘ಪ್ರಜಾವಾಣಿ’ಯು ನಿರ್ಭೀತಿಯಿಂದ ಹಲವು ಬಾರಿ ಪ್ರಕಟಿಸುವ ಮೂಲಕ ಜನಪರ ಕಾಳಜಿಯನ್ನು ತೋರಿದೆ.
-ಎ.ಟಿ.ರಾಮಸ್ವಾಮಿ, ಅರಕಲಗೂಡು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.