ADVERTISEMENT

ಪರಿಸರ ಸಂರಕ್ಷಣೆ ದೇವಾಲಯದಿಂದ ಆರಂಭವಾಗಲಿ: ಯದುವೀರ ಕೃಷ್ಣದತ್ತ

​ಪ್ರಜಾವಾಣಿ ವಾರ್ತೆ
Published 24 ಮೇ 2023, 5:52 IST
Last Updated 24 ಮೇ 2023, 5:52 IST
ಭಾರತೀನಗರ ಸಮೀಪದ ಕಾಡುಕೊತ್ತನಹಳ್ಳಿ ವೀರಭದ್ರೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಧಾರಂದ ಪೂಜೆ ಸಲ್ಲಿಸಿದರು
ಭಾರತೀನಗರ ಸಮೀಪದ ಕಾಡುಕೊತ್ತನಹಳ್ಳಿ ವೀರಭದ್ರೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಧಾರಂದ ಪೂಜೆ ಸಲ್ಲಿಸಿದರು   

ಭಾರತೀನಗರ: ‘ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಯವರಿಗೂ ಉಳಿಸಿ ಹೋಗಬೇಕು. ಪರಿಸರ ಸಂರಕ್ಷಣೆಯನ್ನು ದೇವಾಲಯಗಳಿಂದಲೇ ಆರಂಭಿಸಬೇಕಾಗಿದೆ’ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು.

ಸಮೀಪದ ಕಾಡುಕೋತ್ತನಹಳ್ಳಿ ವೀರಭದ್ರೇಶ್ವರ ದೇವಾಲಯದ ಜೀರ್ಣೋದ್ಧಾರ ಪೂಜಾ ಕಾರ್ಯಕ್ರಮದಲ್ಲಿ ಧಾರಂದ ಪೂಜೆ ನೆರವೇರಿಸಿ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಪ್ಲಾಸ್ಟಿಕ್‌ನಿಂದ ಪರಿಸರ ಸಂಪೂರ್ಣ ಹಾಳಾಗುತ್ತಿದೆ. ಪ್ರತಿ ವಸ್ತುಗಳನ್ನು ಕೊಂಡೊಯ್ಯಲು ಪ್ಲಾಸ್ಟಿಕ್‌ ಕವರ್‌, ಬ್ಯಾಗ್‌ಗಳನ್ನೇ ಉಪಯೋಗಿಸುತ್ತಿದ್ದು, ಇದು ಹೀಗೆ ಮುಂದುವರಿದರೆ ಪರಿಸರ ಹಾಳಾಗಿ ಕಾಲ ಕ್ರಮೇಣ ಹಲವಾರು ಸಮಸ್ಯೆಗಳು ಉದ್ಭವಿಸಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ದೇವಾಲಯಗಳು ಪುರಾತನ ಕಾಲದಿಂದಲೂ ಪ್ರತಿ ಗ್ರಾಮಗಳನ್ನು ಕೇಂದ್ರ ದೇವಾಲಯದಿಂದಲೇ ಗುರುತಿಸಲಾಗುತ್ತಿತ್ತು. ಪ್ರತಿ ಸಾಮಾಜಿಕ ಕಾರ್ಯಗಳೂ ಕೂಡ ದೇವಾಲಯಗಳ ವತಿಯಿಂದಲೇ ನಡೆಸಲಾಗುತ್ತಿತ್ತು. ಮುಂದೆಯೂ ದೇವಾಲಯಗಳನ್ನು ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತಗೊಳಿಸದೆ ಸಾಮಾಜಿಕ ಕಾರ್ಯಗಳಲ್ಲೂ ಪಾತ್ರ ವಹಿಸುವಂತೆ ಮಾಡಬೇಕು’ ಎಂದು ತಿಳಿಸಿದರು.

‘ದೇವಾಲಯಕ್ಕೆ ಬರುವ ಪ್ರತಿಯೊಬ್ಬ ಮಹಿಳೆ, ಪುರುಷರು ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಪೂಜಾ ಸಾಮಗ್ರಿ ತರುವ ಬದಲು ಬುಟ್ಟಿಗಳಲ್ಲಿ ತರುವ ಮೂಲಕ ಪರಿಸರ ಉಳಿಸುವ ಸಾಮಾಜಿಕ ಕಾರ್ಯಕ್ಕೆ ನಾಂದಿ ಹಾಡಬೇಕು. ಸಾಮಾಜಿಕ ಬದವಣೆಯನ್ನು ತರಲು ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪೂರ್ಣಕುಂಭದೊಡನೆ ಸ್ವಾಗತಿಸಿ ದೇವಸ್ಥಾನ ನಿರ್ಮಾಣ ಕಾರ್ಯದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅವರಿಂದ ಪೂಜಾ ಕೈಂಕರ್ಯ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ದೇವಸ್ಥಾನ ನಿರ್ಮಾಣ ಸಮಿತಿಯ ಸದಸ್ಯರಾದ ಎಸ್.ದೇವಪ್ರಸಾದ್, ದೊಡ್ಡ ಯಜಮಾನರಾದ ಕೆ.ವಿ.ರಾಮಕೃಷ್ಣ, ಮರಿಸ್ವಾಮಿ, ಕೆ.ಎಂ. ಮಾದಯ್ಯ, ಶಿವರುದ್ರಯ್ಯ, ವಕೀಲ ರಾಜೇಂದ್ರಸ್ವಾಮಿ, ಗದ್ದಿಗೆಗೌಡ ಮಹದೇವು, ಕೆ.ಆರ್.ಗಿರೀಶ್, ಶ್ರೀಧರ್, ಯಜಮಾನ್ ಸೋಮಣ್ಣ, ಯಜಮಾನ್ ಶಂಕರ್, ಯಜಮಾನ್ ಮಹೇಶ್, ವೀರಭದ್ರಯ್ಯ, ಮಂಚೇಗೌಡ, ಕಪನಿಗೌಡ, ನಂಜುಂಡ, ಬಳೆ ಪುಟ್ಟಸ್ವಾಮಿ, ಚಿಕ್ಕಸ್ವಾಮಿ ಹಾಗೂ ಅರ್ಚಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.