ಮೈಸೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರುವ ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಆ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಪರಿಶೀಲನೆ ನಡೆಯುತ್ತಿದೆ.ಯಾರೋ ಒಬ್ಬರು ಬ್ಯಾಗ್ ಇಟ್ಟು ಹೋಗಿರುವುದು ತಿಳಿದುಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ' ಎಂದರು.
'ಇದು ಉಗ್ರರು ಮಾಡಿರುವ ಬಗ್ಗೆ ಇನ್ನೂ ಗೊತ್ತಿಲ್ಲ. ಇದೊಂದು ಸುಧಾರಿತ ಸ್ಫೋಟಕದ ಪ್ರಕರಣವಾಗಿದೆ ಭಾರಿ ಪ್ರಮಾಣದಲ್ಲೇನೂ ನಡೆದಿಲ್ಲ. ಸಣ್ಣ ಪ್ರಮಾಣದಾದ್ದರೂ ಅದು ಪರಿಣಾಮಕಾರಿಯಾಗಿದೆ' ಎಂದು ಹೇಳಿದರು.
ಎಲ್ಲರ ಕಾಲದಲ್ಲೂ ಇಂತಹ ಘಟನೆಗಳು ನಡೆದಿವೆ. ಆದರೆ, ಇಂತಹ ಘಟನೆ ನಡೆಯಬಾರದು. ಇತ್ತೀಚೆಗೆ ಇಂಥದ್ದು ಆಗಿರಲಿಲ್ಲ. ಮಂಗಳೂರಲ್ಲಿ ಘಟನೆ ನಡೆದಿತ್ತು. ಬಿಜೆಪಿ ಸರ್ಕಾರದಲ್ಲೂ ಹಲವು ಸ್ಫೋಟಗಳು ನಡೆದಿದ್ದವು. ನಮ್ಮ ಸರ್ಕಾರದಲ್ಲಿ ಇದೇ ಮೊದಲ ಘಟನೆಯಾಗಿದೆ. ಆರೋಪಿಗಳನ್ನ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು' ಎಂದು ತಿಳಿಸಿದರು.
'ಅಲ್ಲಿ ಸ್ಫೋಟ ಆಗಿರುವುದು ಸತ್ಯವಾಗಿದೆ. ಕಾರಣವಾದವರ ವಿರುದ್ಧ ಕಠಿಣ ಕ್ರಮ ಆಗಲಿದೆ. ಈ ವಿಚಾರದಲ್ಲಿ ವಿರೋಧ ಪಕ್ಷದವರು ರಾಜಕಾರಣ ಮಾಡಬಾರದು, ತನಿಖೆಗೆ ಸಹಕಾರ ಕೊಡಬೇಕು' ಎಂದು ಕೋರಿದರು.
ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಸ್ಫೋಟ ಮಾಡಿದವರು ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ವ್ಯಕ್ತಿಯೊಬ್ಬ ಕ್ಯಾಷಿಯರ್ ಬಳಿ ಹೋಗಿ ಟೋಕನ್ ತೆಗೆದುಕೊಂಡಿದ್ದಾನೆ. ಅವರ ಬಳಿ ಬ್ಯಾಗ್ ಇರಿಸಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಗಾಯಾಳುಗಳಿಗೆ ಪರಿಹಾರ ವಿಚಾರ ಈ ಕುರಿತು ಗೃಹ ಸಚಿವರು ಮಾಹಿತಿ ನೀಡುತ್ತಾರೆ. ಸ್ಥಳಕ್ಕೆ ಹೋಗುವಂತೆ ಗೃಹ ಸಚಿವರಿಗೆ ಹೇಳಿದ್ದೇನೆ. ಸಂಪೂರ್ಣ ಮಾಹಿತಿ ಸಿಕ್ಕ ಮೇಲೆ ತಿಳಿಸುತ್ತೇನೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.