ಮೈಸೂರು: ‘ಲಿಂಗಾಯತರಲ್ಲಿರುವ ಒಳಪಂಗಡಗಳು ಒಂದಾಗಬೇಕು’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಇಲ್ಲಿನ ನಟರಾಜ ಸಭಾಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ‘ಫ.ಗು.ಹಳಕಟ್ಟಿ ಜನ್ಮೋತ್ಸವ ಮತ್ತು ವಚನ ಸಾಹಿತ್ಯ ಸಂರಕ್ಷಣೆ-ಶತಮಾನೋತ್ಸವ ಆಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಗ್ಗೂಡುವ ಮೂಲಕ ಅಣ್ಣ ಹುಟ್ಟುಹಾಕಿದ ಸಮಾನತೆಯನ್ನು ರಾಷ್ಟ್ರವ್ಯಾಪಿಗೊಳಿಸಬೇಕು. ಹಿಂದೆ ಒಳಪಂಗಡಗಳ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ’ ಎಂದು ಹೇಳಿದರು.
‘ಒಳಪಂಗಡಗಳಿಗೆ ಒಂದೊಂದು ಪ್ರವರ್ಗಗಳಲ್ಲಿ ಮೀಸಲಾತಿ ಕೇಳುವುದರಿಂದ ನಮ್ಮಲ್ಲಿನ ಒಗ್ಗಟ್ಟು ಒಡೆದು ಹೋಗುತ್ತದೆ. ಆದ್ದರಿಂದ ಅದನ್ನು ಬಿಟ್ಟು ನಮ್ಮಲ್ಲಿನ ಮಕ್ಕಳನ್ನು ಎಲ್ಲರೂ ಗುರುತಿಸಿ ಪ್ರೋತ್ಸಾಹಿಸಿ ಅವರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರುವಂತೆ ಮಾಡಬೇಕು. ಮಹಿಳೆಯರನ್ನು ಸಬಲೀಕರಣ ಮಾಡಬೇಕು’ ಎಂದು ಸಲಹೆ ನೀಡಿದರು.
ಉಪನ್ಯಾಸ ನೀಡಿದ ವಿಜಯಪುರದ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಎಂ.ಎಸ್.ಮದಭಾವಿ, ‘ವಚನ ಸಾಹಿತ್ಯ ಸಂರಕ್ಷಿಸಿ ಲಿಂಗಾಯತ ಧರ್ಮಕ್ಕೆ ಕಾಯಕಲ್ಪ ನೀಡಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ’ ಎಂದು ಸ್ಮರಿಸಿದರು.
ಹೊಸಮಠದ ಚಿದಾನಂದ ಸ್ವಾಮೀಜಿ, ನೀಲಕಂಠಮಠದ ಸಿದ್ದಮಲ್ಲ ಸ್ವಾಮೀಜಿ, ಕುದೇರು ಮಠದ ಗುರುಶಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ತರಳಬಾಳು ಸಮಾಗಮದ ಅಧ್ಯಕ್ಷ ಎಸ್.ಬಿ.ವಸಂತಕುಮಾರ್, ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಬಿ.ಎಸ್.ಗುರುಪಾದಸ್ವಾಾಮಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ವೀರಶೈವ ಸಜ್ಜನ ಸಂಘದ ಅಧ್ಯಕ್ಷ ಎಚ್.ಟಿ.ಮಲ್ಲಿಕಾರ್ಜುನ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹದೇವಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರೇಚಣ್ಣ, ಕಾರ್ಯದರ್ಶಿ ಬಿ.ಎಂ.ಮರಪ್ಪ, ಕಲಾವಿದ ಎಲ್.ಶಿವಲಿಂಗಪ್ಪ ಪಾಲ್ಗೊಂಡಿದ್ದರು.
ವೈಭವಯುತವಾಗಿ ಜೀವನ ಸಾಗಿಸಲು ಇದ್ದ ಅವಕಾಶಗಳನ್ನೆಲ್ಲ ಬಿಟ್ಟು ವಚನಗಳ ಹಿಂದೆಯೇ ಓಡಾಡಿದ ಫ.ಗು. ಹಳಕಟ್ಟಿಯವರು 20ನೇ ಶತಮಾನದ ಬಸವಣ್ಣಎಂ.ಎಸ್.ಮದಭಾವಿ ಕಾರ್ಯದರ್ಶಿ ವಿಜಯಪುರದ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.