ADVERTISEMENT

ಮೈಸೂರು | ಸಾಗುವಳಿ ಪತ್ರ ಕೊಡಲು ಸರ್ಕಾರ ವಿಳಂಬ ಧೋರಣೆ: ಆರೋಪ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 14:08 IST
Last Updated 17 ನವೆಂಬರ್ 2024, 14:08 IST
ಮೈಸೂರು ತಾಲ್ಲೂಕಿನ ಮಾರ್ಬಳ್ಳಿಯಲ್ಲಿ ಭಾನುವಾರ ನಡೆದ ರೈತರ ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿದರು
ಮೈಸೂರು ತಾಲ್ಲೂಕಿನ ಮಾರ್ಬಳ್ಳಿಯಲ್ಲಿ ಭಾನುವಾರ ನಡೆದ ರೈತರ ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿದರು   

ಮೈಸೂರು: ನಗರಗಳ ಸುತ್ತ ಭೂಮಾಫಿಯಾದವರು ರೈತರನ್ನು ಒಕ್ಕಲೆಬ್ಬಿಸುತ್ತಿರುವುದರ ವಿರುದ್ಧ, 50 ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿದ್ದರೂ ಸಾಗುವಳಿ ಪತ್ರ ಕೊಡದೆ ಸರ್ಕಾರ ವಿಳಂಬ ಧೋರಣೆ ತಳೆದಿರುವುದನ್ನು ಖಂಡಿಸಿ ಹಾಗೂ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ತಾಲ್ಲೂಕಿನ ಮಾರ್ಬಳ್ಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಆಯೋಜಿಸಿದ್ದ ರೈತ ಜಾಗೃತಿ ಸಭೆಯಲ್ಲಿ, ಸಂಘಟಿತ ಹೋರಾಟ ನಡೆಸಲು ನಿರ್ಧರಿಸಲಾಯಿತು.

ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಬಳಿಕ ಕೃಷಿ ಭೂಮಿಯು ಭೂಮಾಫಿಯಾ ಹಾಗೂ ಬಂಡವಾಳಶಾಹಿಗಳ ಕೈವಶವಾಗುತ್ತಿದೆ. ಹಣದಾಸೆಗೆ ಜಮೀನು ಮಾರಿದ ರೈತರು ಕೆಲ ವರ್ಷಗಳಲ್ಲೇ ಹಣ ಕಳೆದುಕೊಂಡು ಭದ್ರತಾ ಸಿಬ್ಬಂದಿ ಮೊದಲಾದ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಲವರು ಕೃಷಿ ತೊರೆದು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ನಿಲ್ಲಿಸಬೇಕಾದರೆ ಭೂಮಾಫಿಯಾಕ್ಕೆ ಕಡಿವಾಣ ಹಾಕಬೇಕಾಗಿದೆ. ಇಲ್ಲದಿದ್ದರೆ ಈಗಿನ ವ್ಯವಸ್ಥೆಯು ರೈತರು ಹಾಗೂ ಕೃಷಿಗೆ ಉಳಿಗಾಲವಿಲ್ಲದಂತೆ ಮಾಡುತ್ತದೆ. ಅದಕ್ಕೆ ಅವಕಾಶ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ತಿಳಿಸಿದರು.

ADVERTISEMENT

‘ಸರ್ಕಾರಗಳು ತಾಳುತ್ತಿರುವ ಕೃಷಿ ವಿರೋಧಿ ಧೋರಣೆಯ ವಿರುದ್ಧ ಹಾಗೂ ಕೃಷಿಯ ಉಳಿವಿಗಾಗಿ ರೈತರೆಲ್ಲರೂ ಜಾಗೃತರಾಗಿ ಸಂಘಟಿತರಾಗಿರಬೇಕು’ ಎಂದರು.

ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಪೈಲ್ವಾನ್ ವೆಂಕಟೇಶ್,  ಜಿಲ್ಲಾ ಘಟಕದ ಕಾರ್ಯದರ್ಶಿ ಬರಡನಪುರ ನಾಗರಾಜ್, ಮುಖಂಡರಾದ ವೀರಣ್ಣ, ಶಿವಣ್ಣ ನಾಯಕ್, ಚಿನ್ನಅಂಕನಾಯಕ, ಲಿಂಗಣ್ಣ, ಮಹದೇವಸ್ವಾಮಿ, ನಾಗೇಶ್, ಬಸವರಾಜು, ಮಹಾಲಿಂಗನಾಯ್ಕ, ರಾಜು, ಮಹದೇವ, ಶ್ರೀಕಂಠ ಹಾಗೂ ಕಮಲಮ್ಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.