ADVERTISEMENT

ಮೈಸೂರು ಜಿಲ್ಲೆ: ‘ಬರ’ದ ವರ್ಷದಲ್ಲಿ 63 ರೈತರ ಆತ್ಮಹತ್ಯೆ

ಈವರೆಗೆ 27 ಪ್ರಕರಣಗಳಲ್ಲಷ್ಟೆ ಸರ್ಕಾರದಿಂದ ಪರಿಹಾರ

ಎಂ.ಮಹೇಶ
Published 1 ಜೂನ್ 2024, 7:37 IST
Last Updated 1 ಜೂನ್ 2024, 7:37 IST
<div class="paragraphs"><p>ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)</p></div>

ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)

   

ಮೈಸೂರು: ತೀವ್ರ ಬರಗಾಲ ಬಾಧಿಸಿದ 2023–24ನೇ ಆರ್ಥಿಕ ವರ್ಷದಲ್ಲಿ ಮೈಸೂರು ಜಿಲ್ಲೆಯಲ್ಲಿ ಬರೋಬ್ಬರಿ 63 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.

ಅವರು ಸಾವಿನ ಮನೆಯ ಕದ ತಟ್ಟಿದ್ದರಿಂದಾಗಿ ಕುಟುಂಬಗಳು ಅತಂತ್ರವಾಗಿದ್ದು, ಸರ್ಕಾರದ ಸಹಾಯಕ್ಕೆ ಕೈಚಾಚುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

2022–23ನೇ ಸಾಲಿನಲ್ಲಿ 75 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ವರದಿಯಾಗಿತ್ತು. ಈ ವರ್ಷ ಸಂಖ್ಯೆ ಕಡಿಮೆಯಾಗಿದೆ.

ಹೋದ ವರ್ಷ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ‘ತೀವ್ರ ಬರಗಾಲಪೀಡಿತ’ ಎಂದು ಘೋಷಿಸಲಾಗಿತ್ತು. ಸಮರ್ಪಕ ಮಳೆಯಾಗದೆ, ಬೆಳೆಯಾಗದೆ ಹಾಗೂ ಅಲ್ಲಲ್ಲಿ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾದ ಸ್ಥಿತಿ ಅವರದಾಗಿತ್ತು. ಅವರಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದವರು ಬದುಕನ್ನು ಕೊನೆಗಾಣಿಸಿಕೊಂಡಿದ್ದಾರೆ.

ಕೃಷಿ ಸೇರಿದಂತೆ ವಿವಿಧ ಇಲಾಖೆಗಳಿಂದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು, ಸರ್ಕಾರದಿಂದ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಹಾಗೂ ಪ್ರೋತ್ಸಾಹಕರ ಉಪಕ್ರಮಗಳ ನಡುವೆಯೂ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಎಲ್ಲರಿಗೂ ಪರಿಹಾರ ಕೊಡಿ

‘ಕೃಷಿ ಇಲಾಖೆಯು ಸರ್ಕಾರಕ್ಕೆ ಸಲ್ಲಿಸುವುದು ವರದಿಯಾಗಿರುವ ಪ್ರಕರಣಗಳು, ‘ವರದಿ ಆಗದಿರುವ’ ಪ್ರಕರಣಗಳೂ ಇವೆ’ ಎನ್ನುತ್ತಾರೆ ರೈತ ಹೋರಾಟಗಾರರು. ‘ಆತ್ಮಹತ್ಯೆ ಮಾಡಿಕೊಂಡ ಎಲ್ಲ ಕುಟುಂಬದವರಿಗೂ ಮಾನವೀಯತೆಯ ಆಧಾರದ ಮೇಲೆ ಪರಿಹಾರ ಕಲ್ಪಿಸಬೇಕು’ ಎನ್ನುವುದು ಅವರ ಒತ್ತಾಯವಾಗಿದೆ.

‘ಹೋದ ವರ್ಷ ಬರಗಾಲದಿಂದ ಸಂಕಷ್ಟ ಎದುರಾಯಿತು. ರೈತರು ಬೆಳೆಯುವ ಬೆಳೆಗಳಿಗೆ ಯಾವ ವರ್ಷದಲ್ಲೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಅವರಿಗೆ ಆರ್ಥಿಕವಾಗಿ ಬೇರೆ ಮೂಲಗಳಿಲ್ಲ. ಬೆಳೆ ವಿಫಲವಾದರೆ ಸಾಲ ಮಾಡಿ ಮತ್ತೊಂದು ಬೆಳೆ ಹಾಕುತ್ತಾರೆ. ಸಾಲದ ಬಾಧೆ ಮೊದಲಾದ ಹಲವು ಕಾರಣಗಳಿಂದ ಅವರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ಅವರಿಗೆ ನೆರವಾಗಲು ಯೋಜನೆ ರೂಪಿಸಬೇಕು. ಸಾಲವನ್ನು ಸಂಪೂರ್ಣ ಮನ್ನಾ ಮಾಡಿ, ಕೃಷಿ ಪರಿಕರಗಳನ್ನು ಸಂಪೂರ್ಣ ಉಚಿತವಾಗಿ ನೀಡಿ ಹೊಸದಾಗಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು’ ಎಂದು ರೈತ ಹೋರಾಟಗಾರ ಅತ್ತಹಳ್ಳಿ ದೇವರಾಜ್‌ ಒತ್ತಾಯಿಸಿದರು.

ಕಾಡಂಚಿನಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ಹಾನಿ ಮೊದಲಾದ ಕಾರಣದಿಂದಾಗುವ ಆರ್ಥಿಕ ನಷ್ಟವನ್ನು ರೈತರು ಎದುರಿಸುತ್ತಿದ್ದಾರೆ. ಸಾಲದ ಬಾಧೆ, ಸಾಲ ಕೊಟ್ಟವರಿಂದ ಬರುವ ನೋಟಿಸ್‌ ಹಾಗೂ ಕಿರುಕುಳ ರೂಪದ ಒತ್ತಡ, ಮರ್ಯಾದೆಗೆ ಹೆದರಿ ಅನ್ನದಾತರು ಆತ್ಮಹತ್ಯೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಇದರಿಂದ ಅವರ ಕುಟುಂಬಗಳು ಅನಾಥವಾಗುತ್ತಿವೆ.

‘ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕುಟುಂಬದವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಯಮಿತವಾಗಿ ಪ್ರಗತಿ ಪರಿಶೀಲಿಸಿ ನಿರ್ದೇಶನ ಕೊಡಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.