ADVERTISEMENT

ಮೈಸೂರು: 9 ತಿಂಗಳಲ್ಲಿ 31 ರೈತರ ಆತ್ಮಹತ್ಯೆ

ತಂಬಾಕು ಬೆಳೆಗಾರರಿಗೆ ತಪ್ಪದ ಸಾಲಬಾಧೆಯ ಸಂಕಷ್ಟ; ನೀಗುತ್ತಿಲ್ಲ ಅನ್ನದಾತನ ಸಮಸ್ಯೆ

ಡಿ.ಬಿ, ನಾಗರಾಜ
Published 24 ಡಿಸೆಂಬರ್ 2019, 5:57 IST
Last Updated 24 ಡಿಸೆಂಬರ್ 2019, 5:57 IST
   

ಮೈಸೂರು: ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗುವ ರೈತರ ಸಂಖ್ಯೆ 2019ರಲ್ಲೂ ತಗ್ಗಿಲ್ಲ. ಸಾವಿನ ಸರಣಿ ಜಿಲ್ಲೆಯ ವ್ಯಾಪ್ತಿಯಲ್ಲೂ ಮುಂದುವರಿದಿದೆ.

ಕಳೆದ ಏಪ್ರಿಲ್‌ನಿಂದ ಡಿ.18ರವರೆಗೆ ಜಿಲ್ಲೆಯ ವ್ಯಾಪ್ತಿಯಲ್ಲಿ 31 ರೈತರು ಸಾವಿಗೆ ಶರಣಾಗಿದ್ದಾರೆ. ಇದರಲ್ಲಿ ತಂಬಾಕು ಬೆಳೆಗಾರರ ಸಂಖ್ಯೆಯೇ ಹೆಚ್ಚು.

ಪಿರಿಯಾಪಟ್ಟಣ, ಹುಣಸೂರು ತಾಲ್ಲೂಕಿನಲ್ಲಿ 22 ರೈತರು ಆತ್ಮಹತ್ಯೆಗೀಡಾಗಿದ್ದು, ತಂಬಾಕು ಬೆಳೆಗಾರರ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಂತಾಗಿದೆ. ಕೆ.ಆರ್.ನಗರ, ಎಚ್‌.ಡಿ.ಕೋಟೆ, ಮೈಸೂರು, ನಂಜನಗೂಡು ತಾಲ್ಲೂಕುಗಳಲ್ಲೂ ರೈತರ ಆತ್ಮಹತ್ಯೆ ಪ್ರಕರಣ ದಾಖಲಾಗಿವೆ.

ADVERTISEMENT

ತಿ.ನರಸೀಪುರ ತಾಲ್ಲೂಕಿನಲ್ಲಿನ ರೈತರ ಆತ್ಮಹತ್ಯೆ ಪ್ರಕರಣಗಳು ಕೃಷಿ ಇಲಾಖೆಯ ದಾಖಲೆಗಳಲ್ಲಿ ನಮೂದಾಗಿಲ್ಲ ಎಂಬುದನ್ನು ಅಂಕಿ–ಅಂಶಗಳು ಖಚಿತಪಡಿಸಿವೆ.

ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವ ಜತೆಗೆ, ಖಾಸಗಿ ಸಾಲ ಮನ್ನಾಕ್ಕಾಗಿ ಋಣಮುಕ್ತ ಕಾಯ್ದೆ ಜಾರಿಗೊಳಿಸಲಾಗಿತ್ತು. ಆದರೂ, ಅದರ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದ ಕಾರಣ ರೈತರ ಸಾವಿನ ಸರಣಿ ಇಂದಿಗೂ ಮುಂದುವರಿದಿದೆ.

‘ವಾಣಿಜ್ಯ ಬೆಳೆ ತಂಬಾಕು ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಬೆಳೆಗಾಗಿ ಭೂಮಿಗೆ ಹಾಕಿದ ಬಂಡವಾಳಕ್ಕೆ ತಕ್ಕಂತ ಪ್ರತಿಫಲ ಸಿಗುತ್ತಿಲ್ಲ. ಪರ್ಯಾಯ ಕಾಣದ ರೈತರಿಗೆ ಇದರಿಂದ ಹೊರಬರಲೂ ಆಗುತ್ತಿಲ್ಲ. ಅನಿವಾರ್ಯವಾಗಿ ಸಾಲದ ಸುಳಿಗೆ ಸಿಲುಕುತ್ತಾರೆ. ಸಾಲ ತೀರಿಸಲು ಆಗದೇ ಹೋದಾಗ ಅಪಮಾನಕ್ಕೀಡಾಗುವುದರಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೇಂದ್ರ ಸರ್ಕಾರವೇ ತಂಬಾಕು ಬೆಳೆಗಾರರಿಗೆ ಶಾಶ್ವತ ಕಾಯಕಲ್ಪ ಕಲ್ಪಿಸಬೇಕಿದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

*
20 ಪ್ರಕರಣಗಳಲ್ಲಿ ತಲಾ ₹ 5 ಲಕ್ಷ ಪರಿಹಾರ ನೀಡಲಾಗಿದೆ. ಹುಣಸೂರು ಉಪಚುನಾವಣೆ ಸಂಬಂಧ 8 ಪ್ರಕರಣ ಇತ್ಯರ್ಥಗೊಂಡಿಲ್ಲ. 2 ತಿರಸ್ಕೃತಗೊಂಡಿವೆ. ಒಂದಕ್ಕೆ ಪೂರಕ ದಾಖಲೆಗಳಿಲ್ಲ.
-ಡಾ.ಬಿ.ಮಹಾಂತೇಶಪ್ಪ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ

*
ರೈತರ ಆತ್ಮಹತ್ಯೆ ವರದಿಯನ್ನು ನೀಡುವ ಅಧಿಕಾರಿಗಳು ಎಲ್ಲ ದೃಷ್ಟಿಕೋನದಿಂದಲೂ ಪರಿಶೀಲಿಸ ಬೇಕು. ಖಾಸಗಿ ಸಾಲವನ್ನು ಪರಿಗಣಿಸ ಬೇಕು. ಮೃತರ ಕುಟುಂಬಕ್ಕೆ ಪರಿಹಾರ ಕೊಡಬೇಕು
-ಬಡಗಲಪುರ ನಾಗೇಂದ್ರ, ರೈತ ಸಂಘ, ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.