ADVERTISEMENT

ಮೈಸೂರು: ಸಚಿವ ಚಲುವರಾಯಸ್ವಾಮಿ–ಜಯರಾಮ ವಾಗ್ವಾದ, ತಳ್ಳಾಟ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 0:30 IST
Last Updated 10 ನವೆಂಬರ್ 2024, 0:30 IST
   

ಮೈಸೂರು: ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸಚಿವ ಎನ್‌. ಚಲುವ ರಾಯಸ್ವಾಮಿ ಹಾಗೂ ಕಾಂಗ್ರೆಸ್‌ ಮುಖಂಡ ಕೀಲಾರ ಜಯರಾಮ ಅವರ ನಡುವೆ ಶುಕ್ರವಾರ ರಾತ್ರಿ ಮಾತಿನ ಚಕಮಕಿ, ತಳ್ಳಾಟ ನಡೆದಿದೆ.

‘ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ರಮೇಶ್‌ ಬಂಡಿಸಿದ್ದೇಗೌಡರ ಮಗಳ ನಿಶ್ಚಿತಾರ್ಥದಲ್ಲಿ ಇಬ್ಬರೂ ಭಾಗ ವಹಿಸಿದ್ದರು. ಕಾರ್ಯಕ್ರಮ ಹೋಟೆಲ್‌ನ ಕೆಳಮಹಡಿಯಲ್ಲಿತ್ತು. ಊಟದ ವ್ಯವಸ್ಥೆ ಮಾಡಲಾಗಿದ್ದ ಮೂರನೇ ಮಹಡಿಯಲ್ಲಿ ವಾಗ್ವಾದ ನಡೆದು, ಕೈ, ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು’ ಎಂದು ಮೂಲಗಳು ತಿಳಿಸಿವೆ.

‘ಸಚಿವರ ಕುರಿತು ಜಯರಾಮ ಅವರು ನಿಂದನೆಯ ಮಾತುಗಳನ್ನು ಆಡಿದರು. ಅದರಿಂದ ಕೆರಳಿದ ಸಚಿವರ ಬೆಂಬಲಿಗರು ಅವರನ್ನು ತಳ್ಳಾಡಿದರು’ ಎಂದೂ ಹೇಳಲಾಗಿದೆ. ಆದರೆ, ಯಾವ ವಿಚಾರಕ್ಕೆ ಘಟನೆ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ.

ADVERTISEMENT

ಕೆಲವು ತಿಂಗಳ ಹಿಂದೆ ನಡೆದಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಜಯರಾಮ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅದಕ್ಕೂ ಮುಂಚೆ ಅವರು ಜೆಡಿಎಸ್‌ನಲ್ಲಿದ್ದರು.

‘ನಮ್ಮಿಬ್ಬರ ನಡುವೆ ಯಾವುದೇ ವಾಗ್ವಾದ ನಡೆದಿಲ್ಲ. ನಿಶ್ಚಿತಾರ್ಥಕ್ಕೆ ಬಂದಿದ್ದ ಅವರಿಗೆ ನಮಸ್ಕರಿಸಿ ನಾನು ಹೊರಬಂದೆ ಅಷ್ಟೇ’ ಎಂದು ಜಯರಾಮ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

‘ವಾಗ್ವಾದಕ್ಕೆ ವರ್ಗಾವಣೆ ಹಣದ ಕುರಿತು ಇಬ್ಬರ ನಡುವಿನ ವಿವಾದವೇ ಕಾರಣ’ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ‌, ‘ಅವರಿಗೂ ನಮಗೂ ಯಾವ ವ್ಯವಹಾರ? ನಾವಿಬ್ಬರು ನಲವತ್ತು ವರ್ಷದಿಂದ ಸ್ನೇಹಿತರು. ನಿಶ್ಚಿತಾರ್ಥದಲ್ಲೂ ಅವರನ್ನು ಹುಡುಕಿಕೊಂಡು ಹೋಗಿಲ್ಲ. ಸಿಕ್ಕಿದಾಗ ನಮಸ್ಕರಿಸಿ ಬಂದಿದ್ದೇನೆ’
ಎಂದರು.

‘ವರ್ಗಾವಣೆ ದಂಧೆ ತಾರಕಕ್ಕೆ: ಮಂತ್ರಿ ಮೇಲೆ ಹಲ್ಲೆ’
ಚನ್ನಪಟ್ಟಣ (ರಾಮನಗರ): ‘ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಕೆಲವರು ವರ್ಗಾವಣೆ ದಂಧೆ ವಿಚಾರವಾಗಿ ಮೈಸೂರಿನಲ್ಲಿ ಹೊಡೆದಾಡಿ ಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಹಣ ಹಂಚಿಕೆ ವಿಚಾರಕ್ಕ ಕಿತ್ತಾಡಿಕೊಂಡಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದ ಒಬ್ಬ ಮಂತ್ರಿಯನ್ನು ಬಹಿರಂಗವಾಗಿ ಹೊಡೆಯುತ್ತಾರೆ ಎಂದರೆ ಈ ರಾಜ್ಯ ಎಲ್ಲಿಗೆ ಬಂದಿದೆ ಎಂಬುದನ್ನು ಗಮನಿಸಬೇಕು’ ಎಂದರು. ಮೈಸೂರಿನಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕೋಡಂಬಳ್ಳಿ ಯಲ್ಲಿ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ‘ಪಕ್ಷದ ಮುಖಂಡ ಕೀಲಾರ ಜಯರಾಂ ಮತ್ತು ನನ್ನ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಬೇಕಿದ್ದರೆ ಅವನನ್ನೇ ಹೋಗಿ ಕೇಳಿ. ಮಾತನಾಡಿದ್ದಕ್ಕೆಲ್ಲಾ ಗಲಾಟೆ ಎನ್ನಲಾಗುತ್ತದೆಯೇ. ಜಯರಾಂ ಮತ್ತು ನಾನು ಸ್ನೇಹಿತರು ಬಿಟ್ಟಾಕಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.