ಮೈಸೂರು: ಬಯಲಿನಲ್ಲಿ ಮೂತ್ರ ವಿಸರ್ಜಿಸಿ, ಕೇಳಲು ಬಂದ ಮಹಿಳಾ ಆರೋಗ್ಯ ನಿರೀಕ್ಷಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಚೇತನ್ ಎಂಬ ಯುವಕನಿಗೆ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಜಯಂತ್ ₹ 1 ಸಾವಿರ ದಂಡ ವಿಧಿಸಿದ್ದಾರೆ.
ತಿಲಕ್‌ನಗರದ ವಲಯ ಕಚೇರಿ ಹಿಂಭಾಗ ಬಯಲಿನಲ್ಲಿ ಈತ ಮೂತ್ರ ವಿಸರ್ಜಿಸುತ್ತಿರುವುದನ್ನು ಮಹಿಳಾ ಆರೋಗ್ಯ ನಿರೀಕ್ಷಕಿಯೊಬ್ಬರು ಪ್ರಶ್ನಿಸಿದ್ದಾರೆ. ಇವರೊಂದಿಗೆ ಅಸಭ್ಯವಾಗಿ ಮಾತನಾಡಿದ ಈತ ‘ಏನು ಮಾಡುತ್ತೀರಿ’ ಎಂದು ಸವಾಲೆಸೆದಿದ್ದಾನೆ.
ಕೂಡಲೇ ವಿಷಯವನ್ನು ಮುಖ್ಯ ಆರೋಗ್ಯಾಧಿಕಾರಿ ಡಾ.ಜಯಂತ್ ಅವರ ಗಮನಕ್ಕೆ ತಂದಿದ್ದಾರೆ. ‘ಅಭಯ್’ ರಕ್ಷಣಾ ತಂಡದೊಂದಿಗೆ ಸ್ಥಳಕ್ಕೆ ಬಂದ ಜಯಂತ್ ಚೇತನ್‌ನನ್ನು ಮಂಡಿ ಠಾಣೆಗೆ ಕರೆದೋಯ್ದಿದ್ದಾರೆ.
ವಿಚಾರಣೆ ವೇಳೆ ಮಾಡಿದ ತಪ್ಪಿಗೆ ಚೇತನ್ ಕ್ಷಮೆ ಯಾಚಿಸಿದ್ದಾನೆ. ನಂತರ, ಬಯಲು ಮೂತ್ರ ವಿಸರ್ಜನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ₹ 1 ಸಾವಿರ ದಂಡ ವಿಧಿಸಲಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಾ.ಜಯಂತ್, ‘ಸಾಮಾನ್ಯವಾಗಿ ಬಯಲಿನಲ್ಲಿ ಮೂತ್ರ ಮಾಡಿದವರಿಗೆ ₹ 100ರಿಂದ ₹ 200ರವರೆಗೆ ದಂಡ ವಿಧಿಸಲಾಗುತ್ತದೆ. ಆದರೆ, ಸಹಕಾರ ನೀಡದೇ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ₹ 1 ಸಾವಿರ ದಂಡ ವಿಧಿಸಲಾಗುತ್ತದೆ. ಇನ್ನು ಮುಂದೆ ಎಲ್ಲೆಡೆ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ದಂಡ ವಿಧಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.