ಎಚ್.ಡಿ.ಕೋಟೆ: ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಹುಲಿ ರಕ್ಷಿತಾರಣ್ಯ ಮತ್ತು ನಂಜನಗೂಡಿನ ಕಿರುಅರಣ್ಯ ಪ್ರದೇಶದಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕರೆ ಪ್ರದೇಶದ ಮರ, ಗಿಡಗಳು ಭಸ್ಮಗೊಂಡಿವೆ.
ಎಚ್.ಡಿ.ತಾಲ್ಲೂಕಿನ ಅಂತರಸಂತೆ ಹೋಬಳಿಯ ಉದ್ಬೂರು ಸಮೀಪದ, ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಬುಧವಾರ ಮಧ್ಯಾಹ್ನದ ನಂತರ ಭಾರಿ ಪ್ರಮಾಣದ ಬೆಂಕಿಯು ಕಾಣಿಸಿಕೊಂಡಿತು. ಹಲವು ಎಕರೆ ಪ್ರದೇಶದ ಅರಣ್ಯವನ್ನು ಇದು ದಹಿಸಿದೆ.
ವೇಗವಾಗಿ ಬೀಸುತ್ತಿರುವ ಗಾಳಿಯಿಂದಾಗಿ, ಕ್ಷಣಾರ್ಧದಲ್ಲಿ ಬೆಂಕಿಯು ಮಾನಂದವಾಡಿ ರಸ್ತೆಯವರೆಗೂ ಹಬ್ಬಿತ್ತು. ಒಟ್ಟು 6 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ಸಿಬ್ಬಂದಿ, ಅರಣ್ಯ ಇಲಾಖೆಯ 200ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ. ಈ ಕಾರ್ಯದಲ್ಲಿ, ಕಾರಾಪುರ ಸಮೀಪದ ಜಂಗಲ್ ಲಾಡ್ಜ್ ಸಿಬ್ಬಂದಿಯ ನೆರವನ್ನೂ ಪಡೆಯಲಾಗಿದೆ.
ದಟ್ಟವಾಗಿ ಬೆಳೆದಿರುವ ಲಾಂಟನಾ ಗಿಡಗಳು ಧಗಧಗಿಸುತ್ತಿವೆ. ಗಗನದೆತ್ತರಕ್ಕೆ ಹೊಗೆ ಹೊರ ಹೊಮ್ಮುತ್ತಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ಅವರು ಮೊಬೈಲ್ ಕರೆ ಸಂಪರ್ಕಕ್ಕೆ ಸಿಗಲಿಲ್ಲ.
ಈ ಕುರಿತು ‘ಪ್ರಜಾವಾಣಿ’ ಅರಣ್ಯಕ್ಕೆ ಸಮೀಪದ ಸೀಗೂರು ಹಾಡಿಯ ರವಿ ಎಂಬುವವರನ್ನು ಸಂಪರ್ಕಿಸಿದಾಗ ಅವರು, ಕಳೆದ ಐದಾರು ವರ್ಷಗಳಲ್ಲಿ ಈ ಭಾಗದಲ್ಲಿ ಕಾಣಿಸಿಕೊಂಡ ಭಾರಿ ಪ್ರಮಾಣದ ಬೆಂಕಿ ಎಂದು ತಿಳಿಸಿದರು.
‘ಇತ್ತೀಚಿನ ವರ್ಷಗಳಲ್ಲಿ ಈ ಭಾಗದ ಅರಣ್ಯದಲ್ಲಿ ಬೆಂಕಿ ಬಿದ್ದಿರಲಿಲ್ಲ. ಇದರಿಂದ ದಟ್ಟವಾಗಿ ಲಾಂಟನಾ ಗಿಡಗಳು ಬೆಳೆದಿವೆ. ಬೆಂಕಿ ಸ್ವಲ್ಪ ಕಾಣಿಸಿಕೊಂಡರೂ ಒಣಗಿರುವ ಲಾಂಟನಾ ಗಿಡಗಳು ಹೊತ್ತಿ ಉರಿಯುತ್ತವೆ. ಇದರಿಂದ ವನ್ಯಜೀವಿಗಳು ಊರಿನತ್ತ ಬರುವ ಆತಂಕ ಎದುರಾಗಿದೆ’ ಎಂದು ಹೇಳಿದರು.
ಮರದಿಂದ ಮರಕ್ಕೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸುತ್ತಿರುವ ದೃಶ್ಯ ಬುಧವಾರ ರಾತ್ರಿಯವರೆಗೂ ಕಂಡು ಬಂತು ಎಂದು ಸ್ಥಳೀಯರು ತಿಳಿಸಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಣಾ ಅಧಿಕಾರಿ ಮಹೇಶ್ ಕುಮಾರ್ ಮಾರ್ಗದರ್ಶನದಲ್ಲಿ ಎಸಿಎಫ್ ಮಹದೇವು, ಆರ್‌ಎಫ್ಒ ಗಳಾದ ಸಿದ್ದರಾಜು, ಮಧು, ಸಂತೋಷ ಹೂಗಾರ್, ಅರಣ್ಯ ಪರಿಪಾಲಕರಾದ ಕೃತಿಕಾ, ಪೂರ್ವಜ್ ವಿಶ್ವನಾಥ್, ಅರಣ್ಯ ಇಲಾಖೆ ಸಿಬ್ಬಂದಿ, ಸರ್ಕಾರಿ ಮತ್ತು ಖಾಸಗಿ ರೆಸಾರ್ಟ್ ಸಿಬ್ಬಂದಿ, ಸ್ಥಳೀಯರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನರು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.