ADVERTISEMENT

ಮೈಸೂರು | ಕಾಡುವ ಪ್ರವಾಹ: ತೋಟಕ್ಕೆ ನುಗ್ಗುವ ನಾಲೆ ನೀರು

ಹುಯಿಲಾಳು ಕೆರೆಗೆ ನದಿ ನೀರು ತುಂಬಿಸಿದ ಪರಿಣಾಮ

ಮೋಹನ್ ಕುಮಾರ ಸಿ.
Published 28 ಡಿಸೆಂಬರ್ 2023, 7:48 IST
Last Updated 28 ಡಿಸೆಂಬರ್ 2023, 7:48 IST
<div class="paragraphs"><p>ಕರುಂಬಯ್ಯ ಅವರ ತೋಟಕ್ಕೆ ನುಗ್ಗಿದ ನೀರು</p></div>

ಕರುಂಬಯ್ಯ ಅವರ ತೋಟಕ್ಕೆ ನುಗ್ಗಿದ ನೀರು

   

ಮೈಸೂರು: ‘ಪಾರಂಪರಿಕ’ ಪೂರ್ಣಯ್ಯ ನಾಲೆ ಆರಂಭವಾಗುವ ಹುಯಿಲಾಳು ಕೆರೆಗೆ 2022ರಲ್ಲಿ ಕಾವೇರಿ ನೀರು ತುಂಬಿಸಿದ ಪರಿಣಾಮ ಮಳೆಗಾಲದಲ್ಲಿ ಕೆರೆಯ ಕೋಡಿ ಬಿದ್ದಿತು. ಅದು ನಾಲೆಗೆ ಭಾರಿ ಪ್ರಮಾಣದಲ್ಲಿ ನುಗ್ಗಿತು. ಒತ್ತುವರಿ ಹಾಗೂ ನಿರ್ವಹಣೆಯಲ್ಲಿದೇ ಸೊರಗಿದ್ದ ನಾಲೆ ಅಲ್ಲಲ್ಲಿ ಒಡೆದದ್ದರಿಂದ ತೋಟಗಳು ಮುಳುಗಿದವು!

‘ದೊಡ್ಡರಾಯನ ಕಟ್ಟೆ’ ಎಂತಲೂ ಕರೆಯುವ ಹುಯಿಲಾಳು ಗ್ರಾಮದ ಈ ಕೆರೆ ಏರಿಯ ಕೆಳಭಾಗದಲ್ಲಿಯೇ ನಿವೃತ್ತ ಮೇಜರ್‌ ಜನರಲ್‌ ಕರುಂಬಯ್ಯ ತೋಟವೂ ಸೇರಿದಂತೆ ಹಲವರ ತೋಟಗಳಲ್ಲಿ ಪೂರ್ಣಯ್ಯ ನಾಲೆಯು ನದಿಯಂತಾಗಿ ಉಕ್ಕಿ ಹರಿದಿತ್ತು.

ADVERTISEMENT

2022ರ ಆಗಸ್ಟ್ ಹಾಗೂ ನವೆಂಬರ್‌ನಲ್ಲಿ ಕರುಂಬಯ್ಯ ಅವರ ಕುಟುಂಬವು ಮೂರ್ನಾಲ್ಕು ದಿನ ತೋಟದ ಮನೆಯಿಂದೀಚೆಗೆ ಬರಲೂ ಆಗಿರಲಿಲ್ಲ. ಆ ಘಟನೆಯನ್ನು ಈಗಲೂ ಹೇಳುವ ಶ್ರೀಮತಿ ದೇಚೂ ಕರುಂಬಯ್ಯ ಅವರು, ಒತ್ತುವರಿದಾರರು, ನಾಲೆ, ಕೆರೆಯ ಬಗ್ಗೆ ಕಾಳಜಿವಹಿಸಿದ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಮಳೆಗಾಲದಲ್ಲಿ ಸ್ವಲ್ಪ ನೀರು ತುಂಬಿ ನವೆಂಬರ್ ವೇಳೆಗೆ ಇಂಗಿಹೋಗುತ್ತಿದ್ದ ಕೆರೆ ಒಣಗಿ ಮೈದಾನದಂತಿರುತ್ತಿತ್ತು. ಹೀಗಾಗಿಯೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಕ್ಷೆಯಲ್ಲಿ ಕೆರೆಯನ್ನೇ ಆಡಳಿತಾಧಿಕಾರಿಗಳು ಮಾಯವಾಗಿಸಿದ್ದರು. ಅಷ್ಟು ಒಣಗಿದ್ದ ಕೆರೆ ಕಳೆದ ವರ್ಷ ತುಂಬಿ ಕೋಡಿ ಹರಿಯಿತು. ತೋಟವು ಪ್ರವಾಹಕ್ಕೆ ಸಿಲುಕಿತ್ತು’ ಎಂದು ದೇಚೂ ಕರುಂಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರು ತಾಲ್ಲೂಕಿನ ಹುಯಿಲಾಳು ಗ್ರಾಮದ ‘ದೊಡ್ಡರಾಯನ ಕಟ್ಟೆ’ ವರ್ಷಾರಂಭದಲ್ಲಿ ಬಿದ್ದ ಕೋಡಿ

‘ಹುಯಿಲಾಳು ಕೆರೆಗೆ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಅದು ನಾಲೆಯ ಪಕ್ಕದಲ್ಲಿಯೇ ಸಾಗುತ್ತಿತ್ತು. ಅಲ್ಲದೇ, ನಾಲೆಯ ಏರಿಯನ್ನು ಒಡೆದು ನಾಶ ಮಾಡಲಾಗಿದೆ. ಅದರಿಂದ ಮುಂಗಾರು ಹಾಗೂ ಹಿಂಗಾರು ಮಳೆಗಳಲ್ಲಿ ನಾಲೆಯ ನೀರು ಮಾದಗಳ್ಳಿ ಕೆರೆಗೆ ಹೋಗುತ್ತಿಲ್ಲ. ಅದು ರಸ್ತೆಗಳು, ಅಕ್ಕಪಕ್ಕದ ತೋಟಗಳಿಗೆ ನುಗ್ಗುತ್ತಿದೆ. ಈ ಬಗ್ಗೆ 2022ರ ಆ.19 ಹಾಗೂ ಡಿ.13ರಂದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ತಹಶೀಲ್ದಾರ್‌ ಅವರಿಗೆ ಪತ್ರ ಬರೆಯಲಾಗಿತ್ತು’ ಎಂದು ಹೇಳಿದರು.

‘ಆಗಿನ ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಸ್ಥಳಕ್ಕೆ ಭೇಟಿ ನೀಡಿ ಪ್ರವಾಹ ತಡೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಕೆಲವು ಭಾಗವಷ್ಟೇ ಕೆಲಸ ಮುಗಿಸಿ ಅಧಿಕಾರಿಗಳು ಮರಳಿದರು. ಆದರೆ, ನಾಲೆಯ ಒತ್ತುವರಿ ತೆರವನ್ನು ಸಂಪೂರ್ಣಗೊಳಿಸಿಲ್ಲ’ ಎಂದರು.

‘ಪ್ರವಾಹದಿಂದ ಬೆಳೆ ಹಾನಿಯಾಗಿತ್ತಲ್ಲದೇ ತೋಟಕ್ಕೆ ಬರುವ ದಾರಿಯು ಸಂಪೂರ್ಣ ಹಾಳಾಗಿತ್ತು. ದಾರಿಯಲ್ಲಿನ ಮಣ್ಣು ಸವೆದು ಎರಡಡಿ ಎತ್ತರ ಕಲ್ಲು ಬಂಡೆಗಳಷ್ಟೇ ಇದ್ದವು. ಅದಲ್ಲದೇ ನಮ್ಮ ದನದ ಕೊಟ್ಟಿಗೆಯ ಭಾಗವೂ ಕುಸಿದಿತ್ತು. ಈ ಬಗ್ಗೆ ಚಿತ್ರ ಸಮೇತ ದೂರು ನೀಡಿದ್ದರೂ, ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ದೇಚೂ ಕರುಂಬಯ್ಯ

ಸೇನೆಯಲ್ಲಿ ಸೇವೆ ಸಲ್ಲಿಸಿ ಪತಿ ನಿವೃತ್ತ ರಾದ ಮೇಲೆ ಹುಯಿಲಾಳಿನಲ್ಲಿ 30 ವರ್ಷದಲ್ಲಿ ತೋಟ ಮಾಡಿಕೊಂಡಿ ದ್ದೇವೆ. ನಾಲೆ ಒತ್ತುವರಿಯಿಂದ ಪ್ರವಾಹವಾದರೂ ಕ್ರಮ ವಹಿಸಿಲ್ಲ
ದೇಚೂ ಕರುಂಬಯ್ಯ
‘ಪ್ರಭಾವಿ ವ್ಯಕ್ತಿಗಳಿಂದಲೂ ಒತ್ತುವರಿ’
‘ಹುಯಿಲಾಳು ಗ್ರಾಮದ ಪೂರ್ಣಯ್ಯ ನಾಲೆಗೆ ಹೊಂದಿಕೊಂಡಿರುವ ಜಮೀನುಗಳು ಬಡಾವಣೆಗಳಾಗುತ್ತಿದ್ದು, ಪ್ರಭಾವಿ ವ್ಯಕ್ತಿಯೊಬ್ಬರು ಬಡಾವಣೆ ನಿರ್ಮಿಸಿದ್ದಾರೆ. ನಾಲೆಯ ಬಫರ್ ವಲಯವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ನಾಲೆ ಏರಿಯು ನಾಶವಾದ್ದರಿಂದ ತೋಟಕ್ಕೆ ನೀರು ನುಗ್ಗುತ್ತಿದೆ’ ಎಂದು ಗ್ರಾಮದ ನಿವಾಸಿ ಚೇತನ್ ಬೇಸರ ವ್ಯಕ್ತಪಡಿಸಿದರು. ‘ನಾಲೆಯನ್ನು ಉಳುಮೆ ಮಾಡಿ ಒತ್ತುವರಿ ಮಾಡಿಕೊಂಡಿದ್ದಾರೆ. ನೀರು ಹೋಗಲು ಜಾಗವಿಲ್ಲದೇ ಹಳ್ಳದ ತೋಟಗಳು ಮುಳುಗಿ ನಾಶವಾಗಿದೆ. ಚಿಕ್ಕ ಫಾರಂ ಮಾಡಿ ಸಾಕಿದ್ದ 150 ನಾಟಿ ಕೋಳಿಗಳು ಕೊಚ್ಚಿ ಹೋಗಿದ್ದವು. ಕುಟುಂಬದವರು ಆಸ್ಪತ್ರೆ ಸೇರುವಂತಾಗಿತ್ತು. ರೈತರ ಕಷ್ಟ ಅಧಿಕಾರಸ್ಥರಿಗೆ ಕೇಳುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.
‘ಬತ್ತಿದ ಕೆರೆಗೆ ನೀರು ಹರಿಸಿದರು’
‘2011 ಹೊರತು ಪಡಿಸಿದರೆ, ಹುಯಿಲಾಳು ಹಾಗೂ ಮಾದಗಳ್ಳಿ ಕೆರೆಗಳು 2021ರವರೆಗೂ ಬತ್ತಿದ್ದವು. 2022ರಲ್ಲಿ ಜೋರು ಮಳೆಯಾದ್ದರಿಂದ ತುಂಬಿದ್ದವು. 2023ರ ಜನವರಿಯಲ್ಲೂ ಪೂರ್ಣ ನೀರಿತ್ತು. ಅದಕ್ಕೆ ಕಬಿನಿ–ಕಾವೇರಿ ನೀರು ತುಂಬಿಸಿದ್ದೇ ಕಾರಣ’ ಎಂದು ಪರಿಸರ ತಜ್ಞ ಯು.ಎನ್‌.ರವಿಕುಮಾರ್ ಹೇಳಿದರು. ‘2007, 2010, 2013, 2015, 2016, 2017, 2018, 2022ರವರೆಗೂ ಗೂಗಲ್‌ ಚಿತ್ರಗಳನ್ನು ಗಮನಿಸಿದಾಗ ಈ ಎರಡೂ ಕೆರೆಗಳು ಬತ್ತಿವೆ. ಕೆರೆಗೆ ನದಿ ನೀರು ತುಂಬಿಸಿದ್ದರಿಂದ ಮಳೆಗಾಲದಲ್ಲಿ ಹೆಚ್ಚುವರಿ ನೀರು ಕೋಡಿ ಬಿತ್ತು. ತೋಟಗಳಿಗೆ ನೀರು ನುಗ್ಗಿತು. ನಾಲೆಯ ಒತ್ತುವರಿಯೂ ಸೇರಿ ಮಾನವ ನಿರ್ಮಿತ ದುರಂತವಿದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.