ADVERTISEMENT

ಮೈಸೂರು: ಫಲಪುಷ್ಪ ಪ್ರದರ್ಶನ ಮುಗಿದರೂ ಜನಜಾತ್ರೆ..!

ಮತ್ತೊಂದು ಪ್ರದರ್ಶನಕ್ಕೆ ಹೆಚ್ಚಿದ ಬೇಡಿಕೆ; ವಾರಾಂತ್ಯದ ಪ್ರದರ್ಶನಕ್ಕೂ ಆಗ್ರಹ

ಡಿ.ಬಿ, ನಾಗರಾಜ
Published 10 ಅಕ್ಟೋಬರ್ 2019, 19:30 IST
Last Updated 10 ಅಕ್ಟೋಬರ್ 2019, 19:30 IST
ಕುಪ್ಪಣ್ಣ ಪಾರ್ಕ್‌ನ ಗಾಜಿನ ಮನೆಯೊಳಗೆ ಜೋಡಿಸಿದ್ದ ಸಿಂಹಾಸನದ ಪ್ರತಿಕೃತಿ ತೆರವುಗೊಳಿಸಿದ ಕಾರ್ಮಿಕರು
ಕುಪ್ಪಣ್ಣ ಪಾರ್ಕ್‌ನ ಗಾಜಿನ ಮನೆಯೊಳಗೆ ಜೋಡಿಸಿದ್ದ ಸಿಂಹಾಸನದ ಪ್ರತಿಕೃತಿ ತೆರವುಗೊಳಿಸಿದ ಕಾರ್ಮಿಕರು   

ಮೈಸೂರು: ನಾಡಹಬ್ಬ ಮೈಸೂರು ದಸರಾ–2019ರ ಅಂಗವಾಗಿ ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜನೆಗೊಂಡಿದ್ದ ಫಲಪುಷ್ಪ ಪ್ರದರ್ಶನಕ್ಕೆ ಬುಧವಾರ ರಾತ್ರಿಯೇ ತೆರೆ ಬಿದ್ದಿದೆ. ಆದರೂ ಗುರುವಾರ ದಿನವಿಡಿ ಉದ್ಯಾನದಲ್ಲಿ ಜನಜಾತ್ರೆ.

ಉದ್ಯಾನದಲ್ಲಿದ್ದ ನಾನಾ ಬಗೆಯ ಹೂವಿನ ಕುಂಡಗಳು, ಹಲವು ಪ್ರತಿಕೃತಿಗಳನ್ನು ವಿವಿಧ ಇಲಾಖೆಗಳ ಸಿಬ್ಬಂದಿ ಹೊತ್ತೊಯ್ಯಲು ಮುಂದಾದರೂ; ಕೊನೆ ಕ್ಷಣದಲ್ಲೂ ಸೆಲ್ಫಿಗೆ ಮುಗಿಬಿದ್ದವರ ಸಂಖ್ಯೆ ಅಪಾರ.

ಉದ್ಯಾನದ ಬಾಗಿಲು ಮುಚ್ಚಿದ್ದರೂ; ಫಲಪುಷ್ಪ ಪ್ರದರ್ಶನ ವೀಕ್ಷಣೆಗಾಗಿ ಭೇಟಿ ನೀಡಿದವರು ಹೆಚ್ಚಿದ್ದರು. ದೂರದ ಊರುಗಳಿಂದಲೂ ಬಂದಿದ್ದರು. ಜನರನ್ನು ನಿಯಂತ್ರಿಸುವಲ್ಲಿ ಕಾವಲು ಸಿಬ್ಬಂದಿ ಹರಸಾಹಸ ಪಟ್ಟರು.

ADVERTISEMENT

ದಸರಾ ಆರಂಭಕ್ಕೂ ಮುನ್ನವೇ ನಾನಾ ನಮೂನೆಯ ಪುಷ್ಪಗಳಿಂದ ಕಂಗೊಳಿಸುತ್ತಿದ್ದ ಉದ್ಯಾನ ಗುರುವಾರ ಸಂಜೆಯೊಳಗೆ ಬಹುತೇಕ ಖಾಲಿಯಾಯ್ತು. ಮಕ್ಕಳ ಮನೋರಂಜನಾ ಆಟೋಟ ಸಾಮಗ್ರಿಗಳು ತಮ್ಮ ಸದ್ದು ನಿಲ್ಲಿಸಿದವು. ಆಹಾರ ಮಳಿಗೆಗಳು ಖಾಲಿಯಾದವು. ಒಂದೆಡೆ ಪಾರ್ಕ್‌ ಖಾಲಿಯಾಗ್ತಾ ಭಣಗುಟ್ಟಿದರೂ; ಜನ ಜಮಾಯಿಸುತ್ತಲೇ ಇದ್ದಿದ್ದು ವಿಶೇಷವಾಗಿತ್ತು.

ಮೊದಲೇ ಬರಬೇಕಿತ್ತು: ‘ದಸರಾ ಸಮಯದಲ್ಲಿ ಸಿಕ್ಕಾಪಟ್ಟೆ ಜನ ಬರ್ತಾರೆ. ಕಾಲಿಡಲು ಜಾಗವಿರಲ್ಲ ಎಂದೇ ಬಂದಿರಲಿಲ್ಲ. ಉತ್ಸವ ಮುಗಿದಿದೆ. ಜನದಟ್ಟಣೆ ಕಡಿಮೆಯಾಗಿದೆ ಎಂದೇ ಕುಟುಂಬ ವರ್ಗದೊಂದಿಗೆ ಬಂದಿದ್ದೇನೆ. ಇಲ್ಲಿಗೆ ಬಂದ ಮೇಲೆ ಮೊದಲೇ ಬರಬೇಕಿತ್ತು ಎನಿಸಿತು’ ಎಂದು ಎಚ್‌.ಡಿ.ಕೋಟೆಯ ಅಯಾಜ್‌ ತಿಳಿಸಿದರು.

ತಮ್ಮ ಕುಟುಂಬದ ಸದಸ್ಯರೊಟ್ಟಿಗೆ ಉದ್ಯಾನದ ಎಲ್ಲೆಡೆ ಸುತ್ತಾಡಿ ಹೂವುಗಳನ್ನು ಕಣ್ತುಂಬಿಕೊಂಡರು. ಹಲವು ಪ್ರತಿಕೃತಿಗಳ ಬಳಿ ನಿಂತು ಗ್ರೂಪ್ ಫೋಟೊ ತೆಗೆದುಕೊಳ್ಳುವ ಜತೆಯಲ್ಲೇ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿದ್ದು ಗೋಚರಿಸಿತು.

ಕುಪ್ಪಣ್ಣ ಪಾರ್ಕ್‌ನ ಎಲ್ಲೆಡೆಯೂ ಗುರುವಾರವೂ ಜನಜಂಗುಳಿ ಮುಂದುವರೆದಿತ್ತು. ಯುವಕ–ಯುವತಿಯರು ತಂಡೋಪ ತಂಡವಾಗಿ ಬಂದರು. ತಮಗಿಷ್ಟದ ಪ್ರತಿಕೃತಿಗಳ ಮುಂದೆ ನಿಂತು ಸರಣಿ ಸೆಲ್ಫಿ ತೆಗೆದುಕೊಂಡಿದ್ದು ವಿಶೇಷವಾಗಿತ್ತು. ಕುಟುಂಬ ವರ್ಗದವರ ಜತೆ ಬಂದಿದ್ದವರು ಹಲವರಿದ್ದರು. ಮುಸ್ಸಂಜೆಯಾದರೂ ಉದ್ಯಾನದಲ್ಲಿ ಜನಜಂಗುಳಿಯಿತ್ತು.

5.25 ಲಕ್ಷಕ್ಕೂ ಹೆಚ್ಚು ಜನರಿಂದ ಪ್ರದರ್ಶನ ವೀಕ್ಷಣೆ

₹ 1.5 ಕೋಟಿ ಟಿಕೆಟ್‌ ಶುಲ್ಕ ಸಂಗ್ರಹ

₹ 85 ಲಕ್ಷ ವೆಚ್ಚದಲ್ಲಿ ಪ್ರದರ್ಶನ ಆಯೋಜನೆ

₹ 65 ಲಕ್ಷ ಆದಾಯ ಆಯೋಜಕರಿಗೆ

ಆಧಾರ: ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.