ADVERTISEMENT

‘ಕೋಲು ಮಂಡೆ ಜಂಗುಮದೇವ’ ಖ್ಯಾತಿಯ ಕಂಸಾಳೆ ಕುಮಾರಸ್ವಾಮಿ ನಿಧನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 15:34 IST
Last Updated 25 ನವೆಂಬರ್ 2024, 15:34 IST
ಕಂಸಾಳೆ ಕುಮಾರಸ್ವಾಮಿ
ಕಂಸಾಳೆ ಕುಮಾರಸ್ವಾಮಿ   

ಮೈಸೂರು: ಖ್ಯಾತ ಕಂಸಾಳೆ ಕಲಾವಿದ, ಇಲ್ಲಿನ ಬಂಡಿಕೇರಿಯ ನಿವಾಸಿ ಕಂಸಾಳೆ ಕುಮಾರಸ್ವಾಮಿ (74) ಸೋಮವಾರ ನಿಧನರಾದರು.

ಅವರಿಗೆ ಪುತ್ರರಾದ ಕಂಸಾಳೆ ರವಿಚಂದ್ರ, ಕಂಸಾಳೆ ಮಾದೇವ್‌ ಕುಮಾರ, ಪುತ್ರಿಯರಾದ ರೂಪಾ, ಪಾರ್ವತಿ ಇದ್ದಾರೆ. ಅಂತ್ಯಕ್ರಿಯೆಯು ಮಂಗಳವಾರ (ನ.26) ಬೆಳಿಗ್ಗೆ 11ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ನಡೆಯಲಿದೆ.

ನಟ ಶಿವರಾಜ್ ಕುಮಾರ್ ಅಭಿನಯದ ‘ಜನುಮದ ಜೋಡಿ’ ಚಿತ್ರದ ‘ಕೋಲು ಮಂಡೆ ಜಂಗುಮದೇವ’ ಹಾಡಿಗೆ ಕುಮಾರಸ್ವಾಮಿ ಕಂಸಾಳೆ ಸಂಗೀತದ ನೃತ್ಯ ಸಂಯೋಜಿಸಿದ್ದರು. ಆ ಮೂಲಕ ವರನಟ ರಾಜಕುಮಾರ್ ಅವರ ಮೆಚ್ಚುಗೆಗೆ ಪಾತ್ರವಾಗಿದ್ದರು. 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಅವರು, ಇಟಲಿ, ರೋಂ, ಟರ್ಕಿ ಸೇರಿದಂತೆ ದೇಶ– ವಿದೇಶಗಳಲ್ಲಿ 600ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದರು.

ADVERTISEMENT

ವರಕೋಡು ಸಮೀಪದ ಬಡಗಲಹುಂಡಿಯಲ್ಲಿ 1951ರಲ್ಲಿ ಜನಿಸಿದ ಅವರು, ತಂದೆ ಕಂಸಾಳೆ ಮಹಾದೇವಯ್ಯ ಅವರಿಂದ ಕಂಸಾಳೆಯನ್ನು ಕಲಿತಿದ್ದರು. 7ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ತಂದೆಯೊಂದಿಗೆ ಪ್ರದರ್ಶನಗಳನ್ನು ನೀಡಲಾರಂಭಿಸಿ, ಅದರಲ್ಲೇ ಮುಂದುವರಿದರು.

ಕಂಸಾಳೆ, ಹಾಡುಗಾರಿಕೆ, ನೃತ್ಯ ಪ್ರಾಕಾರ, ಬೀಸು ಕಂಸಾಳೆಯಲ್ಲಿ ಪರಿಣತಿ ಗಳಿಸಿದ್ದ ಅವರು, ವಿವಿಧ ವಿಷಯಗಳನ್ನು ಕಂಸಾಳೆಗೆ ಒಗ್ಗಿಸಿಕೊಂಡು ಪ್ರಸ್ತುತಪಡಿಸುತ್ತಿದ್ದರು. ಕೆಲವು ನಾಟಕಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

‘ಜಾನಪದ ಲೋಕ’ ಪ್ರಶಸ್ತಿ, ಕನ್ನಡ ಜಾನಪದ ಪರಿಷತ್ತಿನ ‘ಜಾನಪದ ಪ್ರಪಂಚ’, ಕನ್ನಡ ಬಳಗದ ‘ಕಂಸಾಳೆ ಜಾನಪದ ರತ್ನ’, ಕನ್ನಡ ಕ್ರಾಂತಿ ದಳದ ‘ಕಂಸಾಳೆ ಕಂಠೀರವ’ ಬಿರುದು ದೊರೆತಿತ್ತು. ಮುರುಘಾಮಠ, ಆದಿಚುಂಚನಗಿರಿ ಮಠ ಸೇರಿದಂತೆ ಬಹಳಷ್ಟು ಸಂಘ–ಸಂಸ್ಥೆಗಳು ಸನ್ಮಾನಿಸಿದ್ದವು. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿತ್ತು. ಹಲವರು ಅವರಿಂದ ಕಂಸಾಳೆ ಕಲಿತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.