ADVERTISEMENT

ಮಾಸಾಶನ ನಿರೀಕ್ಷೆ: ಕೆಲವರಿಗಷ್ಟೇ ಬಿಡುಗಡೆ ಮಾಡಿ ಸುಮ್ಮನಾದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 3:40 IST
Last Updated 15 ಸೆಪ್ಟೆಂಬರ್ 2021, 3:40 IST
ಬಿ.ಮಂಜಮ್ಮ ಜೋಗತಿ
ಬಿ.ಮಂಜಮ್ಮ ಜೋಗತಿ   

ಮೈಸೂರು: ರಾಜ್ಯದ ಜಾನಪದ ಕಲಾವಿದರ ಪೈಕಿ ಕೆಲವರಿಗಷ್ಟೇ ಮಾಸಾಶನ ಬಿಡುಗಡೆಯಾಗಿದೆ. ಸರ್ಕಾರದ ಈ ನಿರ್ಧಾರದಿಂದ ಉಳಿದ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಜೂನ್‌ ತಿಂಗಳಿಂದ ಮಾಸಾಶನ ದೊರಕಿಲ್ಲ.

ಕರ್ನಾಟಕ ಜಾನಪದ ಅಕಾಡೆಮಿ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಕಲಾವಿದರು ಪ್ರತಿ ತಿಂಗಳು ತಲಾ ₹1,500 ಮಾಸಾಶನ ಪಡೆಯುತ್ತಿದ್ದರು. ಬಾಕಿ ಇದ್ದ ಏಪ್ರಿಲ್‌, ಮೇ ತಿಂಗಳ ಮಾಸಾಶನವನ್ನಷ್ಟೇ ಎಲ್ಲ ಕಲಾವಿದರಿಗೂ ನೀಡಲಾಗಿದೆ. ನಂತರದ ತಿಂಗಳುಗಳ ಮಾಸಾಶನ ಕೆಲವರಿಗಷ್ಟೇ ದೊರಕಿದೆ.

‘ಮಾಸಾಶನ ಬಾಕಿ ಇರುವವರ ವಿವರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಲಾಗಿದೆ. ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಎಷ್ಟು ಕಲಾವಿದರಿಗೆ ಮಾಸಾಶನ ಬಿಡುಗಡೆ ಮಾಡಿಲ್ಲ’ ಎಂಬ ಮಾಹಿತಿಯನ್ನು ಅವರು ನೀಡಲಿಲ್ಲ.

ADVERTISEMENT

‘300 ಲೈಂಗಿಕ ಅಲ್ಪಸಂಖ್ಯಾತರಿಗೆ ತರಬೇತಿ, ಜನಪದ ಕಲೆಗಳಿಗೆ ಸಂಬಂಧಿಸಿ ಅಖಿಲ ಭಾರತ ಮಹಿಳಾ ಸಮಾವೇಶ ಮಾಡಬೇಕೆಂಬ ಉದ್ದೇಶವಿತ್ತು. ಆದರೆ, ಕೋವಿಡ್‌ನಿಂದಾಗಿ ಅನುದಾನದ ಕೊರತೆ ಎದುರಾಗಿದೆ’ ಎಂದು ವಿಷಾದಿಸಿದರು.

‘ಅಕಾಡೆಮಿಗೆ ನಾನು ಅಧ್ಯಕ್ಷೆಯಾದಾಗ ₹1 ಕೋಟಿ ಅನುದಾನ ದೊರೆತಿತ್ತು. ಹಿಂದಿನ ವರ್ಷ ₹ 80 ಲಕ್ಷ, ಈ ಬಾರಿ ₹60 ಲಕ್ಷ ದೊರೆತಿದೆ. ಅಕಾಡೆಮಿಯ ಖರ್ಚಿಗೆ ₹ 20 ಲಕ್ಷ, ವಾರ್ಷಿಕ ಪ್ರಶಸ್ತಿಗಳಿಗೆ ₹20 ಲಕ್ಷ ಖರ್ಚಾಗುತ್ತದೆ. ಉಳಿದ ₹20 ಲಕ್ಷದಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಈ ಹಣ ಯಾವುದಕ್ಕೂ ಸಾಲುವುದಿಲ್ಲ’ ಎಂದರು.

‘ದೈವಾರಾಧನೆ’ ಕಲಾವಿದರಿಗೆ ಮಾಸಾಶನ: ‘ಉಡುಪಿ ಜಿಲ್ಲೆಯಲ್ಲಿ ಆಚರಣೆಯಲ್ಲಿರುವ ‘ದೈವಾರಾಧನೆ’ಯನ್ನು ಜಾನಪದ ಪ್ರಕಾರಕ್ಕೆ ಸೇರಿಸಬೇಕು. ಆ ಕಲಾವಿದರಿಗೆ ಮಾಸಾಶನ ನೀಡಲು, ಅರ್ಹ ಕಲಾವಿದರ ಪಟ್ಟಿಯನ್ನು ಅಕಾಡೆಮಿಗೆ ಕಳುಹಿಸುವಂತೆ ಸಹಾಯಕ ನಿರ್ದೇಶಕರಿಗೆ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‌ಕುಮಾರ್‌ ಸೂಚಿಸಿದ್ದಾರೆ’ ಎಂದು ತಿಳಿಸಿದರು.

***
ಕಲೆಗಳ ಬಗ್ಗೆ ವಿಶೇಷ ಆಸಕ್ತಿಯುಳ್ಳ ಸಚಿವ ವಿ.ಸುನೀಲ್‌ ಕುಮಾರ್‌ ಮಾಸಾಶನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
-ಬಿ.ಮಂಜಮ್ಮ ಜೋಗತಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.