ಮೈಸೂರು: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಆವರಣವು ಗುರುವಾರ ಜನಪದ ಗೀತೆಗಳಲ್ಲಿ ಮುಳುಗೆದ್ದಿತು. ಜನಪದ ಗಾಯಕ ಎಂ.ಮಳವಳ್ಳಿ ಮಹದೇವಸ್ವಾಮಿ ಅವರ ಒಂದೊಂದು ಗೀತೆಯೂ ಕೇಳುಗರ ಹೃದಯಕ್ಕೆ ನಾಟಿತು.
ಸಂಸ್ಥೆಯ ಕನ್ನಡ ಸಹೃದಯ ಬಳಗವು ಗುರುವಾರ ಆಯೋಜಿಸಿದ್ದ ಜಾನಪದ ಕಲಾಸೌರಭವು ಇಂಪಾದ ಗೀತೆಗಳೊಂದಿಗೆ ಬದುಕಿಗೆ ದಾರಿದೀಪವಾಗಬಲ್ಲ ಮಾತುಗಳಿಗೆ ಸಾಕ್ಷಿಯಾಯಿತು. ಆಧುನಿಕ ಕಾಲದಲ್ಲಿ ಜನಪದ ಹಾಡುಗಳ ಅರ್ಥ ಕೆಡಿಸುತ್ತಿರುವ ಬಗ್ಗೆ ಚರ್ಚೆಯಾಯಿತು. ‘ಸಿನಿಮಾದವರು ಜನಪದ ಹಾಡುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ನಾವು ಅವರಿಂದ ಎರವಲು ಪಡೆದಿಲ್ಲ’ ಎಂಬ ಮಹದೇವಸ್ವಾಮಿ ಮಾತು ಮಾರ್ಮಿಕವಾಗಿತ್ತು.
‘ಚೆಲ್ಲಿದರೂ ಮಲ್ಲಿಗೆಯಾ, ಬಾಣಾ ಸುರೇರಿ ಮ್ಯಾಲೆ’ ಹಾಡಿನಿಂದ ಆರಂಭವಾದ ಜಾನಪದ ಕಲಾಸೌರಭವು ನಿರಂತರವಾಗಿ ಎರಡು ಗಂಟೆಗಳ ಕಾಲ ಮನರಂಜಿಸಿತು. ‘ಎಲ್ಲೋ ಜೋಗಪ್ಪ ನಿನ್ನ ಅರಮನೆ, ಎಲ್ಲೋ ಜೋಗಪ್ಪ ನಿನ್ನ ತಳಮನೆ’ ಹಾಡಿಗೆ ಪ್ರೇಕ್ಷಕರೂ ಧ್ವನಿಗೂಡಿಸಿದರು. ‘ಸೋಜುಗಾದ ಸೂಜು ಮಲ್ಲಿಗೆ, ಮಾದೇವ ನಿನ್ನ ಮಂಡೆ ಮ್ಯಾಲೆ ದುಂಡು ಮಲ್ಲಿಗೆ’ ಹಾಡು ಕೇಳುಗರಿಗೆ ಹಿತಾನುಭವ ನೀಡಿತು.
ಎಂ. ಮಳವಳ್ಳಿ ಮಾದೇವಸ್ವಾಮಿ ಮಾತನಾಡಿ, ‘ಜನಪದ ಕಲೆ ಹಳೇ ಬೇರು ಹೊಸ ಚಿಗುರಿದ್ದಂತೆ. ಅಕ್ಷರ ಜ್ಞಾನ ಇಲ್ಲದಿದ್ದರೂ, ಪೂರ್ವಿಕರು ಕಟ್ಟಿ ಬೆಳೆಸಿದ ಹಾಡಗಳನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಆದರೆ, ಈಚೆಗೆ ಅವನ್ನು ತಪ್ಪಾಗಿ ಹಾಡುತ್ತಿದ್ದು, ಸಾಹಿತ್ಯ ಅರಿತು ಹಾಡಬೇಕು’ ಎಂದು ಸಲಹೆ ನೀಡಿದರು.
‘ಜನಪದ ಕಲೆಗಳನ್ನು ವಿದೇಶಿಗರೂ ಇಷ್ಟಪಡುತ್ತಾರೆ. ಈ ಕಲೆಗಿರುವ ಗಟ್ಟಿತನದಿಂದಾಗಿ ದೇಶ ಹಾಗೂ ರಾಜ್ಯದಲ್ಲೂ ಕಲಾವಿದರಿಗೆ ವಿಶೇಷ ಸ್ಥಾನಮಾನವಿದೆ. ಕಲೆಯನ್ನು ಅಭ್ಯಾಸ ಮಾಡಿದೊಡನೆ ಪ್ರತಿಫಲ ದೊರಕಬೇಕೆಂದು ಅಪೇಕ್ಷೆ ಪಡಬಾರದು. ನಿರಂತರವಾಗಿ ಅದರಲ್ಲಿ ತೊಡಗಿಸಿಕೊಂಡಾಗ ಪ್ರಶಸ್ತಿ, ಸನ್ಮಾನ ನಮ್ಮನ್ನು ಅರಸಿಕೊಂಡು ಬರುತ್ತವೆ’ ಎಂದರು.
ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ಹಾಗೂ ಸಂಘದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.