ADVERTISEMENT

ಹಲವು ಲೋಪ: ಅಧಿಕಾರಿಗಳಿಗೆ ಆಹಾರ ಆಯೋಗದ ಚಾಟಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 12:49 IST
Last Updated 21 ಜೂನ್ 2024, 12:49 IST
   

ಮೈಸೂರು: ಜಿಲ್ಲೆಯಲ್ಲಿ ಮೂರು ದಿನ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಿದ್ದ ರಾಜ್ಯ ಆಹಾರ ಆಯೋಗವು ಹಲವು ನ್ಯೂನತೆಗಳನ್ನು ಗಮನಿಸಿದ್ದು, ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಚ್‌.ಕೃಷ್ಣ ಅವರು, ‘ಉತ್ತಮ ಕೆಲಸ ಮಾಡುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸುತ್ತೇವೆ. ಆದರೆ, ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ನ್ಯಾಯಬೆಲೆ ಅಂಗಡಿಗಳಲ್ಲಿ ಜಾಗೃತ ಸಮಿತಿಯ ಸದಸ್ಯರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಪ್ರದರ್ಶಿಸಿಲ್ಲ. ಹೀಗಾದರೆ, ಪಡಿತರ ಚೀಟಿದಾರರು ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು?’ ಎಂದು ಕೇಳಿದರು.

ADVERTISEMENT

‘ನಾವು ಭೇಟಿ ಕೊಟ್ಟಾಗ ಗೋದಾಮಿನಲ್ಲಿದ್ದ ದಾಸ್ತಾನಿಗೂ ರಿಜಿಸ್ಟರ್‌ನಲ್ಲಿರುವ ಮಾಹಿತಿಗೂ ತಾಳೆ ಆಗುತ್ತಿಲ್ಲರಲಿಲ್ಲ. ಹುಣಸೂರು ಹಾಗೂ ಕೆ.ಆರ್. ನಗರ ತಾಲೂಕುಗಳ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಸಮಿತಿಯ ಸದಸ್ಯರ ಹೆಸರನ್ನು ಹಾಕೇ ಇಲ್ಲ. ಪಡಿತರವನ್ನು ನಿಗದಿತ ದಿನಗಳಲ್ಲಿ ವಿತರಣೆ ಮಾಡಬೇಕು ಎಂಬ ನಿಯಮವಿದ್ದರೂ ಅದು ಪಾಲನೆ ಆಗುತಿಲ್ಲ. ಆಹಾರ ಇನ್‌ಸ್ಪೆಕ್ಟರ್‌ಗಳು ನಿಗಾ ವಹಿಸಿ ಕೆಲಸ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

ಶಕ್ತಿ ತುಂಬುವ ಕೆಲಸ ಮಾಡಿ

‘ಪ್ರತಿ ಪ್ರಜೆಗೂ ಗುಣಮಟ್ಟದ ಆಹಾರ ಪದಾರ್ಥ ಒದಗಿಸುವುದು ಸರ್ಕಾರ ಹಾಗೂ ನಮ್ಮೆಲ್ಲರ ಜವಾಬ್ದಾರಿ. ಧ್ವನಿ ಇಲ್ಲದವರು, ಬಡವರು, ರೈತರು, ಮಹಿಳೆಯರು ಮತ್ತು ಮಕ್ಕಳಿಗೆ ಹಾಗೂ ಶ್ರಮಿಕರಿಗೆ ಶಕ್ತಿ ತುಂಬುವ ಕೆಲಸವಾಗಬೇಕು’ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪ್ರತಿಕ್ರಿಯಿಸಿ, ‘ಅಗತ್ಯಕ್ಕಿಂತ ಹೆಚ್ಚು ಸ್ಟಾಕ್ ಇದ್ದರೆ ಅಂಥವರಿಗೆ ಕಾರಣಕೇಳಿ ನೋಟಿಸ್‌ ಜಾರಿಗೊಳಿಸಬೇಕು. ಗೋದಾಮುಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಪಡಿತರವನ್ನು ಎಲ್ಲಾದರೂ ಬೇರೆಡೆಗೆ ಸಾಗಿಸಲಾಗುತ್ತಿದೆಯೇ ಎಂಬುದನ್ನು ಗಮನಿಸಬೇಕು. ಒಂದು ವೇಳೆ ಲೋಪ ಕಂಡುಬಂದಲ್ಲಿ ಫುಡ್‌ ಇನ್‌ಸ್ಪಕ್ಟರ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಅವರಿಗೆ ಸೂಚಿಸಿದರು.

ಮೊಟ್ಟೆ ಕೊಟ್ಟಿರಲಿಲ್ಲ

ಆಯೋಗದ ಸದಸ್ಯ ಸುಮಂತರಾವ್ ಮಾತನಾಡಿ, ‘ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾಗಿ ಮೊಟ್ಟೆ ವಿತರಣೆ ಆಗುತಿಲ್ಲ. ಮಂಗಳವಾರ ಹಾಗೂ ಶುಕ್ರವಾರ ಮೊಟ್ಟೆ ನೀಡಬೇಕೆಂದಿದೆ. ಆದರೆ, ನಾವು ಭೇಟಿ ನೀಡಿದ ದಿನ (ಮಂಗಳವಾರ) ಮೊಟ್ಟೆ ಕೊಟ್ಟಿರಲಿಲ್ಲ. ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೆಲವೆಡೆ ಸ್ವಚ್ಛತೆ ಕಾಪಾಡಿದ್ದಾರೆ’ ಎಂದರು.

ಸದಸ್ಯೆ ರೋಹಿಣಿ ಪ್ರಿಯ ಮಾತನಾಡಿ, ‘ಬಹುತೇಕ ಹಾಸ್ಟೆಲ್‌ಗಳಲ್ಲಿ ಸರಿಯಾದ ಹಾಸಿಗೆ ವ್ಯವಸ್ಥೆ ಇಲ್ಲ. ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಮುಖ್ಯ ಅಡುಗೆಯವನಿಗೆ ಎಚ್‌ಎಂ ಪ್ರಭಾರ!

‘ಹಾಸ್ಟೆಲ್ ಒಂದರಲ್ಲಿ ಶೂ ಮತ್ತು ಸಾಕ್ಸ್ ಸ್ಟಾಕ್ ಇದ್ದರೂ ವಿತರಣೆ ಮಾಡಿರಲಿಲ್ಲ’ ಎಂದು ತಿಳಿಸಿದರು. ಈ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಡಿ.ಬಿ. ಕುಪ್ಪೆಯ ಆಶ್ರಮ ಶಾಲೆಯಲ್ಲಿ ವಿಜ್ಞಾನ ಹಾಗೂ ಗಣಿತ ಶಿಕ್ಷಕರಿಲ್ಲ. ಮುಖ್ಯ ಅಡುಗೆಯವರಿಗೆ ಮುಖ್ಯ ಶಿಕ್ಷಕನ ಪ್ರಭಾರ ಕೊಡಲಾಗಿದೆ ಎಂದು ಆಯೋಗ ತಿಳಿಸಿತು. ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಅಲ್ಲಿ ಕಾಯಂ ಶಿಕ್ಷಕರು ಇಲ್ಲದ ಕಾರಣ ಅವರಿಗೆ ಪ್ರಭಾರ ನೀಡಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

ಆಯೋಗದ ಸದಸ್ಯರಾದ ಮಾರುತಿ ಎಂ.ದೊಡ್ಡಲಿಂಗಣ್ಣನವರ, ಎ.ರೋಹಿಣಿ ಪ್ರಿಯ, ಕೆ.ಎಸ್.ವಿಜಯಲಕ್ಷ್ಮಿ, ಸದಸ್ಯ ಕಾರ್ಯದರ್ಶಿ ಸುಜಾತಾ ಹೊಸಮನಿ, ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.