ಜಯಪುರ: ಹೋಬಳಿಯ ಚಿಕ್ಕನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಎರಡು ಕಾಡಾನೆಗಳು ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿದ್ದು, ಸ್ಥಳೀಯ ರೈತರ ಬೆಳೆಗಳನ್ನು ನಾಶ ಪಡಿಸುತ್ತಿವೆ.
ಅರಣ್ಯ ಇಲಾಖೆ ಸಿಬ್ಬಂದಿಯು ದಸರಾ ಆನೆಗಳಾದ ಮಹೇಂದ್ರ ಮತ್ತು ಭೀಮನ ಬಳಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದು, ಕಾಡಾನೆಗಳನ್ನು ಚಿಕ್ಕದೇವಮ್ಮ ಬೆಟ್ಟದ ಕಾಡಿಗೆ ಅಟ್ಟಲು ಪ್ರಯತ್ನ ನಡೆದಿದೆ.
ಸೋಮವಾರ ರಾತ್ರಿ ಮಾವಿನಹಳ್ಳಿ ಗ್ರಾಮದಲ್ಲಿನ ರೈತರ ಜಮೀನಿಗೆ ಲಗ್ಗೆ ಇಟ್ಟಿದ್ದ ಕಾಡಾನೆಗಳು ಟೊಮೊಟೊ, ಬೀನ್ಸ್, ಎಲೆಕೋಸು, ಪಡುವಲ ಕಾಯಿ ಸೇರಿದಂತೆ ಹಲವು ತರಕಾರಿ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿವೆ. ಕಬ್ಬು, ಬಾಳೆ, ಸಪೋಟ ತೋಟಗಾರಿಕೆ ಬೆಳೆಗಳನ್ನೂ ನಾಶಮಾಡಿವೆ. ಮಹದೇವಪುರದ ಸಿಎಂಎಂ ಪಬ್ಲಿಕ್ ಶಾಲೆಯ ಬಳಿ 2 ಎಕರೆ ಪ್ರದೇಶದಲ್ಲಿ ಚಪ್ಪರ ಹಾಕಿ ಬೆಳೆದಿದ್ದ ಪಡುವಲ ಕಾಯಿ ತೋಟವನ್ನು ಸಂಪೂರ್ಣ ಮುರಿದು ಹಾಕಿವೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮಾವಿನಹಳ್ಳಿ ಗ್ರಾಮದ ರೈತ ಚಿಕ್ಕ ಮರೀಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಸ್ಥಳೀಯ ಬೆಟ್ಟದಬೀಡು, ಸೋಲಿಗರ ಕಾಲೊನಿ, ಗುಜ್ಜೆ ಗೌಡನಪುರ, ಕಾಡನಹಳ್ಳಿ ಗ್ರಾಮಗಳಲ್ಲಿ ಬೆಳೆ ನಾಶ ಪಡಿಸಿವೆ. ಸ್ಥಳೀಯ ಗ್ರಾಮಸ್ಥರು ಭಯಬೀತರಾಗಿದ್ದು, ಕೃಷಿ ಚಟುವಟಿಕೆಗಳನ್ನು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಕಾರ್ಯಚರಣೆಯಲ್ಲಿ ಮೈಸೂರು, ಹುಣಸೂರು, ಸರಗೂರು, ಎಚ್.ಡಿ.ಕೋಟೆ ಉಪ ಅರಣ್ಯ ವಿಭಾಗದ ಎಸಿಎಫ್, ಡಿಸಿಎಫ್, ಆರ್‌ಎಫ್ಒ ಅಧಿಕಾರಿಗಳ ತಂಡವು ಮತ್ತು ಎಲ್.ಟಿ.ಎಫ್ ಕಮಾಂಡೊ ಸಹಿತ 60 ಜನ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ‘ಸಧ್ಯ ಆನೆಗಳು ಮಂಡನಹಳ್ಳಿ ಗ್ರಾಮದ ಸಮೀಪದ ಅರಣ್ಯದಲ್ಲಿ ಬೀಡು ಬಿಟ್ಟಿವೆ. ತ್ವರಿತ ಕಾರ್ಯಾಚರಣೆ ನಡೆಸಿ ಕಾಡಿಗಟ್ಟಲಾಗುವುದು. ಆನೆ ದಾಳಿಯಿಂದ ಬೆಳೆ ಹಾನಿಯಾದ ರೈತರಿಗೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡಲಾಗುವುದು’ ಎಂದು ಮೈಸೂರು ಆರ್.ಎಫ್.ಒ ಮಹಮ್ಮದ್ ಝೀಷನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.