ADVERTISEMENT

ಮೈಮುಲ್‌ ಚುನಾವಣೆ: ಜಿಟಿಡಿ ಪ್ರಭಾವ ತಗ್ಗಿಸಲು ಅಖಾಡಕ್ಕಿಳಿದ ‘ದಳಪತಿ’

ಮೈಮುಲ್‌ ಚುನಾವಣೆ: ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆಗಿಳಿದ ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ

ಡಿ.ಬಿ, ನಾಗರಾಜ
Published 11 ಮಾರ್ಚ್ 2021, 3:02 IST
Last Updated 11 ಮಾರ್ಚ್ 2021, 3:02 IST
ಎಚ್‌.ಡಿ ಕುಮಾರಸ್ವಾಮಿ ಮತ್ತು ಜಿ.ಟಿ ದೇವೇಗೌಡ
ಎಚ್‌.ಡಿ ಕುಮಾರಸ್ವಾಮಿ ಮತ್ತು ಜಿ.ಟಿ ದೇವೇಗೌಡ    

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ (ಮೈಮುಲ್‌) ಚುನಾವಣೆ ಇದೀಗ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಜೆಡಿಎಸ್‌ ಶಾಸಕರಾಗಿದ್ದರೂ ಪಕ್ಷದ ಎಲ್ಲ ಚಟುವಟಿಕೆಗಳಿಂದ ದೂರವಿರುವ, ಅವಿಭಜಿತ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಹೊಂದಿರುವ ಶಾಸಕ ಜಿ.ಟಿ.ದೇವೇಗೌಡ ಅವರ ಶಕ್ತಿ ಕುಂದಿಸಲಿಕ್ಕಾಗಿಯೇ ‘ದಳಪತಿ’ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಮೈಮುಲ್‌ ಚುನಾವಣೆಯ ಅಖಾಡ ಪ್ರವೇಶಿಸಿದ್ದಾರೆ.

ಕರ್ನಾಟಕ ಹಾಲು ಮಹಾಮಂಡಲದಲ್ಲಿ (ಕೆಎಂಎಫ್‌) ತನ್ನದೇ ಪ್ರಾಬಲ್ಯ ಹೊಂದಿರುವ ಶಾಸಕ ಎಚ್‌.ಡಿ.ರೇವಣ್ಣ ಸಹ ಸಹೋದರನಿಗೆ ಸಾಥ್‌ ನೀಡಲಿಕ್ಕಾಗಿಯೇ, ಹೂಟಗಳ್ಳಿಯ ಸೈಲೆಂಟ್‌ ಶೋರ್‌ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿ ಚರ್ಚೆ ನಡೆಸಿರುವುದು ಇದೀಗ ಮೈಮುಲ್‌ನ ಅಂಗಳದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ.

ADVERTISEMENT

ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯದಿದ್ದರೂ, ಶತಾಯ–ಗತಾಯ ಜಿ.ಟಿ.ದೇವೇಗೌಡ ಬಣವನ್ನು ಸೋಲಿಸಬೇಕು. ಈ ಚುನಾವಣೆಯಲ್ಲಿ ಜಿಟಿಡಿಗೆ ಮುಖಭಂಗವಾದರೆ ಜಿಲ್ಲೆಯಲ್ಲಿ ಅವರ ಪ್ರಾಬಲ್ಯ ಕುಂದಲಿದೆ. ಯಾವ ಪಕ್ಷದವರು ಮನ್ನಣೆ ನೀಡಲ್ಲ. ಗಂಭೀರವಾಗಿ ಕೆಲಸ ಮಾಡಿ. ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕು ಎಂಬ ಚರ್ಚೆ ಸಭೆಯಲ್ಲಿ ನಡೆದಿದೆ ಎಂಬುದು ಗೊತ್ತಾಗಿದೆ.

‘ಯಾವ ಭಾಗದಲ್ಲಿ ಯಾರೊಟ್ಟಿಗೆ ಮೈತ್ರಿ ಮಾಡಿಕೊಂಡರೆ ಅನುಕೂಲವಾಗಲಿದೆ ಎಂಬುದನ್ನು ಪರಿಗಣಿಸಿ, ಹೊಂದಾಣಿಕೆ ಮಾಡಿಕೊಳ್ಳಿ ಎಂಬ ಸೂಚನೆಯನ್ನು ದಳಪತಿ ನೀಡಿದ್ದಾರೆ. ರೇವಣ್ಣ ತಮ್ಮದೇ ತಂತ್ರಗಾರಿಕೆ ರೂಪಿಸಿಕೊಟ್ಟರು’ ಎಂದು ಸಭೆಯಲ್ಲಿದ್ದ ಜೆಡಿಎಸ್‌ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಿ.ನರಸೀಪುರ ಶಾಸಕ ಅಶ್ವಿನ್‌ ಕುಮಾರ್‌ ಸಹ ಸಭೆಯಲ್ಲಿದ್ದರು.

ಮಹದೇವ್‌ ಅಸಮಾಧಾನ

‘ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನ ಮಗನನ್ನು ಸೋಲಿಸಲು ಸಾ.ರಾ.ಮಹೇಶ್‌ ಕಾಂಗ್ರೆಸ್‌ನ ಮಾಜಿ ಶಾಸಕ ವೆಂಕಟೇಶ್‌ ಜೊತೆ ಕೈ ಜೋಡಿಸಿದ್ದಾರೆ ಎಂದು ಪಿರಿಯಾಪಟ್ಟಣದ ಶಾಸಕ ಕೆ.ಮಹದೇವ್‌ ಸಭೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದರು. ಇಬ್ಬರ ನಡುವೆ ವಾಗ್ವಾದ ನಡೆಯಿತು’ ಎಂದು ಜೆಡಿಎಸ್‌ನ ಮೂಲಗಳು ತಿಳಿಸಿವೆ.

29 ಅಭ್ಯರ್ಥಿಗಳು ಅಂತಿಮ ಅಖಾಡದಲ್ಲಿ

ಮೈಮುಲ್‌ನ 15 ನಿರ್ದೇಶಕ ಸ್ಥಾನಗಳಿಗೆ ಮಾರ್ಚ್‌ 16ರಂದುಚುನಾವಣೆ ನಡೆಯಲಿದೆ. 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೈಸೂರು ಉಪ ವಿಭಾಗದ 7 ನಿರ್ದೇಶಕ ಸ್ಥಾನಗಳಿಗೆ 15 ಆಕಾಂಕ್ಷಿಗಳು ಸ್ಪರ್ಧೆಯಲ್ಲಿದ್ದಾರೆ.

ಐದು ಸಾಮಾನ್ಯ ಕ್ಷೇತ್ರದಿಂದ ಆಯ್ಕೆ ಬಯಸಿ 11 ಜನ ಅಖಾಡದಲ್ಲಿದ್ದಾರೆ. ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಸಾಮಾನ್ಯ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದಾರೆ. ಎರಡು ಮಹಿಳಾ ಕ್ಷೇತ್ರಕ್ಕೆ ನಾಲ್ವರು ವನಿತೆಯರು ಸ್ಪರ್ಧಿಸಿದ್ದು, ಸುನೀತಾ ವೀರಪ್ಪಗೌಡ ಸೇರಿದರೆ ಒಟ್ಟು ಐವರು ಮಹಿಳೆಯರು ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ಜನಾರ್ದನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಣಸೂರು ಉಪ ವಿಭಾಗದ 8 ನಿರ್ದೇಶಕ ಸ್ಥಾನಗಳಿಗೆ 14 ಜನರು ಸ್ಪರ್ಧಿಸಿದ್ದಾರೆ. ಆರು ಸಾಮಾನ್ಯ ಕ್ಷೇತ್ರಕ್ಕೆ 10 ಜನ ಪುರುಷರೇ ಸ್ಪರ್ಧಿಸಿದ್ದು, ಮಹಿಳಾ ಕ್ಷೇತ್ರಕ್ಕೆ ನಾಲ್ವರು ವನಿತೆಯರು ಸ್ಪರ್ಧಿಸಿದ್ದಾರೆ.

ನಾಲ್ವರು ಕಣದಿಂದ ವಾಪಸ್‌

ಉಮೇದುವಾರಿಕೆ ವಾಪಸ್‌ ಪಡೆಯಲು ಅಂತಿಮ ದಿನವಾಗಿದ್ದ ಬುಧವಾರ ನಾಲ್ವರು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಶಿವಣ್ಣ, ಕೆ.ಶಿವಣ್ಣ ಎಂಬ ಇಬ್ಬರು ಸ್ಪರ್ಧಿಗಳು ಮೈಸೂರು ಉಪ ವಿಭಾಗದಿಂದ ತಮ್ಮ ಉಮೇದುವಾರಿಕೆ ವಾಪಸ್ ಪಡೆದಿದ್ದರೆ; ಹುಣಸೂರು ಉಪ ವಿಭಾಗದಿಂದ ನಂ.ಸಿದ್ದಪ್ಪ, ಎಚ್‌.ಜಿ.ಪರಶಿವಮೂರ್ತಿ ನಾಮಪತ್ರ ವಾಪಸ್‌ ಪಡೆದಿದ್ದಾರೆ ಎಂದುಚುನಾವಣಾಧಿಕಾರಿ ಜನಾರ್ದನ್‌ ತಿಳಿಸಿದರು.

ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರ ಚಿಕ್ಕಪ್ಪನ ಮಗ, ಅಣ್ಣ ಎಸ್‌.ಕೆ.ಮಧುಚಂದ್ರ, ಶಾಸಕ ಕೆ.ಮಹದೇವ್‌ ಪುತ್ರ ಪ್ರಸನ್ನಕುಮಾರ್‌ ಹುಣಸೂರು ಉಪ ವಿಭಾಗದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಪ್ರಸನ್ನ ಈ ಹಿಂದಿನ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿದ್ದರು.

ಮೈಮುಲ್‌ನ ಮಾಜಿ ಅಧ್ಯಕ್ಷರಾದ ಕೆ.ಜಿ.ಮಹೇಶ್‌, ಎಸ್‌.ಸಿದ್ದೇಗೌಡ, ಕೆ.ಉಮಾಶಂಕರ್, ಎ.ಟಿ.ಸೋಮಶೇಖರ್, ಉಪಾಧ್ಯಕ್ಷ ಬಿ.ಎನ್.ಸದಾನಂದ, ಮಾಜಿ ನಿರ್ದೇಶಕರಾದ ಕೆ.ಸಿ.ಬಲರಾಮ್, ಕೆ.ಎಸ್.ಕುಮಾರ್ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಾಗಿ ಅಖಾಡಕ್ಕಿಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.