ಮೈಸೂರು: ಕೆ.ಸಾಲುಂಡಿ ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಮಂದಿಯಿಂದ ಸಂಗ್ರಹಿಸಿದ್ದ ಮಾದರಿಯಲ್ಲಿ ಐವರಿಗೆ ಕಾಲರಾ ಇರುವುದಾಗಿ ವರದಿ ಬಂದಿದೆ.
‘ಕಲುಷಿತ ನೀರು ಸೇವಿಸಿ ಕನಕರಾಜು ಎಂಬ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಆರಂಭದಲ್ಲಿಯೇ ಗ್ರಾಮದ 10 ಮಂದಿಯ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅವರಲ್ಲಿ ನಾಲ್ಕು ಮಂದಿಯಲ್ಲಿ ಕಾಲರಾ ಬ್ಯಾಕ್ಟೇರಿಯಾ ಕಾಣಿಸಿಕೊಂಡಿರುವುದಾಗಿ ವರದಿ ಬಂದಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ತಿಳಿಸಿದರು.
‘ಒಬ್ಬರಲ್ಲಿ ಕಾಲರಾ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಇರುವ ಎಲ್ಲರಿಗೂ ಪಾಸಿಟಿವ್ ಇದೆ ಎಂದು ತೀರ್ಮಾನಿಸಿ ಗ್ರಾಮದಲ್ಲಿರುವ ಎಲ್ಲರಿಗೂ ಕಾಲರಾಕ್ಕೆ ನೀಡುವ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ಆರಂಭದಲ್ಲಿ ಕಾಲರಾ ಖಾತ್ರಿಪಡಿಸಿಕೊಳ್ಳಲು ನಡೆಸಿದ ಪರೀಕ್ಷೆಯಲ್ಲಿ ಈ ವರದಿ ಬಂದಿದೆ. ಈಗ ಯಾರಿಗೂ ಗಂಭೀರವಾದ ಸ್ಥಿತಿ ಇಲ್ಲ. ಸಾಕಷ್ಟು ಮಂದಿ ಗುಣಮುಖರಾಗಿದ್ದಾರೆ. ಕೆಲವರು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
ಕೆ.ಸಾಲುಂಡಿ ಹಾಗೂ ನಂಜರಾಜಯ್ಯನ ಹುಂಡಿಯ 92 ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡಿತ್ತು, ಇದರಲ್ಲಿ 37 ಜನರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶುಕ್ರವಾರವೂ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ, ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಓಆರ್‌ಎಸ್ ಪ್ಯಾಕೇಟ್ ಹಾಗೂ ಎಲೋಜಿನ್ ಮಾತ್ರೆ ವಿತರಿಸಿದರು. ಕಳೆದ ನಾಲ್ಕೈದು ದಿನದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಹಿತ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ಪಾಳಿಯಲ್ಲೂ ಸೇವೆ ನೀಡುತ್ತಿದ್ದಾರೆ.
ನೀರಿನ ಮಾದರಿ ಸಂಗ್ರಹ: ಮುಖ್ಯಮಂತ್ರಿಗಳ ಸೂಚನೆಯಂತೆ ಅಧಿಕಾರಿಗಳು ಜಿಲ್ಲೆಯ ವಿವಿಧ ನೀರಿನ ಮೂಲಗಳ ಮಾದರಿ ಪಡೆದು ನಜರಾಬಾದ್‌ನಲ್ಲಿರುವ ಜಿಲ್ಲಾ ಆರೋಗ್ಯ ಇಲಾಖೆಯ ಪ್ರಯೋಗಾಲಯಕ್ಕೆ ಕಳುಹಿಸಿದರು. ಕೃಷ್ಣರಾಜ ಸಾಗರ, ಕಬಿನಿ ಅಣೆಕಟ್ಟು, ಕೊಳವೆ ಬಾವಿ, ತೆರೆದ ಬಾವಿಯ ನೀರನ್ನು ಸಂಗ್ರಹಿಸಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಿನ ಮೂಲಗಳ ಬಗ್ಗೆ ನಿತ್ಯವೂ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ‘ಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿದೆಯೇ, ಕಲುಷಿತ ನೀರು ಕುಡಿಯುವ ನೀರಿನ ಮೂಲಕ್ಕೆ ಸೇರುವ ಅಪಾಯ ಇದೆಯೇ ಎಂಬುದನ್ನು ನಿತ್ಯ ಖಾತ್ರಿ ಪಡಿಸಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.