ADVERTISEMENT

ಎಚ್.ಡಿ.ಕೋಟೆ | ತಿಂಗಳೊಳಗೆ ನಾಲ್ಕು ಚಿರತೆ ಸೆರೆ; ಮತ್ತಷ್ಟು ಬೋನು ಇರಿಸಲು ಒತ್ತಾಯ

ಪ್ರಜಾವಾಣಿ ವಿಶೇಷ
Published 23 ಅಕ್ಟೋಬರ್ 2024, 6:35 IST
Last Updated 23 ಅಕ್ಟೋಬರ್ 2024, 6:35 IST
ಎಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಳಿ ಮಂಗಳವಾರ ಬೆಳಿಗ್ಗೆ ಸೆರೆಯಾದ ಚಿರತೆ
ಎಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಳಿ ಮಂಗಳವಾರ ಬೆಳಿಗ್ಗೆ ಸೆರೆಯಾದ ಚಿರತೆ   

ಎಚ್.ಡಿ.ಕೋಟೆ: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಗೆ ಬಳಿ ಮಂಗಳವಾರ ಬೆಳಿಗ್ಗೆ ಐದು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.

ಪಟ್ಟಣ ಸಮೀಪ ಗುರುಮಲ್ಲು ಎಂಬರಿಗೆ ಸೇರಿದ ಜಮೀನಿನಲ್ಲಿ ಬೋನು ಇಡಲಾಗಿತ್ತು. ಈ ಚಿರತೆಯೂ ಸೇರಿದಂತೆ ತಿಂಗಳೊಳಗೆ ನಾಲ್ಕು ಚಿರತೆಗಳು ಬೋನಿಗೆ ಬಿದ್ದಿವೆ.

ರೈತರ ಹಸು, ಕರು ಮೇಕೆ ಹಾಗೂ ಸಾಕು ನಾಯಿಗಳನ್ನು ಬೇಟೆಯಾಡುತ್ತಿದ್ದರಿಂದ ಹೊರವಲಯದ ಜಮೀನಿನ ರೈತರಾದ ದಶರಥ, ವಿವೇಕ, ಗುರುಮಲ್ಲು,‌ ಸಣ್ಣಪ್ಪ, ಸೋಮಣ್ಣ, ಸಣ್ಣಯ್ಯರ ಜಮೀನುಗಳಲ್ಲಿ ಬೋನುಗಳನ್ನು ಇರಿಸಲಾಗಿತ್ತು.

ADVERTISEMENT

‘ಸೆರೆಯಾದ ಚಿರತೆಗೆ ಆರೋಗ್ಯ ತಪಾಸಣೆ ಮಾಡಿ, ಚಿಪ್ ಅಳವಡಿಸಿದ ನಂತರ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಡಿಗೆ ಬಿಡಲಾಗುವುದು’ ಎಂದು ವಲಯ ಅರಣ್ಯ ಅಧಿಕಾರಿ ಪೂಜಾ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಒಂದೇ ಸ್ಥಳದಲ್ಲಿ ನಾಲ್ಕು ಗಂಡು ಚಿರತೆಗಳು ಬೋನಿಗೆ ಬಿದ್ದಿರುವುದು ಆಶ್ಚರ್ಯ. ಸುತ್ತಮುತ್ತ ಕೋಳಿ ಫಾರಂಗಳಿವೆಯಾ ಎಂಬ  ಪರಿಶೀಲನೆ ನಡೆಸಿದ್ದೇವೆ. ಚಿರತೆಗಳ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು. ಯಾವುದೇ ಅಪಾಯಗಳು ಸಂಭವಿಸದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.

ಉಪ ವಲಯ ಅರಣ್ಯಾಧಿಕಾರಿ ಪರಮೇಶ್, ಚಿರತೆ ಕಾರ್ಯಪಡೆ ಸಿಬ್ಬಂದಿ ಇದ್ದರು.

ಹರಿದಾಡಿದ ವಿಡಿಯೊ: ಬೋನಿನಲ್ಲಿ ಬಿದ್ದ ಚಿರತೆಯು ವ್ಯಘ್ರಗೊಂಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಚಿರತೆ ನೋಡಲು ಸುತ್ತಮುತ್ತಲ ಜನರು ಬಂದಿದ್ದರು.

‘ಒಂದೇ ಸ್ಥಳದಲ್ಲಿ ನಾಲ್ಕು ಬೋನಿಗೆ ಬಿದ್ದಿರುವುದರಿಂದ ಇನ್ನಷ್ಟು ಚಿರತೆಗಳಿದ್ದು, ಕಾರ್ಯಾಚರಣೆ ನಡೆಸಬೇಕು. ಹೆಚ್ಚಿನ ಬೋನುಗಳನ್ನು ಇಡಬೇಕು’ ಎಂದು ಪಟ್ಟಣದ ಮುಖಂಡ ಸೋಮು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.