ADVERTISEMENT

Muda: ಸಿ.ಎಂ ವಿರುದ್ಧ ತನಿಖೆಗೆ 4 ತಂಡ; 55 ವರ್ಷದ ದಾಖಲೆಗಳ ಪರಿಶೀಲನೆಯೇ ಸವಾಲು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 0:08 IST
Last Updated 29 ಸೆಪ್ಟೆಂಬರ್ 2024, 0:08 IST
<div class="paragraphs"><p>ಮೈಸೂರಿನ ಲೋಕಾಯುಕ್ತ ಎಸ್‌ಪಿ ಕಚೇರಿ</p></div>

ಮೈಸೂರಿನ ಲೋಕಾಯುಕ್ತ ಎಸ್‌ಪಿ ಕಚೇರಿ

   

–ಪ್ರಜಾವಾಣಿ ಚಿತ್ರ

ಮೈಸೂರು: ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗಾಗಿ ಇಲ್ಲಿನ ಲೋಕಾಯುಕ್ತ ಎಸ್‌‍ಪಿ ಟಿ.ಜೆ. ಉದೇಶ್‌ ನಾಲ್ಕು ತಂಡಗಳನ್ನು ರಚಿಸಿದ್ದಾರೆ.

ADVERTISEMENT

ಮೈಸೂರು ಲೋಕಾಯುಕ್ತ ಡಿವೈಎಸ್‌ಪಿ ಎಸ್‌.ಕೆ. ಮಾಲತೇಶ್‌, ಚಾಮರಾಜನಗರ ಡಿವೈಎಸ್‌ಪಿ ಮ್ಯಾಥ್ಯು ಥಾಮಸ್‌, ಮೈಸೂರಿನ ಇನ್‌ಸ್ಪೆಕ್ಟರ್‌ ರವಿಕುಮಾರ್ ಹಾಗೂ ಕೊಡಗು ಇನ್‌ಸ್ಪೆಕ್ಟರ್‌ ಲೋಕೇಶ್‌ಕುಮಾರ್‌ ನೇತೃತ್ವದಲ್ಲಿ ತಂಡಗಳು ರಚನೆಯಾಗಿವೆ.

ತನಿಖೆಯ ಸ್ವರೂಪ, ಪ್ರಶ್ನಾವಳಿಗಳ ಕುರಿತು ಈ ತಂಡಗಳು ಪ್ರತ್ಯೇಕವಾಗಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಕೋರ್ಟ್‌ ಮೂಲಕ ನೀಡಲಾದ, ದೂರಿನಲ್ಲಿ ಅಡಕವಾಗಿರುವ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಯಾವ ತಂಡ ಯಾವ ತನಿಖೆ ಕೈಗೊಳ್ಳಬೇಕು ಎಂಬುದನ್ನು ಎಸ್‌‍ಪಿ ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ಎಸ್‌ಪಿ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ ಉದೇಶ್‌ ತಮ್ಮ ಅಧೀನದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಸಭೆ ನಡೆಸಿದರು. ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಅಧಿಕಾರಿಗಳನ್ನೂ ತನಿಖೆಗೆ ಬಳಸಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು.

55 ವರ್ಷಗಳ ದಾಖಲೆ:

ಲೋಕಾಯುಕ್ತ ಪೊಲೀಸರ ಮುಂದೆ ಸಾಕ್ಷ್ಯ ಸಂಗ್ರಹದ ಸವಾಲು ಇದ್ದು, 55 ವರ್ಷಗಳ ಅವಧಿಯ ಭೂ ದಾಖಲೆಗಳನ್ನು ಪರಿಶೀಲಿಸಬೇಕಿದೆ.

ಮೈಸೂರಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ಕ್ಕೆ ಸಂಬಂಧಿಸಿ 1968ರಿಂದ 2023ರವರೆಗೆ ನಡೆದಿರುವ ಎಲ್ಲ ಭೂವ್ಯವಹಾರಗಳ ಮೂಲ ದಾಖಲೆಗಳನ್ನು ಪೊಲೀಸರು ತನಿಖೆಗೆ ಒಳಪಡಿಸಲಿದ್ದಾರೆ. ಅದರಲ್ಲಿ ಸಾಕಷ್ಟು ದಾಖಲೆಗಳು ಈಗಾಗಲೇ ನಾಪತ್ತೆ ಆಗಿರುವ ಕುರಿತು ದೂರುಗಳು ಕೇಳಿಬಂದಿದ್ದವು. ಲಭ್ಯ ಇರುವ ದಾಖಲೆಗಳನ್ನು ದೂರುದಾರ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ಒದಗಿಸಿದ್ದು, ಅದರ ನೈಜತೆಯನ್ನೂ ಪೊಲೀಸರು ಒರೆಗೆ ಹಚ್ಚಲಿದ್ದಾರೆ.

ಅಧಿಕಾರಿಗಳೇ ಸಾಕ್ಷಿಗಳು!

1998ರಲ್ಲಿ ಜಮೀನಿನ ಡಿನೋಟಿಫೈನಿಂದ ಶುರುವಾಗಿ 2022ರಲ್ಲಿ ಬಿ.ಎಂ. ಪಾರ್ವತಿ ಹೆಸರಿಗೆ 14 ಬದಲಿ ನಿವೇಶನಗಳು ಖಾತೆಯಾಗುವವರೆಗಿನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಎಲ್ಲ ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಅವರಲ್ಲಿ ಅನೇಕರು ನಿವೃತ್ತಿ ಹೊಂದಿದ್ದು ಉಳಿದವರಲ್ಲಿ ಬಹುತೇಕರು ಮೈಸೂರಿನಿಂದ ವರ್ಗಾವಣೆಯಾಗಿದ್ದಾರೆ. 2005–2006ರ ಅವಧಿಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳಾಗಿದ್ದ ಜಿ.ಕುಮಾರ್ ನಾಯಕ್‌ ಎಸ್. ಸೆಲ್ವಕುಮಾರ್ ಮೈಸೂರು ತಹಶೀಲ್ದಾರ್ ಮಲ್ಲಿಗೆ ಶಂಕರ್ 2022ರಲ್ಲಿ ಮೈಸೂರು ಉತ್ತರ ಉಪ ನೋಂದಣಾಧಿಕಾರಿ ಎಸ್‌.ಕೆ. ಸಿದ್ದಯ್ಯ ಮುಡಾದ ಹಿಂದಿನ ಆಯುಕ್ತ ಡಿ.ಬಿ. ನಟೇಶ್‌ ಮುಡಾ ಆಯುಕ್ತರ ಅಕ್ರಮಗಳ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದ ಹಿಂದಿನ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ಸಾಕ್ಷಿಯನ್ನಾಗಿ ಪರಿಗಣಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.