ಮೈಸೂರು: ತಿ.ನರಸೀಪುರಕ್ಕೂ, ಕನ್ನಡಕ್ಕೂ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ಗೂ (ಒಯುಪಿ) ಎತ್ತಣಿಂದೆತ್ತ ಸಂಬಂಧ ಎಂದು ಕೇಳುವವರಿಗೆ ಶಶಿಕುಮಾರ್ ಉತ್ತರವಾಗಿ ಕಾಣಿಸುತ್ತಾರೆ!
ಗಿರೀಶ್ ಕಾರ್ನಾಡರ ನಂತರ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಲ್ಲಿ (ಒಯುಪಿ) ಕಮಿಷನಿಂಗ್ ಎಡಿಟರ್ ಆಗಿ ಕೆಲಸ ಮಾಡಿದ ಕನ್ನಡಿಗರಲ್ಲಿ ಎರಡನೆಯವರು ಎಂಬುದು ಬಹಳ ಮಂದಿಗೆ ತಿಳಿದಿಲ್ಲ.
ನಾಡಿನ ಶ್ರೇಷ್ಠ ಇತಿಹಾಸಕಾರ ಷ.ಶೆಟ್ಟರ್ ಅವರ ‘ಪ್ರಾಕೃತ ಜಗದ್ವಲಯ’ಕ್ಕೆ ಶಶಿ ಕುಮಾರ್ ಹಿನ್ನುಡಿ ಬರೆದಿದ್ದಾರೆ. ಕನ್ನಡ ಅನುವಾದ, ವಿಮರ್ಶೆ ಹಾಗೂ ಸಂಶೋಧನೆಗಳನ್ನು ಅಂತರರಾಷ್ಚ್ರೀಯ ಮಟ್ಟದಲ್ಲಿ ವಿಸ್ತರಿಸುವ ಮಹತ್ವಾಕಾಂಕ್ಷೆಯುಳ್ಳ ಅವರು, ಕನ್ನಡದಲ್ಲಿ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ.
‘ಒಯುಪಿ’ಯಲ್ಲಿ ದೇವನೂರ ಮಹದೇವರ ’ಕುಸುಮಬಾಲೆ’, ಅನಂತಮೂರ್ತಿ ಆತ್ಮಕಥೆ ‘ಸುರಗಿ’ ಅನುವಾದಗೊಳ್ಳಲು ಶಶಿ ಶ್ರಮಿಸಿದ್ದಾರೆ. ಅದಕ್ಕೂ ಮುಂಚೆ ಅವರು ಭಾರತೀಯ ಭಾಷಾ ಸಂಸ್ಥಾನದಲ್ಲಿ (ಸಿಐಐಎಲ್) ಕಥಾ ಭಾರತಿ ಯೋಜನೆಯಡಿ ಕನ್ನಡ ಕೃತಿಗಳನ್ನು ಭಾಷಾಂತರಿಸಿದ್ದರು.
ರಾಷ್ಟ್ರೀಯ ಅನುವಾದ ಮಿಶನ್‌ನಲ್ಲಿ (ಎನ್‌ಟಿಎಂ) ಅನುವಾದ ಕಮ್ಮಟ, ವಿಚಾರ ಸಂಕಿರಣ ಹಾಗೂ ಸಮಾವೇಶವನ್ನು ಆಯೋಜಿಸಿದ್ದರು. ನವದೆಹಲಿಯ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ (ಎಐಐಎಸ್) ಅಮೆರಿಕದ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಲಿಸಿದ್ದಾರೆ.
ಸದ್ಯ ಕೆನಡಾದ ಆಲ್ಬರ್ಟಾ ವಿಶ್ವವಿದ್ಯಾಲಯದ ಇಂಗ್ಲಿಶ್ ಹಾಗೂ ಫಿಲ್ಮ್ ಸ್ಟಡೀಸ್ ವಿಭಾಗದಲ್ಲಿ ಇಂಗ್ಲಿಶ್ ಸಾಹಿತ್ಯ ಬೋಧನೆಯ ಜೊತೆಗೆ ಕರ್ನಾಟಕದ ದಲಿತ ಸಾಹಿತ್ಯ ಹಾಗೂ ಚಳವಳಿ ಕುರಿತಂತೆ ಸಂಶೋಧನೆ ನಡೆಸುತ್ತಿದ್ದಾರೆ. ಕನ್ನಡ ವೈಚಾರಿಕಾ ಪರಂಪರೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ‘ಕ್ರಿಟಿಕಲ್ ಡಿಸ್ಕೋರ್ಸ್ ಇನ್ ಕನ್ನಡ’ ಕೃತಿ ಶೀಘ್ರ ಪ್ರಕಟವಾಗಲಿದೆ.
‘ಕುವೆಂಪು, ಕಾರಂತ, ಮಾಸ್ತಿ ಕೃತಿಗಳೇ ಇಂಗ್ಲಿಷ್‌ಗೆ ಅನುವಾದಗೊಂಡಿಲ್ಲ. ಕೆಲವರದಷ್ಟೇ ಅನುವಾದಗೊಂಡಿವೆ. ಕನ್ನಡದಲ್ಲಿ ಅನುವಾದ ರಾಜಕಾರಣವಿದೆ. ಕುಸುಮಬಾಲೆ ಅನುವಾದಗೊಳ್ಳಲು 25 ವರ್ಷ ಬೇಕಾಯ್ತು. ಮಲೆಗಳಲ್ಲಿ ಮದುಮಗಳು 60 ವರ್ಷವಾದರೂ ಅನುವಾದಗೊಂಡಿಲ್ಲ. ಕನ್ನಡ ಸಾಹಿತ್ಯವನ್ನು ವಿಶ್ವಾತೀತವಾಗಿಸುವ ಹಂಬಲ ಇಲ್ಲದಿರುವುದನ್ನು ನೋಡಿದರೆ ಬೇಸರವಾಗುತ್ತದೆ’ ಎಂದು ಹೇಳಿದರು.
‘ಒಯುಪಿಗೆ ನಾನು ಹೋಗುವವರೆಗೆ ಅನುವಾದವಾಗಿ ಪ್ರಕಟಗೊಂಡ ಕೃತಿಗಳೆಲ್ಲವೂ ಬ್ರಾಹ್ಮಣ ಲೇಖಕರದ್ದಾಗಿದ್ದವು. ಕುಸುಮಬಾಲೆಯ ಇಂಗ್ಲಿಷ್ ಅನುವಾದ ಅದನ್ನು ಬದಲಾಯಿಸಿತು. ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದ್ದೇ ಸಾಕ್ಷಿ’ ಎಂದು ಹೇಳಿದರು.
‘ಕನ್ನಡವೆಂದರೆ ಬರೀ ಸಾಹಿತ್ಯ ಎಂಬ ಗ್ರಹಿಕೆ ಬದಲಾಗಬೇಕು. ಇತರೆ ಜ್ಞಾನಶಾಖೆಗಳ ಸಂಶೋಧನೆಗೆ ಪೂರಕವಾದ ಸಾಮಗ್ರಿಗಳು ಇಂಗ್ಲಿಷ್‌ನಿಂದ ಕನ್ನಡಕ್ಕೆ ಬರಬೇಕು. ಅನುವಾದಗಳು ಕಡಿಮೆ ಬೆಲೆಯಲ್ಲಿ ಇ–ಬುಕ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ದೊರಕುವಂತಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.