ADVERTISEMENT

ಮೈಸೂರು: ಹಬ್ಬದ ಹೊಸ್ತಿಲಲ್ಲಿ ಹೂ–ಹಣ್ಣು ದುಬಾರಿ

ಕನಕಾಂಬರ ಕೆ.ಜಿಗೆ ₹1200; ಮಲ್ಲಿಗೆಯೂ ತುಟ್ಟಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 16:24 IST
Last Updated 4 ಸೆಪ್ಟೆಂಬರ್ 2024, 16:24 IST
   

ಮೈಸೂರು: ಗೌರಿ–ಗಣೇಶನ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹಬ್ಬದ ಹೊಸ್ತಿಲಲ್ಲಿ ಹೂ ಹಣ್ಣು ದುಬಾರಿ ಆಗಿದೆ.

ಬುಧವಾರವೇ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಕಂಡು ಬಂದಿತು. ಅದರಲ್ಲಿಯೂ ಹೂ–ಹಣ್ಣು ಖರೀದಿಗೆ ಗ್ರಾಹಕರು ಹೆಚ್ಚು ಒಲವು ತೋರಿದರು. ಹಬ್ಬದ ಹಿನ್ನೆಲೆಯಲ್ಲಿ ಹೂವಿನ ಬೆಲೆ ದುಪ್ಪಟ್ಟುಗೊಂಡಿದ್ದು, ಕನಕಾಂಬರ ಧಾರಣೆಯು ಕೆ.ಜಿ.ಗೆ ₹600ರಿಂದ ₹1200ಕ್ಕೆ ಬೆಲೆ ಏರಿಸಿಕೊಂಡಿದೆ. 250 ಗ್ರಾಂಗೆ ₹300ರಂತೆ ಮಾರಾಟ ಆಗುತ್ತಿದ್ದು, ಹಬ್ಬಕ್ಕೆಂದೇ ಕೊಯ್ಲು ಮಾಡಿ ತಂದ ತಾಜಾ ಹೂವನ್ನು ಗ್ರಾಹಕರು ದುಬಾರಿ ಬೆಲೆ ತೆತ್ತು ಬುಟ್ಟಿಗೆ ಇಳಿಸಿಕೊಂಡರು. ಪ್ರತಿ ಮಾರಿಗೆ ₹150–200ರಂತೆ ಮಾರಾಟ ನಡೆದಿತ್ತು.

ಕನಕಾಂಬರ ನಂತರದಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ಮಲ್ಲಿಗೆಯು ಕಳೆದ ವಾರ ಕೆ.ಜಿ.ಗೆ ₹300–400 ಇದ್ದದ್ದು, ಈಗ ₹600ಕ್ಕೆ ಏರಿಕೆ ಆಗಿದೆ. ಬಿಡಿ ಮಲ್ಲಿಗೆ ಮೊಗ್ಗಿಗೆ ಬೇಡಿಕೆ ಹೆಚ್ಚಿದ್ದು, ಪ್ರತಿ ಮಾರಿಗೆ ₹150ಕ್ಕೂ ಅಧಿಕ ದರದಲ್ಲಿ ಮಾರಾಟ ಆಗುತ್ತಿದೆ. ಸೇವಂತಿಗೆ ಹಾಗೂ ಬಿಡಿ ಗುಲಾಬಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದು, ಅದರ ಬೆಲೆಯೂ ಏರಿದೆ. ಸೇವಂತಿಗೆ ಮಾರಿಗೆ ₹60–80ಕ್ಕೆ ಏರಿಕೆ ಆಗಿದೆ. ಇದ್ದದ್ದರಲ್ಲಿ ಚೆಂಡು ಹೂವು ಮಾತ್ರ ಗ್ರಾಹಕರ ಕೈಗೆ ಎಟಕುವಂತೆ ಇದೆ.

ADVERTISEMENT

ಕಮಲದ ಹೂವು, ಸ್ಫಟಿಕ, ತುಳಸಿ ಸಹ ಮಾರುಕಟ್ಟೆಯಲ್ಲಿ ಖರೀದಿ ನಡೆದಿದೆ. ಜೊತೆಗೆ ಪೂಜಾ ಸಾಮಗ್ರಿ ಹಾಗೂ ಅಲಂಕಾರ ಸಾಮಗ್ರಿಗಳಿಗೂ ಬೇಡಿಕೆ ಕುದುರಿದೆ.

ಹಣ್ಣು ದುಬಾರಿ: ಹಬ್ಬದ ಕಾರಣಕ್ಕೆ ಹಣ್ಣುಗಳ ಬೆಲೆಯು ಇನ್ನಷ್ಟು ದುಬಾರಿ ಆಗಿದೆ. ಏಲಕ್ಕಿ ಬಾಳೆ ಮತ್ತೆ ಬೆಲೆ ಏರಿಸಿಕೊಂಡಿದೆ. ಸೇಬು ಹಾಗೂ ದಾಳಿಂಬೆ ₹200ರ ಗಡಿ ದಾಟಿದ್ದು, ಗ್ರಾಹಕರ ಕೈ ಸುಡುತ್ತಿದೆ. ಉಳಿದ ಹಣ್ಣುಗಳ ಬೆಲೆಯೂ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.