ಮೈಸೂರು/ಬನ್ನೂರು: ‘ಬಿಜೆಪಿ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿ ಇರಲ್ಲ. ಯಾರ ಮುಲಾಜಿಗೂ ಒಳಗಾಗದಂತ ಅಧಿಕಾರ ನೀಡಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಇಲ್ಲಿ ಮನವಿ ಮಾಡಿದರು.
‘ರೈತರ ಸಾಲಮನ್ನಾ ಮಾಡಲಿಕ್ಕಾಗಿಯೇ ಎರಡನೇ ಬಾರಿಗೆ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದೆ. ಬೆಳಗಾವಿ ಜಿಲ್ಲೆಯ ರೈತರು ಸಾಲಮನ್ನಾದಿಂದ ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ. ಆದರೆ ಚುನಾವಣೆ ಬಂದಾಗ ಮಾತ್ರ ಜಾತಿ ಹಿಡಿದು ಹೋಗ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಈ ಹಿಂದೆ ಎರಡು ಬಾರಿಯೂ ಮುಲಾಜಿನ ಮುಖ್ಯಮಂತ್ರಿಯಾಗಿದ್ದೆ. ನನ್ನ ಇತಿಮಿತಿಯೊಳಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವೆ. ದೇವೇಗೌಡರು ನಾಯಕ ಸಮುದಾಯಕ್ಕೆ ನೀಡಿದ ಕೊಡುಗೆಯಿಂದಲೇ 13 ಜನರು ಶಾಸಕರಿದ್ದಾರೆ. ಆದರೆ ಆ ಸಮುದಾಯ ಇದನ್ನು ಮರೆತಿದೆ’ ಎಂದು ಹೇಳಿದರು.
‘ಸಾಲ ವಸೂಲಿಗೆ ಬ್ಯಾಂಕ್ ಅಧಿಕಾರಿ ನಿಮ್ಮ ಮನೆ ಬಾಗಿಲ ಬಳಿ ಬಂದರೆ, ನೇರವಾಗಿ ನೀವು ನನ್ನ ಮನೆ ಬಾಗಿಲಿಗೆ ಬನ್ನಿ. ನಿಮ್ಮ ನೆರವಿಗಾಗಿಯೇ ನಾನಿರುವೆ’ ಎಂದು ನೆರೆದಿದ್ದ ಜನಸ್ತೋಮಕ್ಕೆ ತಿಳಿಸಿದರು.
ಕಾರ್ಯಕರ್ತರಿಂದಲೇ ಜೆಡಿಎಸ್ ಉಳಿದಿದೆ: ‘ಕಾಂಗ್ರೆಸ್–ಜೆಡಿಎಸ್ ಮೊದಲ ಬಾರಿಗೆ ಎನ್.ಧರ್ಮಸಿಂಗ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದಾಗ ಬಸವರಾಜ ಹೊರಟ್ಟಿ ಸಚಿವರಾಗುವಲ್ಲಿ ನನ್ನ ಪಾತ್ರವೇ ಹೆಚ್ಚಿದೆ. ಇದೀಗ ಮಾತನಾಡುತ್ತಿದ್ದಾರೆ. ನಾನು ಮುಕ್ತವಾಗಿದ್ದೇನೆ. ಚರ್ಚೆಗೆ ಬರಲಿ. ಎಲ್ಲವನ್ನೂ ಹೇಳುವೆ. ನಾಯಕತ್ವದ ಆಸೆ ನನಲ್ಲಿಲ್ಲ’ ಎಂದು ಎಚ್.ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
‘ಸಾ.ರಾ.ಮಹೇಶ್‌ಗೆ ಹೇಳಿದೆ. ಚರ್ಚಿಸಬೇಡಿ ಎಂದೆ. ಕೊಂಡುಕೊಂಡವನನ್ನು ಕರೆ ತರಬೇಕಂತೆ. ಬ್ಲಾಕ್ ಮನಿ ಕೊಟ್ಟವನು ಯಾರಾದರೂ ಬರ್ತಾನ. ಇದು ಎಲ್ಲರಿಗೂ ಗೊತ್ತಿರೋ ವಿಷಯ. 2008 ಮತ್ತೊಮ್ಮೆ ಪುನರಾವರ್ತನೆ ಆಯಿತಷ್ಟೇ. ಆಣೆ–ಪ್ರಮಾಣ ಏಕೆ ? ಅವಶ್ಯವಿಲ್ಲ. ಆ ಮನುಷ್ಯನ (ಅಡಗೂರು ಎಚ್.ವಿಶ್ವನಾಥ್) ಬಗ್ಗೆ ಮಾತನಾಡಬಾರದು. ಹುಣಸೂರಿನ ಜನರೇ ತೀರ್ಮಾನಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಭಿಕಾರಿ ದೇಶದಲ್ಲೇ ಹಸಿವು ಕಡಿಮೆ’
‘ಪಾಕಿಸ್ತಾನ, ಚೀನಾ, ಶ್ರೀಲಂಕಾದಲ್ಲಿ ಹಸಿವಿನಿಂದ ನರಳುವವರು ನಮ್ಮಲ್ಲಿಗಿಂತ ಕಡಿಮೆಯಿದ್ದಾರೆ. ಈ ವಿಷಯದಲ್ಲಿ ಭಾರತ ಸಾಕಷ್ಟು ಹಿಂದಿದೆ. ಮಕ್ಕಳ ಹಸಿವಿನ ಬಗ್ಗೆ ನಮ್ಮಲ್ಲಿ ಚರ್ಚೆಯೇ ಇಲ್ಲ. ನೀವೆಲ್ಲಾ ಹೇಳುವ ಭಿಕಾರಿ ದೇಶದ ಸ್ಥಿತಿ ನಮಗಿಂತ ಉತ್ತಮವಾಗಿದೆ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
‘ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಕಾಶ್ಮೀರದ 370ಗೂ ಕರ್ನಾಟಕಕ್ಕೂ ಏನು ಸಂಬಂಧ. ನೆರೆ ಸಂತ್ರಸ್ತ ಹೊಟ್ಟೆಗಿಟ್ಟಿಲ್ಲದೆ ಇಲ್ಲಿ ನರಳುತ್ತಿದ್ದಾನೆ. ಎಚ್.ಡಿ.ದೇವೇಗೌಡರು 10 ತಿಂಗಳು ಪ್ರಧಾನಿಯಾಗಿದ್ದಾಗ ಯಾವ ಉಗ್ರರ ದಾಳಿಯೂ ನಡೆಯಲಿಲ್ಲ. ಬಾಂಬ್ ಸ್ಫೋಟವಾಗಲಿಲ್ಲ. ರಕ್ತಪಾತ ಆಗಲಿಲ್ಲ. ಈಗ ಏಕೆ ಆತಂಕದ ವಾತಾವರಣ’ ಎಂದು ಗೃಹಸಚಿವ ಬಸವರಾಜಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.