ADVERTISEMENT

ಯೋಗಕ್ಕೆ ಜಾಗತಿಕ ಮನ್ನಣೆ: ಶಾಸಕ ದರ್ಶನ್

ನಂಜನಗೂಡು: ದಸರಾ ಪ್ರಯುಕ್ತ ಸಾಮೂಹಿಕ ಯೋಗಾಭ್ಯಾಸ ಆಯೋಜನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2023, 13:57 IST
Last Updated 16 ಅಕ್ಟೋಬರ್ 2023, 13:57 IST
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗ ಸೋಮವಾರ ನಡೆದ ಸಾಮೂಹಿಕ ಯೋಗಾಭ್ಯಾಸ ಹಾಗೂ ಶಿವ ನಮಸ್ಕಾರದಲ್ಲಿ ಭಾಗವಹಿಸಿದ್ದವರು
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗ ಸೋಮವಾರ ನಡೆದ ಸಾಮೂಹಿಕ ಯೋಗಾಭ್ಯಾಸ ಹಾಗೂ ಶಿವ ನಮಸ್ಕಾರದಲ್ಲಿ ಭಾಗವಹಿಸಿದ್ದವರು    

ನಂಜನಗೂಡು: ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸೋಮವಾರ ಸಾಮೂಹಿಕ ಯೋಗಾಭ್ಯಾಸ ಹಾಗೂ ಶಿವ ನಮಸ್ಕಾರದಲ್ಲಿ ಅಪಾರ ಸಂಖ್ಯೆಯ ಯೋಗಪಟುಗಳು ಭಾಗವಹಿಸಿದ್ದರು.

ಕೆಂಪಿಸಿದ್ದನಹುಂಡಿ ಗ್ರಾಮದ ಮಹಿಳೆಯರು ಸಾಮೂಹಿಕ ಯೋಗ ಪ್ರದರ್ಶಿಸಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ‘ಭಾರತಕ್ಕೆ ಬಂದು ಯೋಗ ಕಲಿತು ವಿದೇಶಗಳಲ್ಲಿ ಪಸರಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾರತೀಯ ಯೋಗ, ಧ್ಯಾನ, ಆಧ್ಯಾತ್ಮಕ್ಕೆ ಜಾಗತಿಕ ಮನ್ನಣೆ ಸಿಕ್ಕಿದೆ’ ಎಂದು ಹೇಳಿದರು. 

ADVERTISEMENT

‘ನಾನು ಚಿಕ್ಕವನಾಗಿದ್ದಾಗ ಮೈಸೂರಿನ ಗೋಕುಲಂನಲ್ಲಿ ವಾಸವಾಗಿದ್ದೆ. ಆ ವೇಳೆ ಬರುತ್ತಿದ್ದ ವಿದೇಶಿಗರು ಮೈಸೂರಿನಲ್ಲಿ ಯೋಗ ಕಲಿತು ತಮ್ಮ ದೇಶದಲ್ಲಿ ಪಸರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು ವ್ಯಾಪಕವಾಗಿದ್ದು, ಭಾರತೀಯ ಯೋಗ ಪದ್ಧತಿಗೆ ವಿಶ್ವ ಮನ್ನಣೆ ಸಿಕ್ಕಿದೆ’ ಎಂದು ಹೇಳಿದರು.

ಆಯುಷ್ ಇಲಾಖೆಯ ಆಯುಕ್ತೆ ಡಾ.ಲೀಲಾವತಿ ಮಾತನಾಡಿ, ‘ಆಯುರ್ವೇದ ಹಾಗೂ ಯೋಗ ಪದ್ಧತಿಗೆ ಅವಿನಾಭಾವ ಸಂಬಂಧವಿದೆ. ನಗರ ಪ್ರದೇಶಗಳಿಗೆ ಮಾತ್ರ ಯೋಗ ಸೀಮಿತವಾಗಬಾರದು, ಗ್ರಾಮೀಣ ಪ್ರದೇಶಗಳಿಗೂ ಅದರ ಮಹತ್ವದ ಅರಿವಾಗಬೇಕೆಂಬ ದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿರುವ ಆಯುಷ್ ಕ್ಷೇಮ ಕೇಂದ್ರಗಳಲ್ಲಿ ನಿತ್ಯ ಯೋಗ ತರಗತಿಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನುರಿತ ಯೋಗ ತರಬೇತುದಾರರನ್ನು ಇಲಾಖೆಯು ನೇಮಕ ಮಾಡಿಕೊಳ್ಳುತ್ತಿದೆ. ಆ ಮೂಲಕ ಹಳ್ಳಿಗಾಡಿನ ಜನರಿಗೂ ಯೋಗ ತಲುಪಿಸುವಲ್ಲಿ ಇಲಾಖೆ ಯಶಸ್ವಿಯಾಗಿದೆ’ ಎಂದು ಹೇಳಿದರು.

ಮೈಸೂರು, ನಂಜನಗೂಡಿನ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕೆಂಪಿಸಿದ್ದನಹುಂಡಿ ಆಯುಷ್ ಕ್ಷೇಮ ಕೇಂದ್ರದ ನೂರಾರು ಮಂದಿ ಪಾಲ್ಗೊಂಡರು.

ಯೋಗ ಶಿಕ್ಷಕಿ ವರಲಕ್ಷ್ಮಿ, ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಯೋಗ ದಸರಾ ಉಪಸಮಿತಿ ಅಧ್ಯಕ್ಷ ದೇವರಾಜು, ವಿಶೇಷಾಧಿಕಾರಿ ರಮ್ಯಾ, ಆಯುಷ್ ಜಿಲ್ಲಾ ಅಧಿಕಾರಿ ಡಾ.ಪುಷ್ಪಾ, ತಾಲ್ಲೂಕು ಅಧಿಕಾರಿ ಡಾ.ಅಶೋಕ್‌ ಕುಮಾರ್, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಕಾರ್ಯದರ್ಶಿ ಎನ್.ಆರ್.ಗಣೇಶ್‌ಮೂರ್ತಿ, ಉಪಸಮಿತಿ ಸದಸ್ಯರಾದ ವಿಷ್ಣುಪ್ರಿಯ, ರಫೀಕ್, ಚನ್ನಗಿರಿ, ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ ಇದ್ದರು.



ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗ ಸೋಮವಾರ ನಡೆದ ಸಾಮೂಹಿಕ ಯೋಗಾಭ್ಯಾಸ ಹಾಗೂ ಶಿವ ನಮಸ್ಕಾರದಲ್ಲಿ ಭಾಗವಹಿಸಿದ್ದವರು
ಯೋಗ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ದರ್ಶನ್ ಧ್ರುವನಾರಾಯಣ
ಕಾರ್ಯಕ್ರಮದಲ್ಲಿ ಕೆಂಪಿಸಿದ್ದನಹುಂಡಿ ಗ್ರಾಮದ ಮಹಿಳೆಯರು ಸಾಮೂಹಿಕ ಯೋಗ ಪ್ರದರ್ಶಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.