ADVERTISEMENT

ಮೈಸೂರಿನಿಂದ ಎಚ್‌ಡಿಕೆ ಕ್ಷೇತ್ರಕ್ಕೆ ಗೂಡ್ಸ್‌ ಯಾರ್ಡ್ ಶಿಫ್ಟ್‌!

ವಿರೋಧಿಸಿ ಪತ್ರ ಬರೆದ ಸಿದ್ದರಾಮಯ್ಯ

ಆರ್.ಜಿತೇಂದ್ರ
Published 16 ಅಕ್ಟೋಬರ್ 2024, 6:55 IST
Last Updated 16 ಅಕ್ಟೋಬರ್ 2024, 6:55 IST
ಗೂಡ್ಸ್ ಯಾರ್ಡ್‌ ಸ್ಥಳಾಂತರ ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಬರೆದಿರುವ ಪತ್ರ
ಗೂಡ್ಸ್ ಯಾರ್ಡ್‌ ಸ್ಥಳಾಂತರ ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಬರೆದಿರುವ ಪತ್ರ   

ಮೈಸೂರು: ಇಲ್ಲಿನ ಮೈಸೂರು ಹೊಸ ಗೂಡ್ಸ್‌ ಟರ್ಮಿನಲ್‌ನಲ್ಲಿರುವ (ಎಂಎನ್‌ಜಿಟಿ) ಗೂಡ್ಸ್‌ ಯಾರ್ಡ್‌ ಅನ್ನು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರತಿನಿಧಿಸುವ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಲಿಯೂರಿಗೆ ಸ್ಥಳಾಂತರಿಸಲು ರೈಲ್ವೆ ಇಲಾಖೆ ಮುಂದಾಗಿದ್ದು, ಈ ನಿರ್ಣಯವನ್ನು ರಾಜ್ಯ ಸರ್ಕಾರ ವಿರೋಧಿಸಿದೆ. ಇದು ರಾಜಕೀಯ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ.

ಯಾರ್ಡ್ ಸ್ಥಳಾಂತರ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅ.7ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಪತ್ರ ಬರೆದಿದ್ದಾರೆ. ಸಾಗಣೆ ವೆಚ್ಚ ಹೆಚ್ಚಳ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಈ ಸ್ಥಳಾಂತರ ಕಾರ್ಯಸಾಧುವಲ್ಲ. ಹೀಗಾಗಿ ನಿರ್ಣಯವನ್ನು ಪುನರ್ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದ್ದಾರೆ.

‘ಒಂದು ವೇಳೆ ಸ್ಥಳಾಂತರ ಮಾಡಲೇ ಬೇಕು ಎಂದಾದಲ್ಲಿ ಮೈಸೂರಿಗೆ ಸಮೀಪ ಇರುವ ನಾಗನಹಳ್ಳಿ, ಬೆಳಗೊಳ ನಿಲ್ದಾಣಗಳಿಗೆ ಈ ಯಾರ್ಡ್‌ ಅನ್ನು ವಿಸ್ತರಿಸಿ, ಈಗ ಇರುವ ವ್ಯವಸ್ಥೆಯನ್ನೂ ಉಳಿಸಿಕೊಳ್ಳ ಬೇಕು’ ಎಂದು ಕೋರಿದ್ದಾರೆ.

ADVERTISEMENT

ಆತಂಕವೇನು?:

ಮೈಸೂರಿನ ಈ ಗೂಡ್ಸ್‌ ಟರ್ಮಿನಲ್‌ ಕೇಂದ್ರ ಆಹಾರ ನಿಗಮ ಸೇರಿದಂತೆ ಸುತ್ತಲಿನ ಸರಕು ಸಾಗಣೆಯ ಪ್ರಮುಖ ಹಬ್‌ ಆಗಿದೆ. ಗೂಡ್ಸ್‌ ರೈಲುಗಳಲ್ಲಿ ಬರುವ ಆಹಾರ ಧಾನ್ಯ, ರಸಗೊಬ್ಬರ ಸೇರಿದಂತೆ ವಿವಿಧ ಉತ್ಪನ್ನಗಳನ್ನು ನಿತ್ಯ 500–600 ಟ್ರಕ್‌ಗಳು ಇಲ್ಲಿಂದ ಮೈಸೂರು ಹಾಗೂ ಸುತ್ತಲಿನ ಜಿಲ್ಲೆಗಳಿಗೆ ಸಾಗಣೆ ಮಾಡುತ್ತಿವೆ. 10 ಸಾವಿರಕ್ಕೂ ಅಧಿಕ ಕಾರ್ಮಿಕರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ವೇಳೆ ಗೂಡ್ಸ್‌ ಯಾರ್ಡ್ ಇಲ್ಲಿಂದ ಸ್ಥಳಾಂತರವಾದರೆ ಈ ಎಲ್ಲ ಚಟುವಟಿಕೆಗಳಿಗೆ ತೊಂದರೆ ಆಗಲಿದೆ. ಸರಕು ಸಾಗಣೆಯಲ್ಲಿ ವ್ಯತ್ಯಯ ಆಗಲಿದೆ ಎನ್ನುವ ಆತಂಕ ಸರ್ಕಾರದ್ದು.

‘ಮೈಸೂರು ಯಾರ್ಡ್‌ನಿಂದ ಯಲಿಯೂರು ಸುಮಾರು 40 ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ಯಾರ್ಡ್‌ ಸ್ಥಳಾಂತರ ಆದಲ್ಲಿ, ಮತ್ತೆ ಅಲ್ಲಿಂದ ಮೈಸೂರು ಸುತ್ತಲಿನ ಜಿಲ್ಲೆಗಳಿಗೆ ಟ್ರಕ್‌ಗಳ ಮೂಲಕ ಉತ್ಪನ್ನ ಸಾಗಣೆ ಮಾಡ ಬೇಕಾಗುತ್ತದೆ. ಸಕಾಲಕ್ಕೆ ಉತ್ಪನ್ನಗಳು ಜನರನ್ನು ತಲುಪುವುದಿಲ್ಲ. ಅನಗತ್ಯ ವೆಚ್ಚ ಹೆಚ್ಚಿ, ಉತ್ಪನ್ನದ ಬೆಲೆಯೂ ಏರಿಕೆ ಆಗಲಿದೆ. ಇಲ್ಲಿನ ಕಾರ್ಮಿಕರ ಬದುಕು ಬೀದಿಗೆ ಬೀಳಲಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ.

ಗೂಡ್ಸ್‌ ಯಾರ್ಡ್‌ ಅನ್ನು ಯಲಿಯೂರಿಗೆ ಸ್ಥಳಾಂತರಿಸುವುದ ರಿಂದ ಸಾಗಣೆ ಹೊರೆ ಹೆಚ್ಚಲಿದ್ದು ಇಲ್ಲಿನ ಕಾರ್ಮಿಕರಿಗೂ ಅನನುಕೂಲ. ಈಗ ಇರುವ ವ್ಯವಸ್ಥೆಯನ್ನೇ ಮುಂದುವರಿಸಬೇಕು.
ಎಂ. ಲಕ್ಷ್ಮಣ ಕೆಪಿಸಿಸಿ ವಕ್ತಾರ

₹44.53 ಕೋಟಿ ವೆಚ್ಚದಲ್ಲಿ ಹೊಸ ಶೆಡ್‌

ರೈಲ್ವೆ ಇಲಾಖೆಯು ಮೈಸೂರು ರೈಲು ನಿಲ್ದಾಣವನ್ನು ₹493.03 ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇದರ ಭಾಗವಾಗಿ ಮೈಸೂರು ನಿಲ್ದಾಣಕ್ಕೆ ಸಮೀಪದ ಗೂಡ್ಸ್ ಟರ್ಮಿನಲ್‌ ಅನ್ನು (ಎಂಎನ್‌ಜಿಟಿ) ಕೋಚಿಂಗ್‌ ಯಾರ್ಡ್‌ ಆಗಿ ಪರಿವರ್ತಿಸಲಾಗುತ್ತಿದೆ. ಹೀಗಾಗಿ ಇಲ್ಲಿನ ಗೂಡ್ಸ್ ಯಾರ್ಡ್ ಅನ್ನು ಯಲಿಯೂರಿಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಯಲಿಯೂರಿನಲ್ಲಿ ನಿರ್ಮಾಣ ಆಗಲಿರುವ ಹೊಸ ಗೂಡ್ಸ್ ಯಾರ್ಡ್‌ನಲ್ಲಿ 3 ಲೋಡಿಂಗ್‌ ಅನ್‌ಲೋಡಿಂಗ್‌ ರೈಲು ಲೇನ್‌ಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ₹44.53 ಕೋಟಿ ವೆಚ್ಚದಲ್ಲಿ ಹೊಸ ಶೆಡ್ ತಲೆಎತ್ತಲಿದೆ. ಹೊಸ ಶೆಡ್‌ ನಿರ್ವಹಣೆಗೆ ಅನುಕೂಲ ಆಗುವಂತೆ ಯಲಿಯೂರು ನಿಲ್ದಾಣವನ್ನು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಮೈಸೂರು ವಿಭಾಗದ ವ್ಯಾಪ್ತಿಗೆ ಸೇರಿಸಿ ಇಲಾಖೆಯು ಈಚೆಗೆ ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.