ADVERTISEMENT

ಮೈಸೂರು | ಶ್ರವಣ ಸಾಧನ ಪಡೆದು ಭಾವುಕರಾದರು..

ಆಯಿಷ್‌: ₹29 ಸಾವಿರ ಮೌಲ್ಯದ ಸಾಧನ; ಮಕ್ಕಳು, ವೃದ್ಧರು ಸೇರಿದಂತೆ 220 ಮಂದಿಗೆ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 14:38 IST
Last Updated 25 ಜೂನ್ 2024, 14:38 IST
ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳಿಗೆ ಮಂಗಳವಾರ ಡೆಲ್ಚವಾಕ್ಸ್‌ ಕಂಪನಿ ಸಿಇಒ ಗೈ ಟಾಲ್ಬೌವಾರ್ಡೆಟ್, ಫ್ರೌಶರ್‌ ಸಮೂಹ ಸಂಸ್ಥೆಗಳ ಸಿಇಒ ಮೈಕಲ್ ಥಾಯ್ಲ್ ಶ್ರವಣ ಸಾಧನ ನೀಡಿದರು. ಡಾ.ಎಂ.ಪುಷ್ಪವತಿ, ಅಲೋಕ್‌ ಸಿನ್ಹಾ ಹಾಜರಿದ್ದರು –ಪ್ರಜಾವಾಣಿ ಚಿತ್ರ
ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳಿಗೆ ಮಂಗಳವಾರ ಡೆಲ್ಚವಾಕ್ಸ್‌ ಕಂಪನಿ ಸಿಇಒ ಗೈ ಟಾಲ್ಬೌವಾರ್ಡೆಟ್, ಫ್ರೌಶರ್‌ ಸಮೂಹ ಸಂಸ್ಥೆಗಳ ಸಿಇಒ ಮೈಕಲ್ ಥಾಯ್ಲ್ ಶ್ರವಣ ಸಾಧನ ನೀಡಿದರು. ಡಾ.ಎಂ.ಪುಷ್ಪವತಿ, ಅಲೋಕ್‌ ಸಿನ್ಹಾ ಹಾಜರಿದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಮಂಗಳವಾರ ಮಕ್ಕಳಿಗೆ ಶ್ರವಣ ಸಾಧನ ಪಡೆದ ತಾಯಂದಿರು ಕಣ್ಣೀರಾದರು.

ಶ್ರವಣ ದೋಷದ ಬಾಲಕ ಕಾರ್ತಿಕ್‌ ನಿರೂಪಣಾ ಶೈಲಿಗೆ ಮನಸೋತ ತಾಯಂದಿರಿಗೆ ಆಯಿಷ್‌ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ, ‘ಕಾರ್ತಿಕ್ ಎಲ್ಲ ಮಕ್ಕಳಂತೆ ಸಾಮಾನ್ಯ ಶಾಲೆಯಲ್ಲಿ ಓದಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 99ರಷ್ಟು ಅಂಕ ಪಡೆದಿದ್ದಾನೆ. ಮೆಕ್ಯಾನಿಕಲ್‌ ಎಂಜಿನಿಯರ್ ಆಗುವ ಛಲವಿದೆ. ಅವನಂತೆ ನಿಮ್ಮ ಮಕ್ಕಳು ಆಗಬೇಕಲ್ಲವೇ’ ಎಂದು ಪ್ರಶ್ನಿಸಿದರು.

ರಾಯಚೂರು, ಧಾರವಾಡ, ಬೀದರ್‌ನಿಂದ ಮಕ್ಕಳೊಂದಿಗೆ ಬಂದಿದ್ದವರು ಚಪ್ಪಾಳೆ ಮಳೆಗರೆದು, ‘ಹೌದು ಮೇಡಂ’ ಎಂದರು. ಅವರ ಕಂಗಳು ತುಂಬಿ ಬಂದಿದ್ದವು. ಮಕ್ಕಳಿಗೆ ಹೂ ಮುತ್ತನು ನೀಡಿ, ‘ಅಣ್ಣನಂತಾಗಬೇಕು’ ಎಂದು ಕೈ ತೋರಿದರು.

ADVERTISEMENT

220 ಮಂದಿಗೆ ಶ್ರವಣ ಸಾಧನ: ರಾಜ್ಯದ ವಿವಿಧೆಡೆಯ 220 ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಹಾಗೂ ವೃದ್ಧರಿಗೆ ತಲಾ ₹29 ಸಾವಿರ ವೆಚ್ಚದ ಶ್ರವಣ ಸಾಧನವನ್ನು ‘ಫ್ರೌಶರ್‌ಸೆನ್ಸಾರ್ ಟೆಕ್ನಾಲಜಿ ಆಫ್‌ ಇಂಡಿಯಾ’ ಸಹಯೋಗದಲ್ಲಿ ನೀಡಲಾಯಿತು. ಒಂದು ಶ್ರವಣ ಸಾಧನ ಉಚಿತವಾಗಿ ಸಿಕ್ಕರೆ, ಇನ್ನೊಂದಕ್ಕೆ ಆಯಿಷ್‌ ಶೇ 60ರಷ್ಟು ರಿಯಾಯಿತಿ ನೀಡಿತ್ತು. ₹3 ಸಾವಿರಕ್ಕೆ ರಿಯಾಯಿತಿಯಲ್ಲಿ ಪಡೆದರು.

2 ತಿಂಗಳ ಮಗುವಿನಿಂದ 90 ವರ್ಷದ ವೃದ್ಧರಿಗೂ ಸಾಧನ ನೀಡಲಾಯಿತು. ವಿಶೇಷ ಮಕ್ಕಳೇ ಇಡೀ ಕಾರ್ಯಕ್ರಮ ನಡೆಸಿಕೊಟ್ಟು ಗಮನ ಸೆಳೆದರು. ಎಲ್ಲ ಪೋಷಕರು ಹಾಗೂ ಮಕ್ಕಳಿಗೆ ಒಂದು ತರಬೇತಿ ಪಡೆಯುವಂತೆ ಸಲಹೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಂಪನಿಯ ಮುಖ್ಯಸ್ಥ ಅಲೋಕ್‌ ಸಿನ್ಹಾ, ‘ವಾಕ್ ಮತ್ತು ಶ್ರವಣ ಸಮಸ್ಯೆಯನ್ನು ಎದುರಿಸುತ್ತಿರುವ ಮಕ್ಕಳಿಗೆ ನೆರವಾಗಲು ಆಯಿಷ್‌ ಜೊತೆ ಸದಾ ಇದ್ದೇವೆ. ನಮ್ಮ ಕಾಣಿಕೆ ಅತ್ಯಲ್ಪ. ಮಾನವೀಯತೆ ಗೆಲ್ಲಿಸಲು ಪ್ರತಿಯೊಬ್ಬರ ಕಾಣ್ಕೆಯಿದೆ’ ಎಂದರು.

‘ಎಲ್ಲ ಚಿಣ್ಣರಂತೆ ದಿವ್ಯಾಂಗರಿಗೂ ಸಮಾನ ಅವಕಾಶ ಸಿಗಬೇಕು. ಪೋಷಕರು ಆರಂಭದ ಈ ಕಠಿಣ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿ ಮಕ್ಕಳನ್ನು ಉನ್ನತ ಸ್ಥಾನಗಳತ್ತ ಒಯ್ಯಲು, ಸ್ವಾವಲಂಬಿ ಜೀವನ ರೂಪಿಸಲು ಶ್ರಮಿಸಬೇಕು’ ಎಂದು ಹೇಳಿದರು.

‘ಕಲಿಕಾ ನ್ಯೂನತೆಯನ್ನು ಸರಿ‍ಪಡಿಸಿ ಮಕ್ಕಳ ಸಾಮರ್ಥ್ಯ ಹೆಚ್ಚಿಸಿದರೆ ಅದು ಸಮಾಜಕ್ಕೆ ನಾವು ನೀಡುವ ಬೆಳಕಾಗಿದೆ. ಉದ್ಯಮ, ಕಂಪನಿಯ ಲಾಭಾಂಶವು ಶ್ರೀಮಂತಿಕೆಗಾಗಿ ಅಲ್ಲ. ಸಮಾಜ ಸೇವೆಗಾಗಿ. ಕಂಪನಿಯು ಆಯಿಷ್‌ನ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲಲಿದೆ. ಸೇವೆಗೆ ಎಲ್ಲರೂ ಮುಂದಾಗಬೇಕು’ ಎಂದು ನುಡಿದರು. 

ಡೆಲ್ಚವಾಕ್ಸ್‌ ಕಂಪನಿ ಸಿಇಒ ಗೈ ಟಾಲ್ಬೌವಾರ್ಡೆಟ್, ಫ್ರೌಶರ್‌ ಸಮೂಹ ಸಂಸ್ಥೆಗಳ ಸಿಇಒ ಮೈಕಲ್ ಥಾಯ್ಲ್, ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್‌ ಯಾದವ್‌, ಆಯಿಷ್‌ ಶ್ರವಣ ವಿಭಾಗದ ಮುಖ್ಯಸ್ಥೆ ಡಾ.ಎನ್.ದೇವಿ ಹಾಜರಿದ್ದರು.

ಫ್ರೌಶರ್‌ಸೆನ್ಸಾರ್‌ ತಾಂತ್ರಿಕ ಸಂಸ್ಥೆ ನೆರವು ಪೋಷಕರಿಗೆ ಒಂದು ವರ್ಷ ತರಬೇತಿ ಎಲ್ಲರಂತೆ ವಿಶೇಷ ಮಕ್ಕಳಿಗೆ ಕಲಿಕೆ

ಮಗ ಮೊಹಮ್ಮದ್‌ ಫೈಜನ್‌ ಎರಡು ತಿಂಗಳಿದ್ದಾಗ ಕಿವಿ ಕೇಳದ್ದು ಗೊತ್ತಾಯಿತು. ಆಯಿಷ್‌ನಲ್ಲಿ ಥೆರಪಿ ಕೊಡಿಸಲು ಬಂದೆ. ಬಡವರಾದ ನಮಗೆ ಕಡಿಮೆ ಬೆಲೆಯಲ್ಲಿ ಶ್ರವಣ ಸಾಧನ ಸಿಕ್ಕಿದೆ

- ಮುಬಿನಾ ಮುದ್ಗಲ್‌ ರಾಯಚೂರು

ಮಗ ಸಮರ್ಥನಿಗೆ ಶ್ರವಣ ಸಮಸ್ಯೆಯಿದೆ. ಎರಡೂವರೆ ತಿಂಗಳಿಂದ ಥೆರಪಿಗೆ ಬಂದಿರುವೆ. ಸಾಧನ ನೀಡಿರುವುದು ಸಂತಸ ತಂದಿದೆ

- ಸರಸ್ವತಿ ನಿಂಗಪ್ಪನವರ್ ಧಾರವಾಡ

ಮಕ್ಕಳ ಭವಿಷ್ಯ ಪೋಷಕರ ಜವಾಬ್ದಾರಿ’ ಸಂಸ್ಥೆಯ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಮಾತನಾಡಿ ‘ಶ್ರವಣ ದೋಷಕ್ಕೆ ಔಷಧ ಶಸ್ತ್ರಚಿಕಿತ್ಸೆ ಎಂಬುದಿಲ್ಲ. ಕನ್ನಡಕವನ್ನು ಹಾಕುವಂತೆಯೇ ಶ್ರವಣ ಸಾಧನಗಳನ್ನು ಬಳಸಲೇಬೇಕು. ಶ್ರವಣ ಸಾಧನ ಬಳಸುವಾಗ ಎಲ್ಲ ಶಬ್ದಗಳೂ ಕೇಳಿಸುತ್ತವೆ. ಅರ್ಥ ಮಾಡಿಕೊಳ್ಳಬೇಕೆಂದರೆ ವಾಕ್‌ ಥೆರಪಿಗೆ ಬರಬೇಕು’ ಎಂದರು. ‘ಜೀವನದಲ್ಲಿ ಕಷ್ಟಗಳು ಇದ್ದದ್ದೇ. ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಸರ್ಕಾರವು ನೆರವು ನೀಡಿದೆ. ಇಲ್ಲಿಯೇ ಉಳಿದುಕೊಂಡು ತರಬೇತಿ ಪಡೆಯಬೇಕು. ಎರಡ್ಮೂರು ವರ್ಷದಲ್ಲಿ ಮಕ್ಕಳು ಸಾಮಾನ್ಯರಂತೆಯೇ ಕಲಿಯಲಿದ್ದಾರೆ. ಎಲ್ಲರೂ ತರಬೇತಿಯಲ್ಲಿ ಪಾಲ್ಗೊಂಡು ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ನಿರೂಪಿಸಬೇಕು’ ಎಂದು ಸಲಹೆ ನೀಡಿದರು. ‘ಮಕ್ಕಳ ಕಲಿಕೆಗೆ ಶೇ 10ರಷ್ಟು ಸಹಾಯವನ್ನು ಶ್ರವಣ ಸಾಧನ ಮಾಡಲಿದೆ. ಉಳಿದ ಶೇ 90ರಷ್ಟು ಶ್ರಮ ಹಾಗೂ ಸಮಯವನ್ನು ಪೋಷಕರು ಮಕ್ಕಳ ಕಲಿಕೆಗೆ ಕೊಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.