ADVERTISEMENT

ಸಹಕಾರ ಸಂಘಗಳಲ್ಲಿ ಹಸ್ತಕ್ಷೇಪ ಸಲ್ಲದು: ಬಸವರಾಜ ಹೊರಟ್ಟಿ

ಸನ್ಮಾನ ಸಮಾರಂಭದಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 16:25 IST
Last Updated 15 ಸೆಪ್ಟೆಂಬರ್ 2024, 16:25 IST
ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್‌ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಜಿ.ಡಿ.ಹರೀಶ್‌ಗೌಡ, ಶರತ್‌ಚಂದ್ರ ಸ್ವಾಮೀಜಿ ಪಾಲ್ಗೊಂಡಿದ್ದರು
ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್‌ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಜಿ.ಡಿ.ಹರೀಶ್‌ಗೌಡ, ಶರತ್‌ಚಂದ್ರ ಸ್ವಾಮೀಜಿ ಪಾಲ್ಗೊಂಡಿದ್ದರು   

ಮೈಸೂರು: ‘ಸಹಕಾರ ಸಂಘಗಳಲ್ಲಿ ಸರ್ಕಾರ, ರಾಜಕಾರಣ ಹಸ್ತಕ್ಷೇಪ ಮಾಡಬಾರದು’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಈ ಸಂಬಂಧ ಚರ್ಚೆಯಾಯಿತು. ಹಸ್ತಕ್ಷೇಪಕ್ಕೆ ನಾವು ಆಸ್ಪದ ಕೊಡಲಿಲ್ಲ. ಎಷ್ಟೋ ಸಹಕಾರ ಸಂಘಗಳು ಬೆಳೆದು ಇಂದು ಬ್ಯಾಂಕ್‌ಗಳಾಗಿ ಪರಿವರ್ತನೆಗೊಂಡಿವೆ. ಕಡಿಮೆ ಬಡ್ಡಿ ದರದಲ್ಲಿ ಸಂಘದ ಸದಸ್ಯರಿಗೆ ಸಾಲ ನೀಡುವ ಮೂಲಕ ಕಷ್ಟದ ಕಾಲದಲ್ಲಿ ನೆರವಾಗಿವೆ’ ಎಂದರು.

ADVERTISEMENT

ಒಬ್ಬ ವ್ಯಕ್ತಿಯಿಂದ ಸಹಕಾರ ಸಂಘಗಳು ಬೆಳೆಯಲು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಕೂಡಿಕೊಂಡು ತಿಳವಳಿಕೆಯಿಂದ ಕೆಲಸ ಮಾಡಿದರೆ ಸಂಘಗಳು ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದರು.

ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿ, ‘ಅವ್ಯವಹಾರ, ವ್ಯತ್ಯಾಸಗಳಿಂದ ಎಷ್ಟೋ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿಲ್ಲ. ಆದರೆ ಕೃಷ್ಣರಾಜೇಂದ್ರ ಬ್ಯಾಂಕ್ 99 ವರ್ಷಗಳು ತುಂಬಿದ್ದು, ಎಲ್ಲವೂ ಸರಿ ಇದ್ದರೆ ಮಾತ್ರ ಸಂಘಗಳು ಯಶಸ್ವಿಯಾಗಿ ನಡೆಯಲು ಸಾಧ್ಯ. ಈ ಹಿಂದೆ ಸಹಕಾರ ಸಂಘಗಳ ಚುನಾವಣೆಗಳು ಗೊತ್ತೇ ಆಗುತ್ತಿರಲಿಲ್ಲ. ಆದರೆ ಈಗ ಲೋಕಸಭೆ, ವಿಧಾನಸಭಾ ಚುನಾವಣೆಗಳಿಗಿಂತಲೂ ಕಡಿಮೆ ಇಲ್ಲದಂತೆ ಚುನಾವಣೆಗಳು ನಡೆಯುತ್ತವೆ’ ಎಂದು ಹೇಳಿದರು.

‘9088 ಸದಸ್ಯರನ್ನು ಹೊಂದಿರುವ ಈ ಬ್ಯಾಂಕ್‌ ಶೇ 8ರ ಬಡ್ಡಿ ದರದಲ್ಲಿ ₹ 43 ಕೋಟಿ ಸಾಲ ನೀಡಿದೆ. ಯಾವುದೇ ಸದಸ್ಯರಿಗೆ ಬ್ಯಾಂಕ್ ನಮ್ಮದು ಎಂಬ ಮನೋಭಾವ ಬರಬೇಕು. ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ’ ಎಂದು ಹೇಳಿದರು.

‘ಸಹಕಾರ ಸಂಘಗಳಲ್ಲಿ ರಾಜಕಾರಣ, ಸರ್ಕಾರದ ಹಸ್ತಕ್ಷೇಪ ಇಲ್ಲದಂತೆ ಸ್ವಾಯತ್ತೆ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಖಾಸಗಿ ಬ್ಯಾಂಕ್‌ಗಳಲ್ಲಿ ಷೇರುದಾರರು ದೊಡ್ಡ ಉದ್ಯಮಿಗಳಾಗಿರುತ್ತಾರೆ. ಆದರೆ ಸಹಕಾರ ಸಂಘಗಳಲ್ಲಿ ಇದು ಕಡಿಮೆ. ಮಧ್ಯಮ ವರ್ಗದವರು ಹೆಚ್ಚಿನ ಜನರು ಇರುತ್ತಾರೆ. ಸಹಕಾರಿ ಸಂಸ್ಥೆಗಳು ಉಳಿಯಬೇಕು, ಬೆಳೆಯಬೇಕು’ ಎಂದರು.

ಕುಂದೂರು ಮಠದ ಶರತ್‌ಚಂದ್ರ ಸ್ವಾಮೀಜಿ ಮಾತನಾಡಿದರು. ಬ್ಯಾಂಕ್ ಅಧ್ಯಕ್ಷ ಪ್ರತಿಧ್ವನಿ ಪ್ರಸಾದ್, ಉಪಾಧ್ಯಕ್ಷ ಡಿ.ಬಸವರಾಜು, ನಿರ್ದೇಶಕರಾದ ಎಂ.ಡಿ. ಪಾರ್ಥಸಾರಥಿ, ಕೆ.ಜಿ.ಶಂಕರನಾರಾಯಣಶಾಸ್ತ್ರಿ, ನಂಸಿದ್ದಪ್ಪ ಎಂ.ಎ., ಎಚ್.ಎನ್.ಸರ್ವಮಂಗಳ, ಬಿ.ನಾಗರಾಜ್, ಎಂ.ಎನ್‌.ನವೀನ್‌ಕುಮಾರ್, ಎಚ್.ವಿ.ಭಾಸ್ಕರ್, ಎಂ.ಎಸ್.ಅರುಣ್ ಸಿದ್ದಪ್ಪ, ವಿ.ಎಂ.ನಾಗೇಂದ್ರ ಪ್ರಸಾದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.