ADVERTISEMENT

ಮೈಸೂರು |ದಸರಾದಲ್ಲಿ ರಾಜ್ಯಪಾಲರು ಭಾಗವಹಿಸಬಾರದು: ಅಹಿಂದ ಸಂಘಟನೆಯಿಂದ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 23:10 IST
Last Updated 10 ಅಕ್ಟೋಬರ್ 2024, 23:10 IST
‘ರಾಜ್ಯಪಾಲರು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು’ ಎಂದು ಆಗ್ರಹಿಸಿ ಅಹಿಂದ ಸಂಘಟನೆಗಳು ಮತ್ತು ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಸದಸ್ಯರು ಗುರುವಾರ ಅಂಚೆ ಪತ್ರ ಚಳವಳಿ ನಡೆಸಿದರು
‘ರಾಜ್ಯಪಾಲರು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು’ ಎಂದು ಆಗ್ರಹಿಸಿ ಅಹಿಂದ ಸಂಘಟನೆಗಳು ಮತ್ತು ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಸದಸ್ಯರು ಗುರುವಾರ ಅಂಚೆ ಪತ್ರ ಚಳವಳಿ ನಡೆಸಿದರು   

ಮೈಸೂರು: ‘ದಸರಾ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಬಾರದು’ ಎಂದು ಆಗ್ರಹಿಸಿ ಅಹಿಂದ ಸಂಘಟನೆಗಳು ಮತ್ತು ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಸದಸ್ಯರು ರಾಮಸ್ವಾಮಿ ವೃತ್ತದಲ್ಲಿ ‘ಗೋ ಬ್ಯಾಕ್‌ ಗವರ್ನರ್‌’ ಫಲಕ ಹಿಡಿದು ಪ್ರತಿಭಟಿಸಿದರು.

‘ರಾಜ್ಯಪಾಲರು ತಮ್ಮ ಹುದ್ದೆಯ ಘನತೆಯನ್ನು ಮರೆತು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ದಲ್ಲಾಳಿಯಂತೆ ಕೆಲಸ ಮಾಡಿರುವುದು ಖಂಡನೀಯ. ಪ್ರಜಾ‍ಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಕರ್ನಾಟಕದ ಕರಾಳ ರಾಜಕೀಯದ ಕೇಂದ್ರಬಿಂದುವಾಗಿ ಅವರು ಗುರುತಿಸಿಕೊಂಡಿದ್ದಾರೆ’ ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್‌.ಶಿವರಾಮು ಆರೋಪಿಸಿದರು.

‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ವಿರೋಧ ಪಕ್ಷಗಳಿಂದ ಸುಪಾರಿ ಪಡೆದು ಕಾನೂನು ಬಾಹಿರವಾಗಿ ತನಿಖೆಗೆ ಅನುಮತಿ ನೀಡಿದ್ದಾರೆ. ಇಂತಹ ಸಂವಿಧಾನ ವಿರೋಧಿ ರಾಜ್ಯಪಾಲ ಮೈಸೂರು ದಸರಾದಲ್ಲಿ ಭಾಗವಹಿಸಬಾರದು’ ಎಂದು ಒತ್ತಾಯಿಸಿದರು.

ADVERTISEMENT

‘ಅವರು ಭಾಗವಹಿಸಿದ ಬಳಿಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ರಾಜ್ಯಪಾಲರೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದೇವಗಳ್ಳಿ ಸೋಮಶೇಖರ್‌, ಎಸ್‌ಸಿ, ಎಸ್‌ಟಿ ವಕೀಲರ ಸಂಘದ ಕಾರ್ಯದರ್ಶಿ ಎ.ಆರ್‌.ಕಾಂತರಾಜು, ಕುಂಬಾರರ ಸಂಘದ ಅಧ್ಯಕ್ಷ ಎಚ್‌.ಎಸ್‌.ಪ್ರಕಾಶ್‌, ಉಪ್ಪಾರರ ಸಂಘದ ಅಧ್ಯಕ್ಷ ಯೋಗೇಶ ಉಪ್ಪಾರ, ಮಡಿವಾಳರ ಸಂಘದ ಅಧ್ಯಕ್ಷ ರವಿನಂದನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.