ಮೈಸೂರು: ‘ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುತ್ತೇವೆ. ಅಭಿವೃದ್ಧಿಯ ನೊಗ ಹೊತ್ತಿರುವ ನಾವು ಪ್ರತಿ ವಿಷಯದಲ್ಲೂ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಸೋಮವಾರ ಇಲ್ಲಿನ ಧನ್ವಂತರಿ ರಸ್ತೆಯಲ್ಲಿ ಸಂಘದ ನವೀಕೃತ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಪ್ರತಿ ಸರ್ಕಾರಿ ನೌಕರನೂ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ಸಂವಿಧಾನದ ಆಶಯ ಅರಿತು ಜನರ ಹಕ್ಕುಗಳನ್ನು ರಕ್ಷಿಸಿ, ಅವರಿಗೆ ಯಾವುದೇ ರೀತಿಯ ವಂಚನೆ ಆಗದಂತೆ ನೋಡಿಕೊಳ್ಳಬೇಕು. ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಬೇಕು’ ಎಂದು ಸೂಚಿಸಿದರು.
ಕೆಡದಂತೆ ನೋಡಿಕೊಳ್ಳಬೇಕು: ‘ನಾವು ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ವಾಸಿಸುತ್ತಿದ್ದೇವೆ. ಇದು ಪ್ರಮುಖವಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗ ಎಂಬ ನಾಲ್ಕು ಆಧಾರ ಸ್ತಂಭಗಳನ್ನು ಒಳಗೊಂಡಿದೆ. ಜನರ ಭವಿಷ್ಯ ಉಜ್ವಲಗೊಳಿಸುವ ಜವಾಬ್ದಾರಿ ಹೊಂದಿರುವ ಈ ರಂಗಗಳು ಜನರಿಗೆ ಏನು ಬೇಕು ಎಂಬುದನ್ನು ಒದಗಿಸಿ, ಅಭಿವೃದ್ಧಿಯತ್ತ ಸಾಗುವಂತೆ ಮಾಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಈ ನಾಲ್ಕು ಅಂಗಗಳಲ್ಲೂ ಮುಪ್ಪು ಕಾಣುತ್ತಿದೆ. ಅದು ಕೆಡದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ನಮಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿರುವ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.
‘ಸರ್ಕಾರಿ ನೌಕರರು ಅಭಿವೃದ್ಧಿಯ ಚಕ್ರದೊಳಗಿನ ಕೇಂದ್ರ ಬಿಂದುವಿನಂತೆ. ಅವರು ನಿರ್ವಹಿಸುವ ಕೆಲಸಗಳಿಂದಲೆ ಸರ್ಕಾರದ ಚಿತ್ರಣ ಹಾಗೂ ಜನರ ಜೀವನದ ಸ್ಥಿತಿ ಗುರುತಿಸಬಹುದು. ಸರ್ಕಾರವು ಜಾರಿಗೊಳಿಸುವ ಪ್ರತಿ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು’ ಎಂದರು.
ನೌಕರರ ಹಿತ ಕಾಯಲು ಬದ್ಧ: ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ‘ಸರ್ಕಾರಿ ನೌಕರರ ಹಿತ ಕಾಯುವಲ್ಲಿ ಬದ್ಧವಾಗಿರುವ ನಮ್ಮ ಸರ್ಕಾರ, 7ನೇ ವೇತನ ಆಯೋಗ ಜಾರಿಗೊಳಿಸುವ ಮೂಲಕ ನೌಕರನ ಕನಸನ್ನು ನನಸು ಮಾಡಿದೆ. ಕೊಟ್ಟ ಮಾತು ಉಳಿಸಿಕೊಂಡಿದೆ’ ಎಂದು ನುಡಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ‘ನೌಕರರು ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸಿದರೆ ಸರ್ಕಾರವು ಜನಪರ ಹಾಗೂ ಪ್ರಾಮಾಣಿಕವಾಗಿ ನಡೆಯುತ್ತಿದೆ ಎಂದರ್ಥ’ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ‘ಸರ್ಕಾರಿ ನೌಕರರಾಗಿ ಕೆಲಸ ಮಾಡುವುದು ಜೀವನದಲ್ಲಿಯೇ ಅತ್ಯಂತ ಅಮೂಲ್ಯವಾದ ವಿಷಯವಾಗಿದ್ದು, ಅದನ್ನು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು’ ಎಂದು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಗೋವಿಂದರಾಜು ಮಾತನಾಡಿದರು. ಸಂಘದ ನಿವೃತ್ತ ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಲಾಯಿತು. ವಿಧಾನಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸರ್ಕಾರಿ ನೌಕರರ ಸಂಘದ ನವೀಕೃತ ಕಟ್ಟಡ ಉದ್ಘಾಟನೆ ₹ 1 ಕೋಟಿ ಅನುದಾನದಲ್ಲಿ ಕಾಮಗಾರಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿ
ಸಂವಿಧಾನದ ಆಶಯಗಳನ್ನು ಜನರಿಗೆ ತಿಳಿಸಿ ಉತ್ತಮ ಸಮಾಜ ಕಟ್ಟುವ ಕೆಲಸವನ್ನು ಎಲ್ಲರೂ ಮಾಡಬೇಕುಡಾ.ಎಚ್.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಸರ್ಕಾರಿ ನೌಕರರು ಯಾವುದೇ ಆಸೆಗೆ– ಆಮಿಷಕ್ಕೆ ಒಳಗಾಗದೆ ಸಮಾಜದ ಒಳಿತಿಗಾಗಿ ದುಡಿದರೆ ಒಳ್ಳೆಯ ಪ್ರತಿಫಲ ಸಿಗುತ್ತದೆಡಾ.ಡಿ.ತಿಮ್ಮಯ್ಯ ವಿಧಾನಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.