ADVERTISEMENT

ಮೈಸೂರು | ₹1 ಕೋಟಿ ವೆಚ್ಚದಲ್ಲಿ ಸರ್ಕಾರಿ ಗೋಶಾಲೆ

ಮೈಸೂರು ತಾಲ್ಲೂಕಿನ ಆಯರಹಳ್ಳಿ ವ್ಯಾಪ್ತಿಯಲ್ಲಿ ಸ್ಥಾಪನೆ

ಎಂ.ಮಹೇಶ
Published 22 ಜನವರಿ 2023, 23:15 IST
Last Updated 22 ಜನವರಿ 2023, 23:15 IST
ಮೈಸೂರು ತಾಲ್ಲೂಕು ಆಯರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಸರ್ಕಾರಿ ಗೋಶಾಲೆ ನಿರ್ಮಿಸಲಾಗಿದೆ/ ಪ್ರಜಾವಾಣಿ ಚಿತ್ರ
ಮೈಸೂರು ತಾಲ್ಲೂಕು ಆಯರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಸರ್ಕಾರಿ ಗೋಶಾಲೆ ನಿರ್ಮಿಸಲಾಗಿದೆ/ ಪ್ರಜಾವಾಣಿ ಚಿತ್ರ   

ಮೈಸೂರು: ಮೈಸೂರು ತಾಲ್ಲೂಕಿನ ಆಯರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎರಡು ಎಕರೆ ಪ್ರದೇಶದಲ್ಲಿ ಜಿಲ್ಲಾ ಸರ್ಕಾರಿ ಗೋಶಾಲೆಯನ್ನು ಆರಂಭಿಸಲಾಗಿದ್ದು, ಸದ್ಯ 15 ಎಮ್ಮೆ–ಕರುಗಳು ಸೇರಿದಂತೆ 37 ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ‌ಸೇವಾ ಇಲಾಖೆ, ಜಿಲ್ಲಾ ಪ್ರಾಣಿ ದಯಾ ಸಂಘದಿಂದ ಇಮ್ಮಾವು ಕೈಗಾರಿಕಾ ಪ್ರದೇಶದ ಸಮೀಪದ ಗುಡ್ಡದ ಪ್ರದೇಶದಲ್ಲಿ ಆರಂಭಿಸಿರುವ ಈ ಗೋಶಾಲೆಯು ಆಯರಹಳ್ಳಿ ಗ್ರಾಮದ ಸರ್ವೇ ನಂ.212ರಲ್ಲಿ ಬರುತ್ತದೆ. ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 2022–23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಯೋಜನೆ ಘೋಷಿಸಲಾಗಿತ್ತು. ಇದನ್ನು ಈಗ ಅನುಷ್ಠಾನಕ್ಕೆ ತರಲಾಗಿದ್ದು, ಕಾರ್ಯಾರಂಭವನ್ನೂ ಮಾಡಲಾಗಿದೆ. ಬಿಡಾಡಿ ಜಾನುವಾರುಗಳಿಗೆ ನೆರವಾಗುವ ಉದ್ದೇಶ ಹೊಂದಲಾಗಿದೆ.

ಹಲವು ವ್ಯವಸ್ಥೆ:

ADVERTISEMENT

ಇಲಾಖೆಗೆ 1986ರಲ್ಲಿ 10 ಎಕರೆ ಜಾಗ ನೀಡಲಾಗಿತ್ತು. ಅದರಲ್ಲಿ ಈಗ 2 ಎಕರೆಯನ್ನು ಗೋಶಾಲೆಗೆ ಬಳಸಲಾಗಿದೆ. ಕೊಟ್ಟಿಗೆ, ಗೋಶಾಲೆ ನಿರ್ವಹಣೆಗೆ ನೇಮಿಸಿರುವ ಸಿಬ್ಬಂದಿಗೆ ಕಚೇರಿ, ಔಷಧ ಮೊದಲಾದ ಪರಿಕರಗಳನ್ನು ಇಡಲು ಕೊಡಲು, ಕಾವಲುಗಾರನಿಗೆ ಕೊಠಡಿ ನಿರ್ಮಿಸಲಾಗಿದೆ.

ಒಂದು ಲಕ್ಷ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್, 5ಸಾವಿರ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಗತ್ಯ ಪೀಠೋಪಕರಣಗಳು ಹಾಗೂ ಪಶುಆಸ್ಪತ್ರೆ ನಡೆಸಲು ಬೇಕಾಗುವ ಉಪಕರಣಗಳನ್ನು ವ್ಯವಸ್ಥೆ ಮಾಡಲಾಗಿದೆ. ಎರಡು ಎಕರೆಗೆ ಮುಳ್ಳುತಂತಿ ಬೇಲಿ ಹಾಕಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಮೀಪದ ಪಶು ಆಸ್ಪತ್ರೆಯಾದ ದೇವಲಾಪುರ ಪಶು ಆಸ್ಪತ್ರೆಯ ವೈದ್ಯರಿಗೆ ವೈದ್ಯಕೀಯ ನಿರ್ವಹಣೆಯ ‘ಪ್ರಭಾರ’ ವಹಿಸಲಾಗಿದೆ.

ಸದ್ಯಕ್ಕೆ ನೂರಕ್ಕೆ ಆಶ್ರಯ:

ಈಗ ನಿರ್ಮಿಸಿರುವ ಶೆಡ್(ಕೊಟ್ಟಿಗೆ)ಯಲ್ಲಿ ನೂರು ಜಾನುವಾರುಗಳಿಗೆ ಆಶ್ರಯ ಕಲ್ಪಿಸಬಹುದಾಗಿದೆ. ಸಮೀಪದಲ್ಲೇ ಮತ್ತೊಂದು ಶೆಡ್ ನಿರ್ಮಿಸಲಾಗುತ್ತದೆ. ಆಗ, 200 ಜಾನುವಾರುಗಳನ್ನು ಪೋಷಿಸಬಹುದಾಗಿದೆ.

‘ಗೋಶಾಲೆಯಲ್ಲಿ ಜಾನುವಾರುಗಳಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗಿದೆ. ಬಿಡಾಡಿ ದನ–ಕರುಗಳು, ವಿವಿಧ ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡವು, ಅಪಘಾತಕ್ಕೆ ಒಳಗಾದವು ಮೊದಲಾದ ಜಾನುವಾರುಗಳನ್ನು ಇಲ್ಲಿಗೆ ತಂದು ಸಾಕಲಾಗುತ್ತದೆ. ಜೂನ್‌ನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಈಗ ಪೂರ್ಣಗೊಂಡಿದೆ. ಜಾಗದ ಲಭ್ಯತೆ ಇರುವುದರಿಂದಾಗಿ, ಜಾನುವಾರುಗಳ ಸಂಖ್ಯೆ ಆಧರಿಸಿ ವಿಸ್ತರಣೆಗೂ ಅವಕಾಶವಿದೆ. ಮೇವಿನ ಬ್ಯಾಂಕ್ ಇದೆ’ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಷಡಕ್ಷರಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಗೊಬ್ಬರ ಬಳಸಿಕೊಂಡು...

‘ಉದ್ಯೋಗ ಖಾತ್ರಿ ಯೋಜನೆಯಲ್ಲಿ ₹48 ಲಕ್ಷದಲ್ಲಿ ರಸ್ತೆ ಕಾಮಗಾರಿ, 2ನೇ ಶೆಡ್‌, ಮೇವಿನ‌ ಶೆಡ್ ಕಾಮಗಾರಿ ನಡೆದಿದೆ. ಒಂದೂವರೆ ತಿಂಗಳಿಂದ ರಸ್ತೆ ನಿರ್ಮಿಸಲಾಗಿದೆ. ಉಳಿದ 8 ಎಕರೆಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿ, ನೈಸರ್ಗಿಕ ಗೋಶಾಲೆಯನ್ನಾಗಿ ರೂಪಿಸುವ ಮಾಡುವ ಉದ್ದೇಶವಿದೆ. ಇಲ್ಲಿ ಉತ್ಪಾದನೆಯಾಗುವ ಗೊಬ್ಬರವನ್ನು ಮಾರಿ ಸ್ವತಂತ್ರವಾಗಿ ನಿರ್ವಹಣೆ ಮಾಡಲು ಯೋಜಿಸಲಾಗಿದೆ. ಗೊಬ್ಬರದಿಂದ ಉಪಉತ್ಪನ್ನಳಾದ ಜೀವಾಮೃತ,‌ ಉರುವಲು, ತಯಾರಿಸುವುದು, ದೀಪ, ದೂಪ ಹಾಗೂ ಪೆನಾಯಿಲ್ ತಯಾರಿಕೆಗೆ ಯೋಜಿಸಲಾಗಿದೆ. ಈ ಗೋಶಾಲೆಯ ನಿರ್ವಹಣೆಗೆ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

8 ರಾಸುಗಳ ದತ್ತು

‘ಪುಣ್ಯಕೋಟಿ’ ಯೋಜನೆಯಲ್ಲಿ ಸಾರ್ವಜನಿಕರು ಜಾನುವಾರುಗಳನ್ನು ದತ್ತು ತೆಗೆದುಕೊಳ್ಳಬಹುದು. ಒಂದು ಹಸುವಿಗೆ ವರ್ಷಕ್ಕೆ ₹11ಸಾವಿರ ಪಾವತಿಸಿ ದತ್ತು ಪಡೆಯಬಹುದು. ಆ ಹಣದಲ್ಲಿ ಗೋಶಾಲೆಯನ್ನು ಪೋಷಣೆ ಮಾಡುತ್ತೇವೆ. ಈವರೆಗೆ 8 ಮಂದಿ ತಲಾ ₹ 11ಸಾವಿರವನ್ನು ಇಲಾಖೆಗೆ ಪಾವತಿಸಿ 8 ರಾಸುಗಳನ್ನು ದತ್ತು ಪಡೆದಿದ್ದಾರೆ.

ಉದ್ಘಾಟನೆ ದಿಢೀರ್ ಮುಂದೂಡಿಕೆ!

ಭಾನುವಾರ ಹಮ್ಮಿಕೊಂಡಿದ್ದ ಗೋಶಾಲೆಯ ಅಧಿಕೃತ ಉದ್ಘಾಟನೆ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ಮುಂದೂಡಲಾಯಿತು.

ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ ಬಾರದಿದ್ದರಿಂದ ರದ್ದುಗೊಳಿಸಲಾಯಿತು. ಉದ್ಘಾಟನೆಗಾಗಿ ಇಲಾಖೆಯ ಅಧಿಕಾರಿಗಳು ಪೆಂಡಾಲ್‌ ಸೇರಿದಂತೆ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಸ್ಥಳೀಯರು ಮತ್ತು ಇಲಾಖೆಯ ಸಿಬ್ಬಂದಿ ನಿರಾಸೆಯಿಂದ ವಾಪಸಾದರು.

ಇಲಾಖೆಯಿಂದ, ಗೋಶಾಲೆಯು ಆಯರಹಳ್ಳಿಯಲ್ಲಿದೆ ಎಂದು ತಿಳಿಸಿದ್ದು ಕೂಡ ಗೊಂದಲಕ್ಕೆ ಕಾರಣವಾಯಿತು. ಗ್ರಾಮಸ್ಥರಿಗೆ ಆ ಮಾಹಿತಿಯೇ ಇರಲಿಲ್ಲ. ಗೋಶಾಲೆ ನಿರ್ಮಿಸಿರುವುದು ಇಮ್ಮಾವು ಕೈಗಾರಿಕಾ ಪ್ರದೇಶದ ಸಮೀಪದಲ್ಲಿ. ಅದು ಆಯರಹಳ್ಳಿಯಿಂದ ಸರಾಸರಿ 4ರಿಂದ 5 ಕಿ.ಮೀ. ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.