ADVERTISEMENT

ಅಹಿಂದ ಪರವಾಗಿ ಸರ್ಕಾರ: ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು: ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 13:29 IST
Last Updated 17 ಅಕ್ಟೋಬರ್ 2024, 13:29 IST
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಉದ್ಗಾಟಿಸಿದರು.ದರ್ಶನ್ ಧ್ರುವನಾರಾಯಣ ಇದ್ದಾರೆ.
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಉದ್ಗಾಟಿಸಿದರು.ದರ್ಶನ್ ಧ್ರುವನಾರಾಯಣ ಇದ್ದಾರೆ.   

ಪ್ರಜಾವಾಣಿ ವಾರ್ತೆ

ನಂಜನಗೂಡು : ‘ಸರ್ಕಾರ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ಪರವಾಗಿದ್ದು, ಶೋಷಿತರಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ಭಾರತೀಯ ಸಂಸ್ಕೃತಿ, ಪರಂಪರೆ, ಮೌಲ್ಯ ಪ್ರತಿಪಾದಿಸುವ ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ನಮ್ಮ ಸಂಸ್ಕೃತಿ ಉಳಿಯುತ್ತದೆ, ನಾಯಕ ಸಮುದಾಯ ಜನಸಂಖ್ಯೆಗೆ ಅನುಗುಣವಾಗಿ ಶೇ7ಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ನಡೆಸಿದ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ ನೀಡಿತ್ತು, ಹಿಂದುಳಿದ ವರ್ಗಗಳು ಶೈಕ್ಷಣಿಕ, ಆರ್ಥಿಕ ಹಾಗೂ ಸಮಾಜಿಕವಾಗಿ ಮುಂದುವರೆದಾಗ ಮಾತ್ರ ಸಮಾನತೆ ಬದುಕು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಶಾಸಕ ದರ್ಶನ್‌ ಧ್ರುವನಾರಾಯಣ ಮಾತನಾಡಿ,‘ಮಹರ್ಷಿ ವಾಲ್ಮೀಕಿ ಪಿತೃವಾಕ್ಯ ಪರಿಪಾಲನೆ, ಸೋದರ ಪ್ರೇಮ ಮುಂತಾದ ಜೀವನ ಮೌಲ್ಯಗಳನ್ನು ರಾಮಾಯಣ ಗ್ರಂಥದ ಮೂಲಕ ಪ್ರಸ್ತುತಪಡಿಸಿದ್ದಾರೆ, ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕಗೊಳಿಸಿಕೊಳ್ಳಬಹುದು’ಎಂದರು.

‘2019ರಲ್ಲಿ ವಾಲ್ಮೀಕಿ ಜಯಂತಿ ಮೆರವಣಿಗೆ ವೇಳೆ ನಡೆದ ಗಲಾಟೆಯಲ್ಲಿ ನಾಯಕ ಸಮುದಾಯದ 38 ಯುವಕರ ಮೇಲೆ ಮೊಕದ್ದಮೆ ದಾಖಲಾಗಿತ್ತು. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಹಲವು ಮಂದಿ ವಿದ್ಯಾರ್ಥಿಗಳ ಮೇಲೂ ಮೊಕದ್ದಮೆ ದಾಖಲಾಗಿತ್ತು, ನಾಯಕ ಸಮುದಾಯದ ಮುಖಂಡರ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ಸರ್ಕಾರ ಇವುಗಳನ್ನು ಹಿಂದಕ್ಕೆ ಪಡೆದಿದೆ, ನಗರದ ವಾಲ್ಮೀಕಿ ಭವನಕ್ಕೆ ಈಗಾಗಲೆ ಅನುದಾನ ನೀಡಲಾಗಿದೆ, ಶೀಘ್ರದಲ್ಲಿ ಇನ್ನು ₹50 ಲಕ್ಷ ಅನುದಾನ ತಂದು ಉಳಿದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಜೂನಿಯರ್‌ ಕಾಲೇಜು ಮೈದಾನದಿಂದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾ ತಂಡಗಳು, ಸ್ತಬ್ಧಚಿತ್ರಗಳೊಂದಿಗೆ ಉತ್ಸಾಹದಿಂದ ಭಾಗವಹಿಸಿದ್ದರಿಂದ ರಂಗು ತಂದಿತ್ತು.

ಕಾರ್ಯಕ್ರಮದಲ್ಲಿ ತಾಲ್ಲೂಕು ನಾಯಕರ ಸಂಘದ ಗೌರವ ಅಧ್ಯಕ್ಷ ಚಿಕ್ಕರಂಗನಾಯ್ಕ, ಅಧ್ಯಕ್ಷ ಬಂಗಾರು ಸ್ವಾಮಿ, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಉಪಾಧ್ಯಕ್ಷೆ ರೆಹೆನಬಾನು, ಕಳಲೆ ಕೇಶವಮೂರ್ತಿ, ಬಿಜೆಪಿ ಮುಖಂಡರಾದ ಬಿ.ಹರ್ಷವರ್ಧನ್‌, ಎಸ್.ಮಹದೇವಯ್ಯ‌, ಸಿದ್ದರಾಜು, ಎಚ್. ಎಸ್.ಮಹದೇವಸ್ವಾಮಿ, ಮುಖಂಡರಾದ ಕುಂಬರಳ್ಳಿ ಸುಬ್ಬಣ್ಣ, ಚಾಮರಾಜು, ಶ್ರೀಕಂಠನಾಯ್ಕ, ಸಿ.ಎಂ.ಶಂಕರ್‌, ಕುರಹಟ್ಟಿ ಮಹೇಶ್‌, ಕೆ.ಮಾರುತಿ, ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರ್‌, ತಾ.ಪಂ. ಇಒ ಜೆರಾಲ್ಡ್‌ ರಾಜೇಶ್‌, ನಗರಸಭೆ ಆಯುಕ್ತ ನಂಜುಂಡಸ್ವಾಮಿ, ಸದಸ್ಯರಾದ ಗಾಯಿತ್ರಿ ಮೋಹನ್‌, ಗಂಗಾಧರ್‌, ಮಹದೇವಪ್ರಸಾದ್‌ ಉಪಸ್ಥಿತರಿದ್ದರು.

ನಂಜನಗೂಡಿನ ಜೂನಿಯರ್ ಕಾಲೇಜ್ ಮೈದಾನದಿಂದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದವರೆಗೆ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ನಾಯಕ ಯುವಕರ ಮೇಲಿದ್ದ ಪ್ರಕರಣ ವಾಪಸ್ ಶೀಘ್ರದಲ್ಲಿ ಭವನಕ್ಕೆ ₹50 ಲಕ್ಷ ಅನುದಾನ ಮೀಸಲಾತಿ ಪ್ರಮಾಣ ಹೆಚ್ಚಿಸಲು ಕಾಂಗ್ರೆಸ್ ಬೆಂಬಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.