ADVERTISEMENT

ಮೈಸೂರು: ದುರಸ್ತಿಗೆ ಕಾದಿವೆ ಸರ್ಕಾರಿ ಶಾಲೆಗಳು

ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರಗಳಲ್ಲೇ ಹೆಚ್ಚು ತೊಂದರೆ

ಆರ್.ಜಿತೇಂದ್ರ
Published 13 ಜೂನ್ 2024, 5:56 IST
Last Updated 13 ಜೂನ್ 2024, 5:56 IST
ಮೈಸೂರಿನ ಗಾಂಧಿ ನಗರದ ಹಳೇ ಜಲಪುರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಚಾವಣಿಯ ಗಾರೆ ಉದುರುತ್ತಿರುವುದು –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಗಾಂಧಿ ನಗರದ ಹಳೇ ಜಲಪುರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಚಾವಣಿಯ ಗಾರೆ ಉದುರುತ್ತಿರುವುದು –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ಕಾಂಕ್ರೀಟ್‌ ಕಿತ್ತುಹೋದ ಚಾವಣಿ, ಮಳೆ ನೀರಿಗೆ ತೊಯ್ದ ನೆಲ, ಉದುರಿದ ಹೆಂಚು, ಅಲ್ಲಲ್ಲಿ ಬಿರುಕು ಬಿಟ್ಟ ಗೋಡೆಗಳು...

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಅನೇಕ ಸರ್ಕಾರಿ ಶಾಲೆಗಳ ಸದ್ಯದ ಚಿತ್ರಣ. ಈಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳತ್ತ ಪೋಷಕರ ಚಿತ್ತ ಹರಿಯುತ್ತಿದೆ. ಶಾಲೆಗಳು ಕನ್ನಡ–ಇಂಗ್ಲಿಷ್‌ ಮಾಧ್ಯಮದ ಕಲಿಕೆಯ ಮೂಲಕ ಮಕ್ಕಳನ್ನು ಆಕರ್ಷಿಸತೊಡಗಿವೆ. ಆದರೆ, ಅದಕ್ಕೆ ತಕ್ಕ ವೇಗದಲ್ಲಿ ಮೂಲ ಸೌಕರ್ಯಗಳ ವಿಸ್ತರಣೆ ಆಗುತ್ತಿಲ್ಲ. ಅದರಲ್ಲೂ ಸಾಕಷ್ಟು ಕಡೆಗಳಲ್ಲಿ ಶಿಥಿಲ ಕಟ್ಟಡಗಳ ಕೆಳಗೆ ಪಾಠ ನಡೆದಿದ್ದು, ವಿದ್ಯಾರ್ಥಿಗಳು ಆತಂಕದಲ್ಲೇ ಕೂರುವಂತಾಗಿದೆ.

ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಶಾಲೆಗಳು ದುರಸ್ತಿಯ ನಿರೀಕ್ಷೆಯಲ್ಲಿವೆ. ಅದರಲ್ಲೂ ಕೆಲವು ಶಾಲೆಗಳು ಇನ್ನೂ ಹೆಂಚಿನ ಕಟ್ಟಡದಲ್ಲೇ ನಡೆದಿದ್ದು, ಮಳೆಗಾಲದಲ್ಲಿ ನೀರು ಸೋರುವುದು ಸಾಮಾನ್ಯವಾಗಿದೆ. ಅನೇಕ ಕಟ್ಟಡಗಳಲ್ಲಿ ಚಾವಣಿಯ ಗಾರೆ ಉದುರುತ್ತಿವೆ. ಕೆಲವೆಡೆ ಶಾಲಾ ಕಟ್ಟಡಗಳ ಗೋಡೆಗಳಲ್ಲಿ ಅನೇಕ ಗಿಡಗಳು ಬೆಳೆದು ನಿಂತಿವೆ. ಸುಣ್ಣ– ಬಣ್ಣವಿಲ್ಲದೆ ಮಂಕಾದ ಶಾಲೆಗಳೂ ಸಾಕಷ್ಟು ಸಂಖ್ಯೆಯಲ್ಲಿವೆ.

ADVERTISEMENT

‘ಪ್ರಜಾವಾಣಿ’ ತಂಡ ಮಂಗಳವಾರ ನಗರ ಹಾಗೂ ಗ್ರಾಮೀಣ ಪ್ರದೇಶದ ಹಲವು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಚಿತ್ರಣ ಅರಿಯುವ ಪ್ರಯತ್ನ ಮಾಡಿತು. ಮೈಸೂರು ನಗರದ ಉತ್ತರ ವಲಯದ ಸಾಕಷ್ಟು ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿದ್ದು, ಕೆಲವು ಕಡೆಗಳಲ್ಲಿ ಕಟ್ಟಡ ಬಳಸಲು ಯೋಗ್ಯವಲ್ಲದಿದ್ದರೂ ಪಾಠ–ಪ್ರವಚನ ಮುಂದುವರಿದಿರುವುದು ಕಂಡು ಬಂತು. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ ಅವರನ್ನು ‘ಪ್ರಜಾವಾಣಿ’ ಹಲವು ಬಾರಿ ಮೊಬೈಲ್‌ ಕರೆ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯುವ ಪ್ರಯತ್ನ ಮಾಡಿದರೂ ‘ಮಾಹಿತಿ ಕೊಡುವೆ’ ಎಂದಷ್ಟೇ ಹೇಳಿ ನುಣುಚಿಕೊಂಡರು.

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿನ 4,616 ಕೊಠಡಿಗಳ ಪೈಕಿ 1,800 ಕೊಠಡಿಗಳು ಶಿಥಿಲಗೊಂಡಿವೆ. ಇದರಲ್ಲಿ 1,008 ಕೊಠಡಿಗಳು ಸಣ್ಣಪುಟ್ಟ ದುರಸ್ತಿ ಆಗಬೇಕಿದ್ದರೆ, ಇನ್ನೂ 810 ಕೊಠಡಿಗಳು ಪೂರ್ಣ ಪ್ರಮಾಣದಲ್ಲಿ ದುರಸ್ತಿ ಆಗಬೇಕಿದೆ.

ಸಿ.ಎಂ. ಕ್ಷೇತ್ರದಲ್ಲೂ ತೊಂದರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ ಪ್ರತಿನಿಧಿಸುವ ತಿ. ನರಸೀಪುರ ತಾಲ್ಲೂಕಿನಲ್ಲಿಯೇ ಹೆಚ್ಚು ಕೊಠಡಿಗಳು ದುರಸ್ತಿ ಆಗಬೇಕಿದೆ. ನಂಜನಗೂಡು ತಾಲ್ಲೂಕಿನಲ್ಲಿ 249 ಹಾಗೂ ತಿ. ನರಸೀಪುರ ತಾಲ್ಲೂಕಿನಲ್ಲಿ 230 ಕೊಠಡಿಗಳು ಪೂರ್ಣ ಪ್ರಮಾಣದ ದುರಸ್ತಿಗೆ ಕಾದಿವೆ. ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಹಳೇ ಕಟ್ಟಡವಿದ್ದು, ಹೊಸ ಕೊಠಡಿಗಳ ನಿರ್ಮಾಣದ ಅಗತ್ಯವಿದೆ.

ಮೈಸೂರಿನ ಗಾಂಧಿ ನಗರದ ಆದಿಜಾಂಬವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡ ಕಟ್ಟಡದ ಒಳಗೇ ಕುಳಿತು ಪಾಠ ಕೇಳುತ್ತಿರುವ ಮಕ್ಕಳು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.

ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. 302 ಹೊಸ ಕೊಠಡಿಗಳ ನಿರ್ಮಾಣ ಆಗಬೇಕಿದೆ.

ಎಚ್.ಕೆ. ಪಾಂಡು
ಹುಣಸೂರಿನ ರಂಗನಾಥ ಬಡಾವಣೆಯ ಸರ್ಕಾರಿ ಶಾಲೆ ಶಿಥಿಲಗೊಡಿದ್ದು ಅದನ್ನು ಬಂದ್ ಮಾಡಿ ಪರ್ಯಾಯ ಕಟ್ಟಡದಲ್ಲಿ ತರಗತಿ ನಡೆಸಲಾಗುತ್ತಿದೆ
ಎನ್‌ಡಿಆರ್‌ಎಫ್‌ ಅಡಿ 38 ಶಾಲೆಗಳ ಕೊಠಡಿ ದುರಸ್ತಿ ಸೇರಿದಂತೆ 200ಕ್ಕೂ ಹೆಚ್ಚು ಶಾಲೆಗಳ ಕೊಠಡಿಗಳ ದುರಸ್ತಿಗೆ ಸರ್ಕಾರದಿಂದ ಅನುದಾನ ಸಿಗಲಿದೆ. ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳುತ್ತೇವೆ
ಎಚ್‌.ಕೆ. ಪಾಂಡು ಡಿಡಿಪಿಐ
ರೇವಣ್ಣ
ಶಿಥಿಲಗೊಂಡಿರುವ ಶಾಲೆಗಳ ಸಮಗ್ರ ಮಾಹಿತಿಯನ್ನು ಕಳೆದ ಸಾಲಿನಲ್ಲಿ ಡಿಡಿಪಿಐ ಮೂಲಕ ಸರ್ಕಾರಕ್ಕೆ ಸಲ್ಲಿಸಿದ್ದು ಅನುದಾನಕ್ಕೆ ಮನವಿ ಮಾಡಿದ್ದೇವೆ
–ರೇವಣ್ಣ ಕ್ಷೇತ್ರ ಶಿಕ್ಷಣಾಧಿಕಾರಿ ಹುಣಸೂರು
ನಮ್ಮ ಶಾಲೆ ಕಟ್ಟಡ ಶಿಥಿಲವಾಗಿದ್ದು ನೆಲಸಮಗೊಳಿಸುವ ಕೆಲಸ ನಡೆದಿದೆ. ಈ ಹಿಂದೆ ನೆಲಸಮಗೊಳಿಸಿದ್ದ ಕಟ್ಟಡದ ಕಾಮಗಾರಿ ಆರಂಭವಾಗದ ಕಾರಣ ಮಕ್ಕಳ ಪಾಠಕ್ಕೆ ಅಡ್ಡಿಯಾಗಿದೆ
ಗೋವಿಂದರಾಜು ಎಸ್‌ಡಿಎಂಸಿ ಅಧ್ಯಕ್ಷ ಕಲ್ಕುಣಿಕೆ ಸರ್ಕಾರಿ ಪ್ರಾಥಮಿಕ ಶಾಲೆ
ಎಷ್ಟು ಅನುದಾನ ಬೇಕು?
ಶಾಲೆ ಕೊಠಡಿಗಳ ತುರ್ತು ದುರಸ್ತಿಗೆ ₹53 ಕೋಟಿ ಹಾಗೂ 302 ಹೊಸ ಕೊಠಡಿಗಳ ನಿರ್ಮಾಣಕ್ಕೆ ₹43 ಕೋಟಿ ಅನುದಾನವನ್ನು ಶಿಕ್ಷಣ ಇಲಾಖೆಯು ಕೇಳಿತ್ತು. ಇದರಲ್ಲಿ ಸುಮಾರು 200 ಶಾಲೆಗಳ ಕೊಠಡಿಗಳ ದುರಸ್ತಿಗೆ ಅನುದಾನ ಬಂದಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಎನ್‌ಡಿಆರ್‌ಎಫ್ ನರೇಗಾ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ವಿವಿಧ ಅನುದಾನಗಳು ವಿವಿಧ ಕಂಪನಿಗಳ ಸಿಎಸ್‌ಆರ್‌ ಅನುದಾನಗಳನ್ನು ಬಳಸಿಕೊಂಡು ಸರ್ಕಾರಿ ಶಾಲೆ ಕಟ್ಟಡಗಳ ದುರಸ್ತಿ ಮಾಡುವ ಪ್ರಯತ್ನ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.