ADVERTISEMENT

ನಾಡಹಬ್ಬ ದಸರೆಗೆ ₹30 ಕೋಟಿ ಅನುದಾನ: ಸಚಿವ ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 7:03 IST
Last Updated 1 ಸೆಪ್ಟೆಂಬರ್ 2023, 7:03 IST
<div class="paragraphs"><p>ಮೈಸೂರಿನ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ವೀರನಹೊಸಹಳ್ಳಿಯಲ್ಲಿ ಶುಕ್ರವಾರ ನಾಡಹಬ್ಬ ದಸರೆಯಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅಭಿಮನ್ಯು‌ ನೇತೃತ್ವದ 9 ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ ಪೂಜೆ ಸಲ್ಲಿಸಿದರು. </p></div>

ಮೈಸೂರಿನ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ವೀರನಹೊಸಹಳ್ಳಿಯಲ್ಲಿ ಶುಕ್ರವಾರ ನಾಡಹಬ್ಬ ದಸರೆಯಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅಭಿಮನ್ಯು‌ ನೇತೃತ್ವದ 9 ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ ಪೂಜೆ ಸಲ್ಲಿಸಿದರು.

   

-ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ

ಮೈಸೂರು: 'ನಾಡಹಬ್ಬ ದಸರೆಗೆ ₹ 30 ಕೋಟಿ ಅನುದಾನ ಕೇಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುವ ಭರವಸೆ ನೀಡಿದ್ದಾರೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ADVERTISEMENT

ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಶುಕ್ರವಾರ 'ಗಜಪಯಣ'ಕ್ಕೆ ಶುಕ್ರವಾರ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, 'ಅದ್ದೂರಿ ದಸರಾ ಆಚರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಾರ್ಯಕಾರಿ ಸಮಿತಿಗಳ ರಚನೆಗೆ ಸಭೆಯನ್ನು ನಡೆಸಲಾಗಿದೆ' ಎಂದರು.

'ಭಾರತದ ಸಂವಿಧಾನವು ಧಾರ್ಮಿಕ ಅಭಿವ್ಯಕ್ತಿ, ಆಚರಣೆಯನ್ನು ಮುಕ್ತವಾಗಿ ಮಾಡುವ ಸ್ವಾತಂತ್ರ್ಯವನ್ನು ಪ್ರಜೆಗಳಿಗೆ ನೀಡಿದೆ. ಜನರು ನಂಬಿಕೆ ಇಟ್ಟಿರುವ ಧಾರ್ಮಿಕ ಹಿನ್ನೆಲೆಯಲ್ಲಿಯೇ ರಾಜ್ಯದಲ್ಲಿ ನಾಡಹಬ್ಬವನ್ನು ಆಚರಿಸಲಾಗುತ್ತಿದೆ. ಕನ್ನಡ ಮಾತೆ, ನಾಡದೇವತೆ ಚಾಮುಂಡೇಶ್ವರಿ ದೇವಿಯ ಜಂಬೂಸವಾರಿ ನಡೆಯಲಿದೆ' ಎಂದರು.

'ಮೊದಲು ವೀರನಹೊಸಹಳ್ಳಿಯಿಂದ ಆನೆಗಳು ಅರಮನೆಗೆ ನಡಿಗೆಯಲ್ಲಿ ಕರೆದೊಯ್ಯಲಾಗುತ್ತಿತ್ತು. ಆನೆಗಳಿಗೆ ದಣಿವಾಗುವ ಕಾರಣಕ್ಕೆ 2004ರ ದಸರೆಯಿಂದ ಲಾರಿಗಳಲ್ಲಿ ಕರೆತರಲಾಗುತ್ತಿದೆ‌' ಎಂದು ಹೇಳಿದರು‌.

'ಆನೆಗಳನ್ನು ಮುನ್ನಡೆಸುವ ಮಾವುತರು, ಕಾವಾಡಿಗರಿಗೆ ಅಗತ್ಯ ಸೌಲಭ್ಯ, ಧನಸಹಾಯ ನೀಡಲಾಗುವುದು' ಎಂದು ತಿಳಿಸಿದರು‌.

ಅರಣ್ಯ ಸಚಿವ ಈಶ್ವರ ಖಂಡ್ರೆ, 'ಗಜಪಯಣಕ್ಕೆ ಅರಣ್ಯ ಸಚಿವನಾಗಿ ವಿದ್ಯುಕ್ತವಾಗಿ ಚಾಲನೆ ನೀಡಲು ಸಂತಸ ವಾಗುತ್ತಿದೆ. ಆನೆಗಳ ಮೊದಲ‌ ತಂಡದಲ್ಲಿ ಅಭಿಮನ್ಯು ಸೇರಿದಂತೆ 9 ಆನೆಗಳನ್ನು ಇಲಾಖೆ ಆಯ್ಕೆ ಮಾಡಿತ್ತು. ಅದರಲ್ಲಿ ಪಾರ್ಥಸಾರಥಿಗೆ ಮದ ಬಂದ ಕಾರಣ ಕಂಜನ್ ಆನೆ ಇದೇ ಮೊದಲ ಬಾರಿ ದಸರೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಉಳಿದ ಆನೆಗಳಿಗೆ ಹಿಂದಿನ ದಸರೆಯಲ್ಲಿ ಪಾಲ್ಗೊಂಡ ಅನುಭವವಿದೆ' ಎಂದರು.

'15 ದಿನದ ನಂತರ ಗಜಪಡೆಯ ಎರಡನೇ ತಂಡವು ಮೈಸೂರಿಗೆ ಆಗಮಿಸಲಿದೆ. ಒಂದೂವರೆ ತಿಂಗಳು ಜಂಬೂಸವಾರಿ‌ ತಾಲೀಮಿನಲ್ಲಿ ಪಾಲ್ಗೊಳ್ಳಲಿವೆ. ನಿಶಾನೆ ಆನೆಯಾಗಿ ಯಾವುದನ್ನು ಇನ್ನೂ ಆಯ್ಕೆ ಮಾಡಿಲ್ಲ. ತಾಲೀಮಿನ ನಂತರ ನಿರ್ಧರಿಸಲಾಗುವುದು' ಎಂದು ತಿಳಿಸಿದರು.

'ಎಲ್ಲ ಆನೆಗಳು ಆರೋಗ್ಯವಾಗಿದ್ದು, ಪಶುವೈದ್ಯರು, ಮಾವುತರು, ಕಾವಾಡಿಗರು ಆರೈಕೆ ಮಾಡಲಿದ್ದಾರೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ದಸರೆ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿದ್ದು, ಎಲ್ಲ ಸಿದ್ಧತೆಗಳು ನಡೆದಿವೆ. ನಾಡದೇವತೆ ಚಾಮುಂಡೇಶ್ವರಿ ಆಶೀರ್ವಾದ ನಾಡಿನ ಜನರ ಮೇಲಿದೆ. ಒಳ್ಳೆಯ ಮಳೆ- ಬೆಳೆ ಆಗಲಿ ಎಂಬುದು ಪ್ರಾರ್ಥನೆಯಾಗಿದೆ' ಎಂದರು.

ಓದಿ... ಮೈಸೂರು: ದಸರೆಗೆ ಮುನ್ನುಡಿ ಬರೆದ ಗಜ‍ಪಯಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.