ADVERTISEMENT

ಮೈಸೂರು: ಮೂಲ ಆದಿವಾಸಿಗಳ ಸಮೀಕ್ಷೆಗೆ ‘ಕಾರ್ಮೋಡ’

ಲೋಕಸಭಾ ಚುನಾವಣೆಯ ಬಳಿಕ ಪುನರಾರಂಭಗೊಳ್ಳದ ಸಮೀಕ್ಷೆ!

ಎಂ.ಮಹೇಶ
Published 18 ನವೆಂಬರ್ 2024, 7:21 IST
Last Updated 18 ನವೆಂಬರ್ 2024, 7:21 IST
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಕಟ್ಟಡ
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಕಟ್ಟಡ   

ಮೈಸೂರು: ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿರುವ ನೈಜ ದುರ್ಬಲ ಬುಡಕಟ್ಟುಗಳು ಹಾಗೂ ಅರಣ್ಯಾಧಾರಿತ ಮೂಲ ಆದಿವಾಸಿಗಳ ತಳಮಟ್ಟದ ಅಧ್ಯಯನ ಸಮೀಕ್ಷೆಯ ಮೇಲೆ ಕಾರ್ಮೋಡ ಕವಿದಿದೆ.

ಇಲ್ಲಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ(ಟಿಆರ್‌ಐ)ಯಲ್ಲಿರುವ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದ ಮೂಲಕ, ರಾಜ್ಯದಲ್ಲಿರುವ ಜೇನುಕುರುಬ ಮತ್ತು ಕೊರಗ ಬುಡಕಟ್ಟುಗಳ ಜೊತೆಗೆ ಅರಣ್ಯಾಧಾರಿತ ಮೂಲ ಆದಿವಾಸಿಗಳಾದ ಇರುಳಿಗ, ಸೋಲಿಗ, ಯರವ, ಪಣಿಯನ್, ಹಸಲರು, ಗೌಡಲು, ಸಿದ್ದಿ, ಬೆಟ್ಟ ಕುರುಬ, ಕುಡಿಯ ಮತ್ತು ಮಲೆಕುಡಿಯ ಬುಡಕಟ್ಟುಗಳ ಅಧ್ಯಯನವನ್ನು ಇದೇ ವರ್ಷದ ಜನವರಿ 8ರಿಂದ ಆರಂಭಿಸಲಾಗಿತ್ತು.

ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೆಲೆಸಿರುವ ನೈಜ ದುರ್ಬಲ ಬುಡಕಟ್ಟುಗಳು ಹಾಗೂ ಅರಣ್ಯಾಧಾರಿತ ಮೂಲ ಆದಿವಾಸಿ ಬುಡಕಟ್ಟುಗಳ ಕುರಿತು ಮೂರು ತಿಂಗಳವರೆಗೆ ಹಾಡಿಗಳಿಗೆ ಭೇಟಿ ನೀಡಿ ನೈಜವಾದ ಮಾಹಿತಿ ಆಧಾರಿತ ತಳಮಟ್ಟದ ಅಧ್ಯಯನ ನಡೆಸಲಾಗಿತ್ತು. ಆದರೆ, ಲೋಕಸಭಾ ಚುನಾವಣೆಯ ನೀತಿಸಂಹಿತೆ ಕಾರಣದಿಂದ ಸಮೀಕ್ಷೆ ನಿಲ್ಲಿಸಲಾಯಿತು. ಚುನಾವಣೆ ಮುಗಿದು ಹಲವು ತಿಂಗಳುಗಳೇ ಕಳೆದರೂ ಸಮೀಕ್ಷೆ ಪುನರಾರಂಭ ಆಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆದಿವಾಸಿ ಮುಖಂಡರು ಆರೋಪಿಸುತ್ತಿದ್ದಾರೆ.

ADVERTISEMENT

ಸೌಲಭ್ಯಗಳನ್ನು ಕಲ್ಪಿಸಲು ಸಹಕಾರಿ: ರಾಜ್ಯದಲ್ಲಿರುವ ಅರಣ್ಯಾಧಾರಿತ 12 ಮೂಲ ಆದಿವಾಸಿ ಬುಡಕಟ್ಟು ಜನರು ಮೀಸಲಾತಿ ಅಥವಾ ಸರ್ಕಾರದ ಯೋಜನೆಗಳ ಬಗ್ಗೆಯಾಗಲಿ ಜಾಗೃತಿ ಇಲ್ಲ. ಹಾಡಿ, ಗದ್ದೆ, ಪೋಡು, ಕಾಲೊನಿ ಹಾಗೂ ದೊಡ್ಡಿಗಳಲ್ಲಿ ಸರ್ಕಾರದ ಸೌಲಭ್ಯಗಳಿಗಾಗಿ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಜಾತಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರಗಳನ್ನು ಇಂದಿಗೂ ಬಹಳಷ್ಟು ಮಂದಿ ಪಡೆದೇ ಇಲ್ಲ. ಇವುಗಳನ್ನು ಕೊಡಿಸಿಕೊಡುವ ನಿಟ್ಟಿನಲ್ಲಿ ಸಮೀಕ್ಷೆಯು ಮಹತ್ವದ್ದಾಗಿದೆ.

ಪರಿಶಿಷ್ಟ ಪಂಗಡದಲ್ಲಿರುವ ಮೂಲ ಆದಿವಾಸಿಗಳಾದ ಜೇನುಕುರುಬ, ಇರುಳಿಗ, ಸೋಲಿಗ, ಯರವ, ಪಣಿಯನ್, ಹಸಲರು, ಗೌಡಲು, ಸಿದ್ದಿ, ಕೊರಗ, ಬೆಟ್ಟ ಕುರುಬ, ಕುಡಿಯ, ತೋಡ, ಕಣಿಯನ್, ಕೊಕ್ಕಣಿ, ಕೋಯ, ವರ್ಲಿ ಮತ್ತು ಮಲೆಕುಡಿಯ ಬುಡಕಟ್ಟುಗಳು ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಔದ್ಯೋಗಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದಲೂ ತೀರಾ ಹಿಂದುಳಿದಿವೆ. ಇವರ ಸಂಪೂರ್ಣ ಮಾಹಿತಿ ಸಂಗ್ರಹಕ್ಕಾಗಿ ಸಮೀಕ್ಷೆಯು ಅತ್ಯಗತ್ಯ ಎನ್ನುತ್ತಾರೆ ಮುಖಂಡರು.

‘ಅನುದಾನ ಕೊರತೆಯ ಕಾರಣದಿಂದಲೂ ಸಮೀಕ್ಷೆಯು ನನೆಗುದಿಗೆ ಬಿದ್ದಿದೆ. ಸಂಸ್ಥೆಗೆ ಕಾಯಂ ನಿರ್ದೇಶಕರು ಇಲ್ಲದಿರುವುದು ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ’ ಎಂದು ಹೇಳಲಾಗುತ್ತಿದೆ.

‘ಯರವ ಸಮುದಾಯದ ಮೊದಲ ಸ್ನಾತಕೋತ್ತರ ಪದವೀಧರೆಯಾದ ನಾನೇ ಮಾಹಿತಿಗೆ ಬಹಳಷ್ಟು ಅಲೆಯಬೇಕಾಗಿದೆ. ದತ್ತಾಂಶ ಸಂಗ್ರಹಕ್ಕೆ ಸಂಸ್ಥೆ ಸಿದ್ಧವಿಲ್ಲವೇನೋ ಎನಿಸುತ್ತಿದೆ. ನಾನೂ ಸಮೀಕ್ಷೆಯಲ್ಲಿ ಮೂರು ತಿಂಗಳು ಪಾಲ್ಗೊಂಡಿದ್ದೆ. ಆದಿವಾಸಿಗಳ ಸ್ಥಿತಿಗತಿಯ ವಾಸ್ತವಾಂಶವು ಸಮಾಜ ಹಾಗೂ ಸರ್ಕಾರಕ್ಕೆ ಗೊತ್ತಾಗಬೇಕು. ಇದಕ್ಕಾಗಿ ಸಮೀಕ್ಷೆ ಬೇಕಾಗಿದೆ’ ಎನ್ನುತ್ತಾರೆ ಸರ್ವೇ ಕಾರ್ಯದಲ್ಲಿ ಪಾಲ್ಗೊಂಡಿದ್ದ ಎಚ್‌.ಡಿ.ಕೋಟೆ ತಾಲ್ಲೂಕಿನ ಆಶಾ.

ನೈಜ ಸ್ಥಿತಿಗತಿ ತಿಳಿಯುವ ಉದ್ದೇಶ ಕೇಂದ್ರ ಸರ್ಕಾರದ ಅನುದಾನ ಪಡೆದುಕೊಳ್ಳುವುದಕ್ಕೂ ಸಹಕಾರಿ ಪುನರಾಂಭಕ್ಕೆ ಆದಿವಾಸಿ ಮುಖಂಡರ ಒತ್ತಾಯ
‘ಆರು ತಿಂಗಳಲ್ಲಿ ಪೂರ್ಣಗೊಳಿಸಲು ಕ್ರಮ’
‘ಗೌಡಲು ಸೋಲಿಗ ಇರುಳಿಗ ಯರವ ಬುಡಕಟ್ಟುಗಳನ್ನು ಪಿವಿಟಿಜಿಗೆ (ನೈಜ ದುರ್ಬಲ ಬುಡಕಟ್ಟು  ಸಮುದಾಯಗಳು) ಸೇರಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರದಿಂದ ನಿರ್ದೇಶನವಿದೆ. ಅದಕ್ಕಾಗಿ ಉಪ ಚುನಾವಣೆ ಫಲಿತಾಂಶದ ಬಳಿಕ ಅಧ್ಯಯನ ಸಮೀಕ್ಷೆ ಪುನರಾರಂಭಿಸಿ 6 ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಪ್ರಭಾರ ನಿರ್ದೇಶಕ ರಾಜಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಬುಡಕಟ್ಟು ವಿದ್ಯಾವಂತರನ್ನೇ ಬಳಸಿಕೊಂಡು...
ನೈಜ ಸ್ಥಿತಿಗತಿ ತಿಳಿಯಲು ಕೊರಗ ಮತ್ತು ಜೇನು ಕುರುಬ ನೈಜ ದುರ್ಬಲ ಬುಡಕಟ್ಟುಗಳಿಗೆ ಸಂಬಂಧಿಸಿದಂತೆ 49 ಪ್ರಶ್ನೆಗಳೊಂದಿಗೆ ಹಾಗೂ ಅರಣ್ಯಾಧಾರಿತ ಮೂಲ ಆದಿವಾಸಿಗಳಿಗೆ ಸಂಬಂಧಿಸಿದ 57 ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುವ ಮೂಲಕ ಮಾಹಿತಿ ಸಂಗ್ರಹಿಸುವಿಕೆಯನ್ನು ಸಮೀಕ್ಷೆಯಲ್ಲಿ ಮಾಡಲಾಗುತ್ತಿತ್ತು. ವಿಶೇಷವಾಗಿ ಅದೇ ಬುಡಕಟ್ಟು ವಿದ್ಯಾವಂತರನ್ನು ಬಳಸಿಕೊಂಡು ಸಮೀಕ್ಷೆ ನಡೆಸಲಾಗುತ್ತಿತ್ತು. ಅವರಿಗೆ ಇಂತಿಷ್ಟು ಗೌರವಧನವೂ ದೊರೆಯುತ್ತಿತ್ತು.
ಸಮೀಕ್ಷೆಯ ಮಹತ್ವವೇನು?
ಕೇಂದ್ರ ಸರ್ಕಾರವು ಬುಡಕಟ್ಟು ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾಅಭಿಯಾನ (ಪಿಎಂ–ಜನ್‌ಮನ್) ಕಾರ್ಯಕ್ರಮ ಜಾರಿಗೊಳಿಸಿದೆ. ಮುಂದಿನ ಮೂರು ವರ್ಷಗಳಲ್ಲಿ 18 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿರುವ ಪಿವಿಟಿಜಿ (ನೈಜ ದುರ್ಬಲ ಬುಡಕಟ್ಟು ಸಮುದಾಯಗಳು) ಸಮುದಾಯಗಳ ಜೀವನ ಸುಧಾರಣೆಗಾಗಿ 11 ನಿರ್ಣಾಯಕ ಮೂಲ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ₹24 ಸಾವಿರ ಕೋಟಿ ಅನುದಾನ ಮೀಸಲಿರಿಸಿದೆ. ಇದರಲ್ಲಿನ ಅನುದಾನ ಪಡೆಯುವ ಭಾಗವಾಗಿ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಸಮೀಕ್ಷೆ ಆರಂಭವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.