ADVERTISEMENT

ಮೈಸೂರು ಅರಮನೆ ಪ್ರವೇಶಕ್ಕೂ ಜಿಎಸ್‌ಟಿ: ಶುಲ್ಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 13:07 IST
Last Updated 24 ಅಕ್ಟೋಬರ್ 2024, 13:07 IST
<div class="paragraphs"><p>ಮೈಸೂರು ಅರಮನೆ</p></div>

ಮೈಸೂರು ಅರಮನೆ

   

ಪ್ರಜಾವಾಣಿ ಚಿತ್ರ: ರಂಜು ಪಿ

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಟಿಕೆಟ್‌ ದರದ ಮೇಲೆ ಜಿಎಸ್‌ಟಿ (ಸರಕು ಸೇವಾ ತೆರಿಗೆ) ಸೇರಿಸಿ ಹೆಚ್ಚಿಸಲಾಗಿದೆ.

ADVERTISEMENT

ಈಚೆಗೆ ನಡೆದ ಅರಮನೆ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ವಯಸ್ಕರಿಗೆ ₹ 100ರಿಂದ ₹120 ಹಾಗೂ 10ರಿಂದ 18 ವರ್ಷದೊಳಗಿನ ಮಕ್ಕಳಿಗೆ ₹ 50ರಿಂದ ₹ 70ಕ್ಕೆ (10 ವರ್ಷದೊಳಗಿನ ಮಕ್ಕಳಿಗೆ ಉಚಿತ) ಹೆಚ್ಚಿಸಲಾಗಿದೆ. ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ ಅಥವಾ ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರ ₹ 50 ನಿಗದಿಪಡಿಸಲಾಗಿದೆ. ವಿದೇಶಿ ಪ್ರವಾಸಿಗರಿಗೆ ₹1,000 ಶುಲ್ಕ ವಿಧಿಸಲು ಅನುಮೋದನೆ ದೊರೆತಿದೆ’ ಎಂದು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ತಿಳಿಸಿದರು.

‘ವಿಶ್ವವಿಖ್ಯಾತ ಮೈಸೂರು ಅರಮನೆಗೆ ದಿನನಿತ್ಯ ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅವರು ಈಗ, ಪ್ರವೇಶ ಶುಲ್ಕವನ್ನಷ್ಟೆ ಪಾವತಿಸಿದರೆ ಸಾಕು. ಅರಮನೆಯ ಒಳಾವರಣದಲ್ಲಿ ಚಪ್ಪಲಿ ಸ್ಟಾಂಡ್, ಲಗ್ಗೇಜ್ ಕೊಠಡಿ ಮತ್ತು ಶೌಚಾಲಯ ಬಳಕೆ ಉಚಿತವಾಗಿರಲಿದೆ. ಹಿಂದೆ ಇದಕ್ಕೆ ಶುಲ್ಕ ಪಾವತಿಸಬೇಕಾಗಿತ್ತು. ವಿದೇಶಿ ಪ್ರವಾಸಿಗರಿಗೆ ಹಿಂದೆಯಿಂದಲೂ ₹100 ಇತ್ತು. ಇದನ್ನು ಈಗ ಜಾಸ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರವೇಶ ಶುಲ್ಕಕ್ಕೆ ಶೇ 18ರಷ್ಟು ಜಿಎಸ್‌ಟಿ ಸೇರಿಸಲಾಗಿದೆ. ಈವರೆಗೆ ನಾವೇ ಜಿಎಸ್‌ಟಿ ಕಟ್ಟುತ್ತಿದ್ದೆವು. ಈಗ, ಶುಲ್ಕದಲ್ಲೇ ಪಡೆಯಲಾಗುತ್ತಿದೆ. ಚಪ್ಪಲಿ ಸ್ಟಾಂಡ್, ಲಗ್ಗೇಜ್ ಕೊಠಡಿ ಮತ್ತು ಶೌಚಾಲಯ ಬಳಕೆಗೆ ಹಣ ಪಾವತಿಸಬೇಕಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.