ಮೈಸೂರು: ‘ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸದೇ ಹೋದರೆ ಬಳ್ಳಾರಿಗೆ ಕಳುಹಿಸುತ್ತೇನೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಬುಧವಾರ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‘ಪ್ರತಿಷ್ಠಿತ ಕಾಲೇಜು ಎನಿಸಿರುವ ಮಹಾರಾಣಿ ಕಾಲೇಜಿನಲ್ಲಿ ಇಷ್ಟೊಂದು ಸಮಸ್ಯೆಗಳಿದ್ದರೂ ಯಾವುದನ್ನೂ ಬಗೆಹರಿಸಲು ಯತ್ನಿಸಿಲ್ಲ. ನಿಮ್ಮನ್ನು ಬಳ್ಳಾರಿಗೆ ಕಳುಹಿಸಿದರೆ ಬುದ್ಧಿ ಬರುತ್ತದೆ’ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಉದಯಶಂಕರ್ ಹಾಗೂ ಪ್ರಭಾರ ಪ್ರಾಂಶುಪಾಲ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಕಾಲೇಜಿನಲ್ಲಿ ಶೌಚಾಲಯದ ಸಮಸ್ಯೆ ಬಗ್ಗೆ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು. ಕೊಠಡಿ ಸಮಸ್ಯೆ ಹೆಚ್ಚಿದೆ. ಕೂರುವುದಕ್ಕೂ ಸ್ಥಳ ಸಾಕಾಗುತ್ತಿಲ್ಲ. ಪ್ರಯೋಗಾಲಯದಲ್ಲಿ ಸ್ಥಳಾವಕಾಶ ಇಲ್ಲ. ನೀರಿನ ಸಮಸ್ಯೆ ತೀವ್ರವಾಗಿದೆ. ಮೂಲಸೌಕರ್ಯದ ಕೊರತೆ ಇದೆ ಎಂದು ಸಮಸ್ಯೆಗಳನ್ನು ವಿವರಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಕೆಲ ಪ್ರಾಧ್ಯಾಪಕರು ಈ ಬಾರಿ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹೀಗಾಗಿ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.
ಕಾಲೇಜಿನಲ್ಲಿರುವ ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಪ್ರಯೋಗಾಲಯಗಳು ಇರಬೇಕು. ಕನಿಷ್ಠ ಎಂದರೂ 65 ಬೇಕು. ಈಗ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 35 ಪ್ರಯೋಗಾಲಯಗಳು ಮಾತ್ರ ಇವೆ. ಹೀಗಾಗಿ ಸಮಸ್ಯೆಯಾಗಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ, ‘ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡರೆ ಅವುಗಳನ್ನು ಪರಿಹರಿಸುವ ಮಾರ್ಗ ಹುಡುಕಬೇಕೇ ಹೊರತು ವಿದ್ಯಾರ್ಥಿನಿಯರನ್ನೇ ಬೆದರಿಸಬಾರದು. ಸಮಸ್ಯೆ ನಿವಾರಣೆಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಬೇಕು. ಅದನ್ನು ಬಿಟ್ಟು ನಿರ್ಲಕ್ಷ್ಯ ವಹಿಸಿರುವುದು ತಪ್ಪು’ ಎಂದು ಕಿಡಿಕಾರಿದರು.
ಶೀಘ್ರದಲ್ಲೇ ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಕಾಲೇಜಿನ ಇತಿಮಿತಿಯಲ್ಲಿ ಆಗದಿದ್ದರೆ, ಹೊರಗಿನ ಸಂಸ್ಥೆಗಳ ಸಹಾಯ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಎಲ್.ನಾಗೇಂದ್ರ, ಜಿ.ಪಂ.ಸದಸ್ಯ ಬೀರಿಹುಂಡಿ ಬಸವಣ್ಣ, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಮುಡಾ ಅಧೀಕ್ಷಕ ಎಂಜಿನಿಯರ್ ಸುರೇಶ್ ಬಾಬು ಹಾಜರಿದ್ದರು.
‘ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಸಮಸ್ಯೆಗಳ ಸರಣಿ; ಶೌಚಾಲಯಕ್ಕೂ ಸರತಿ’ ವಿಶೇಷ ವರದಿ ‘ಪ್ರಜಾವಾಣಿ’ಯಲ್ಲಿ ಮಂಗಳವಾರ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.