ADVERTISEMENT

ಗುಬ್ಬಿ ಕಂಪನಿ ರಂಗಶಿಕ್ಷಣದ ವಿಶ್ವವಿದ್ಯಾಲಯ: ಮಂಡ್ಯ ರಮೇಶ್‌

ರಂಗಕರ್ಮಿ ಮಂಡ್ಯ ರಮೇಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 3:44 IST
Last Updated 31 ಆಗಸ್ಟ್ 2021, 3:44 IST
ಮೈಸೂರಿನ ಮಾನಸಗಂಗೋತ್ರಿಯ ಲಲಿತಾಕಲಾ ಕಾಲೇಜಿನಲ್ಲಿ ಸೋಮವಾರ ನಡೆದ ವೆಬಿನಾರ್‌ನಲ್ಲಿ ರಂಗಕರ್ಮಿ ಮಂಡ್ಯ ರಮೇಶ್‌ ಮಾತನಾಡಿದರು
ಮೈಸೂರಿನ ಮಾನಸಗಂಗೋತ್ರಿಯ ಲಲಿತಾಕಲಾ ಕಾಲೇಜಿನಲ್ಲಿ ಸೋಮವಾರ ನಡೆದ ವೆಬಿನಾರ್‌ನಲ್ಲಿ ರಂಗಕರ್ಮಿ ಮಂಡ್ಯ ರಮೇಶ್‌ ಮಾತನಾಡಿದರು   

ಮೈಸೂರು: ‘ರಂಗ ಶಿಕ್ಷಣದ ವಿಶ್ವವಿದ್ಯಾಲಯದಂತಿದ್ದಗುಬ್ಬಿ ನಾಟಕ ಕಂಪನಿಯು ಸಾವಿರಾರು ಕಲಾವಿದರು ಮತ್ತು ತಂತ್ರಜ್ಞರನ್ನು ‍ಪೋಷಿಸಿದೆ. ನಾಟಕಗಳ ಮೂಲಕ ಕನ್ನಡಿಗರಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಬಿತ್ತಿದೆ’ ಎಂದು ರಂಗಕರ್ಮಿ ಮಂಡ್ಯ ರಮೇಶ್‌ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜು ಸೋಮವಾರ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ‘ಕನ್ನಡ ರಂಗಭೂಮಿಯಲ್ಲಿ ಗುಬ್ಬಿ ನಾಟಕ ಕಂಪನಿಯ ಮಹತ್ವ’ ಕುರಿತು ಅವರು ಮಾತನಾಡಿದರು.

‘ಬಡ ಕುಟುಂಬದಲ್ಲಿ ಜನಿಸಿದ ಗುಬ್ಬಿ ವೀರಣ್ಣ ಬಾಲನಟನಾಗಿ ಗುಬ್ಬಿ ಕಂಪನಿ ಎಂದು ಕರೆಯಲ್ಪಡುವ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಸೇರಿದರು. ಅಭಿನಯಿಸುತ್ತಲೇ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು’ ಎಂದರು.

ADVERTISEMENT

‘ಗುಬ್ಬಿ ಕಂಪನಿ ಹಾಗೂ ವೀರಣ್ಣ ಅವರನ್ನು ಹೊರತಾಗಿಸಿ ಕನ್ನಡ ವೃತ್ತಿ ರಂಗಭೂಮಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅವರು ಪ್ರಯೋಗಿಸಿದ ಎಲ್ಲ ನಾಟಕಗಳು ವೈಭವಯುತವಾಗಿದ್ದವು, ಆಗಿನ ಕಾಲದಲ್ಲಿ ₹ 60 ಸಾವಿರ ಖರ್ಚು ಮಾಡಿ ಕುರುಕ್ಷೇತ್ರ ನಾಟಕವನ್ನು ವೇದಿ
ಕೆಗೆ ತಂದರು. ಕುದುರೆ, ಆನೆಗಳು ವೇದಿಕೆ
ಗೇರಿದ್ದವು. ಮೈಸೂರಿನ ಮಹಾರಾಜರೇ ಗುಬ್ಬಿ ಕಂಪನಿಯ ನಾಟಕಗಳಿಗೆ ವಿಸ್ಮಿತರಾಗಿದ್ದರು’ ಎಂದು ಸ್ಮರಿಸಿದರು.

‘ಬಾಲ ಕಲಾವಿದರಿಗಾಗಿಯೇ ‘ಬಾಲಕ ವಿವರ್ಧಿನಿ’ ಎಂಬ ಸಂಘ ಸ್ಥಾಪಿಸಿ ಇಂಗ್ಲಿಷ್‌, ಸಂಗೀತ, ನೃತ್ಯ ಅಭಿನಯಗಳ ರಂಗ ತರಗತಿಗ ಳನ್ನು ನಡೆಸಿದರು. ಸುಬ್ಬಯ್ಯನಾಯ್ಡು, ಎಂ.ವಿ.ರಾಜಮ್ಮ, ಪುಟ್ಟಸ್ವಾಮಯ್ಯ, ರಾಜ್‌ಕುಮಾರ್‌, ಬಿ.ವಿ.ಕಾರಂತ ಮೊದಲಾದವರು ಗುಬ್ಬಿ ಕಂಪನಿಯಲ್ಲಿಯೇ ರೂಪುಗೊಂಡವರು’ ಎಂದರು.

‘ನಾಡಿನ ಉದ್ದಗಲಕ್ಕೂ ಸಂಚರಿಸಿ ಕುಮಾರರಾಮ, ಸದಾರಮೆ, ಕುರುಕ್ಷೇತ್ರ, ದಶಾವತಾರ, ಲವ ಕುಶ ಸೇರಿ
ದಂತೆ ನೂರಾರು ನಾಟಕಗಳನ್ನು ಪ್ರಯೋಗಿಸಿದ ಕಂಪನಿಯು, ಪ್ರಯಾಣಕ್ಕಾಗಿ ಇಡೀ ರೈಲನ್ನೇ ಕಾಯ್ದಿರಿಸುತ್ತಿತ್ತು’ ಎಂದು ಹೇಳಿದರು.

‘ಕನ್ನಡ ರಂಗಭೂಮಿಯಲ್ಲಿ ಬೀದಿ ನಾಟಕಗಳು’ ಕುರಿತು ರಂಗಕರ್ಮಿ ಎಚ್‌.ಜನಾರ್ಧನ್‌ (ಜನ್ನಿ) ಮಾತನಾಡಿದರು. ಪ್ರಾಂಶುಪಾಲ ಡಾ.ಸಿ.ಎ.ಶ್ರೀಧರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.