ADVERTISEMENT

ಮೈಸೂರು: ಸಿದ್ಧತೆ, ಯಶಸ್ಸಿಗೆ ಮಾರ್ಗದರ್ಶನದ ಬೆಳಕು

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಹಾಗೂ ‘ಇನ್‌ಸೈಟ್ಸ್‌ ಐಎಎಸ್‌ ಅಕಾಡೆಮಿ’ಯ ಸಹಯೋಗದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 15:42 IST
Last Updated 19 ಜುಲೈ 2023, 15:42 IST
‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಹಾಗೂ ಇನ್‌ಸೈಟ್ಸ್‌ ಐಎಎಸ್ ಸಂಸ್ಥೆಯ ಸಹಯೋಗದಲ್ಲಿ ಮೈಸೂರಿನ ಸೆನೆಟ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಗೈಡಿಂಗ್ ಫೋರ್ಸ್’ ಉ‍ಪನ್ಯಾಸ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸಿದರು. – ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಹಾಗೂ ಇನ್‌ಸೈಟ್ಸ್‌ ಐಎಎಸ್ ಸಂಸ್ಥೆಯ ಸಹಯೋಗದಲ್ಲಿ ಮೈಸೂರಿನ ಸೆನೆಟ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಗೈಡಿಂಗ್ ಫೋರ್ಸ್’ ಉ‍ಪನ್ಯಾಸ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸಿದರು. – ಪ್ರಜಾವಾಣಿ ಚಿತ್ರ   

ಮೈಸೂರು: ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗಬೇಕು ಎಂದು ಬಯಸುವವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಪರೀಕ್ಷೆಗೆ ಹೇಗೆ ಸಿದ್ಧವಾಗಬೇಕು, ಅದಕ್ಕೆ ಬೇಕಾಗುವ ತಯಾರಿ ಹೇಗಿರಬೇಕು, ಯಶಸ್ಸು ಗಳಿಸಲು ಅನುಸರಿಸಬೇಕಾದ ಮಾರ್ಗಗಳೇನು ಎಂಬ ಬಗ್ಗೆ ಅಲ್ಲಿ ವಿಸ್ತೃತ ಪ್ರಶ್ನೋತ್ತರ ನಡೆಯಿತು. ನೂರಾರು ಯುವಜನರೆಡೆಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ–ಮಾರ್ಗದರ್ಶನದ ಮಹಾಪೂರವನ್ನೇ ಹರಿಸಿದರು.

ಅದು, ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಹಾಗೂ ‘ಇನ್‌ಸೈಟ್ಸ್‌ ಐಎಎಸ್‌ ಅಕಾಡೆಮಿ’ಯ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಗೈಡಿಂಗ್‌ ಫೋರ್ಸ್‌’ ಕಾರ್ಯಕ್ರಮ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್‌ಗಳನ್ನು ಗಳಿಸುವುದು ಹೇಗೆ ಎಂಬ ನಿಟ್ಟಿನಲ್ಲಿ ಹಲವು ಉತ್ತಮ ‘ಒಳನೋಟ’ಗಳನ್ನು ಯುವಜನರಿಗೆ ನೀಡಿ ಗಮನ ಸೆಳೆಯಿತು.

ವಿವಿಧೆಡೆಯಿಂದ ಬಂದಿದ್ದ ನೂರಾರು ವಿದ್ಯಾರ್ಥಿಗಳು ಗೊಂದಲಗಳನ್ನು ನಿವಾರಿಸಿಕೊಂಡರು. ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕೆಂಬ ಕನಸಿನೊಂದಿಗೆ, ತಯಾರಿಗೆ ಸಜ್ಜಾಗುವ ನಿರ್ಧಾರದೊಂದಿಗೆ ಮನೆಗಳತ್ತ ಹೆಜ್ಜೆ ಹಾಕಿದರು.

ADVERTISEMENT

ಸಿದ್ಧತೆ ಅತ್ಯವಶ್ಯ: ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ‌ಮಾತನಾಡಿ, ‘ಎಲ್ಲರೊಳಗೂ ಒಂದು ಶಕ್ತಿ ಇದೆ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸೂಕ್ತ ಮಾರ್ಗದರ್ಶನ ಬೇಕಾಗುತ್ತದೆ. ಇದಕ್ಕೆ ಇಂತಹ ಕಾರ್ಯಕ್ರಮ ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘ಯುಪಿಎಸ್‌ಸಿ ಪರೀಕ್ಷೆಯು ವರ್ಷದಿಂದ ವರ್ಷಕ್ಕೆ ಕಠಿಣವಾಗುತ್ತಿದೆ. ಆದರೆ, ಈ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ದೃಢ ನಿಶ್ಚಯ ಮಾಡಿದರೆ ಅದಕ್ಕೆ ತಕ್ಕಂತೆ ಓದಿಕೊಂಡರೆ, ಜ್ಞಾನದ ಪರಿಧಿ ವಿಸ್ತರಿಸಿಕೊಂಡರೆ ಯಶಸ್ಸು ಗಳಿಸಬಹುದು. ಎಲ್ಲದಕ್ಕೂ ಮುಖ್ಯವಾಗಿ ಸಿದ್ಧತೆ ಅವಶ್ಯ. ಈಗ ಬಹಳಷ್ಟು ಕೋಚಿಂಗ್ ಸಂಸ್ಥೆಗಳಿವೆ. ಇಂಟರ್ನೆಟ್ ಕಾರಣದಿಂದಾಗಿ ಬಹಳಷ್ಟು ಸಂಪನ್ಮೂಲವೂ ಲಭ್ಯವಿದೆ. ಅದನ್ನು ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಮೊದಲಿಗೆ, ಮುಂದೆ ಬರಬೇಕು ಎಂಬ ಆಕಾಂಕ್ಷೆ ನಿಮ್ಮಲ್ಲಿರಬೇಕು. ಏನಾಗಬೇಕೆಂಬ ಸ್ಪಷ್ಟತೆ ಇರಬೇಕು. ಸಾಮಾನ್ಯ ಗುರಿ ಹೊಂದಬೇಕು. ಅದಕ್ಕೆ ತಕ್ಕಂತೆ ಯೋಜನೆ ಮಾಡಿಕೊಳ್ಳಬೇಕು. ಯಾರದೋ ಒತ್ತಡ ಅಥವಾ ಸಿನಿಮಾದ ಪ್ರಭಾವದ ಕಾರಣಕ್ಕೆ ಐಎಎಸ್ ಅಥವಾ ಐಪಿಎಸ್‌ ಅಧಿಕಾರಿ ಆಗಬೇಕು ಎಂದುಕೊಳ್ಳುವುದರಿಂದ ಪ್ರಯೋಜನವಾಗದು. ಅದು‌ ನಿಮ್ಮೊಳಗಿಂದಲೇ ಬರಬೇಕು’ ಎಂದರು.

ಸಕಾರಾತ್ಮಕ ಬದಲಾವಣೆ ತರಲು: ‘ಐಎಎಸ್ ಎನ್ನುವುದು ಸಮಾಜ ಸೇವೆಗೆ ದೊಡ್ಡ ವೇದಿಕೆ ಹಾಗೂ ಬದಲಾವಣೆ ತರಲು ಹೆಚ್ಚಿನ ಅಧಿಕಾರ ಕೊಡುವ ಹುದ್ದೆ. ಉನ್ನತ ಹುದ್ದೆಗೆ ತಕ್ಕಂತೆ ಜವಾಬ್ದಾರಿಯನ್ನೂ ಸರ್ಕಾರ ಕೊಡುತ್ತದೆ. ಜನಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಮಾಡಲು ಈ ಹುದ್ದೆ ಅವಕಾಶ ಕೊಡುತ್ತದೆ’ ಎಂದು ಹೇಳಿದರು.

‘ಮೂಲ ಯಾವುದೇ ಇರಲಿ, ಒಳ್ಳೆಯ ಅಂಶಗಳನ್ನು ತೆಗೆದುಕೊಳ್ಳಬೇಕು. ವೈಯಕ್ತಿಕ ಸಾಮರ್ಥ್ಯ ಗುರುತಿಸಿಕೊಳ್ಳಬೇಕು. ಓದಿದ್ದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾವು ಚಾಮುಂಡಿಬೆಟ್ಟ ಹತ್ತಿದ ಉದಾಹರಣೆ ಮೂಲಕ ಪ್ರಯತ್ನದ ವ್ಯಾಖ್ಯಾನ ನೀಡಿದ ಅವರು, ‘ಮೊದಲು ಕಷ್ಟ ಎನಿಸಿತು. ಅನುಭವವಾದಂತೆ ಸುಲಭ ಎನಿಸಿತು’ ಎಂದು ತಿಳಿಸಿ, ಪ್ರಯತ್ನದಿಂದಾಗುವ ಪ್ರಯೋಜನವನ್ನು ಕಟ್ಟಿಕೊಟ್ಟರು.

‘ಯುಪಿಎಸ್‌ಸಿ ಜಾಲತಾಣವನ್ನು ಗಮನಿಸುತ್ತಿರಿ. ಅಲ್ಲಿರುವ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಂಡು ಅದಕ್ಕೆ ತಕ್ಕಂತೆಯೂ ತಯಾರಿ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.

ಕನ್ನಡದಲ್ಲೂ ಉತ್ತರ:‘ಇನ್‌ಸೈಟ್‌ ಐಎಎಸ್’ ಉಪನ್ಯಾಸಕ ಕೆ.ನಿಖಿಲ್ ಗೌಡ ಮಾತನಾಡಿ, ‘ಯುಪಿಎಸ್‌ಸಿಯು ಪುಸ್ತಕದ ಜ್ಞಾನವನ್ನಷ್ಟೆ ಬಯಸುವುದಿಲ್ಲ. ಪರೀಕ್ಷೆ ಎದುರಿಸುವ ಕೌಶಲಗಳನ್ನು ಕಲಿತುಕೊಳ್ಳಬೇಕು. ವ್ಯಕ್ತಿತ್ವ ವಿಕಸನವೂ ಅತ್ಯಗತ್ಯ. ಇದಕ್ಕಾಗಿ ನಾವು ಕೋಚಿಂಗ್‌ ವೇಳೆ, ಪ್ರಚಲಿತ ವಿದ್ಯಮಾನಗಳನ್ನು ಕೇಳುತ್ತೇವೆ, ಕ್ವಿಜ್‌ ನಡೆಸುತ್ತೇವೆ. ಈ ಮೂಲಕ ಸಜ್ಜುಗೊಳಿಸುತ್ತೇವೆ’ ಎಂದು ತಿಳಿಸಿದರು. ತಾವು ಎದುರಿಸಿದ ಸಂದರ್ಶನದ ಅನುಭವ ಹಂಚಿಕೊಂಡರು.

‘ಉತ್ತರವನ್ನು ಕನ್ನಡದಲ್ಲಿ ಬೇಕಾದರೂ ಬರೆಯಬಹುದು. ಆದರೆ, ಇಂಗ್ಲಿಷ್‌ ಅಥವಾ ಹಿಂದಿಯಲ್ಲಿರುವ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರಬೇಕು’ ಎಂದು ತಿಳಿಸಿದರು.

ವಿದ್ಯಾರ್ಥಿಗಳಾದ ನಂದಶೇಖರ್, ಆಕಾಶ್ ಎಂ., ಶಿವರಾಜ್, ಶಶಿರೇಖಾ, ಆದಿಶೇಷ್, ಚೈತನ್ಯ, ನಿಖಿಲ್, ನವೀನ್, ಹುಸೇನ್ ಭಾಷಾ, ಶಾಂತಕುಮಾರ್ ಪ್ರಶ್ನೆ ಸಂವಾದದಲ್ಲಿ ಪಾಲ್ಗೊಂಡರು.

‘ಪ್ರಸರಣ ವಿಭಾಗದ ವ್ಯವಸ್ಥಾಪಕ ಎಸ್.ಪ್ರಕಾಶ್, ಡಿಜಿಎಂ ಜಗನ್ನಾಥ್ ಜೋಯಿಸ್, ಇನ್‌ಸೈಟ್ಸ್‌ ಐಎಎಸ್ ಸಂಸ್ಥೆಯ ದೀಪಕ್‌ಗೌಡ, ಸಂಸ್ಥಾಪಕ ವಿನಯ್‌ಕುಮಾರ್‌ ಜಿ.ಬಿ., ‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಹಾಗೂ ‘ಡೆಕ್ಕನ್ ಹೆರಾಲ್ಡ್‌’ ಮೈಸೂರು ಬ್ಯೂರೊ ಮುಖ್ಯಸ್ಥ ಟಿ.ಆರ್.ಸತೀಶ್‌ ಕುಮಾರ್‌ ಇದ್ದಾರೆ (ಎಡಚಿತ್ರ). ಕಾರ್ಯಕ್ರಮದಲ್ಲಿ ನೂರಾರು ಯುವಜನರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರಗಳು
ಕಾರ್ಯಕ್ರಮದಲ್ಲಿ ನೂರಾರು ಯುವಜನರು ಪಾಲ್ಗೊಂಡಿದ್ದರು
ಡಾ.ಕೆ.ವಿ.ರಾಜೇಂದ್ರ
ಕೆ.ನಿಖಿಲ್‌ ಗೌಡ
ಸೀಮಾ ಲಾಟ್ಕರ್‌
 ವಿನಯ್‌ ಕುಮಾರ್

ಸೆನೆಟ್ ಭವನದಲ್ಲಿ ಕಾರ್ಯಕ್ರಮ ನೂರಾರು ವಿದ್ಯಾರ್ಥಿಗಳು ಭಾಗಿ ಅನುಭವ ಹಂಚಿಕೊಂಡ ಸಂಪನ್ಮೂಲ ವ್ಯಕ್ತಿಗಳು

ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಬರುವ ರಾಜಕೀಯ‌ ಬೆಳವಣಿಗೆ ವಿದೇಶಗಳಲ್ಲಿ ವಿದ್ಯಮಾನಗಳಿಗೆ ಸಂಬಂಧಿಸಿದ ಸುದ್ದಿಗಳನ್ನೂ ಓದಬೇಕು. ಪ್ರಚಲಿತ ವಿದ್ಯಮಾನಗಳನ್ನು ಅರಿಯಬೇಕು.
ಡಾ.ಕೆ.ವಿ.ರಾಜೇಂದ್ರ ಜಿಲ್ಲಾಧಿಕಾರಿ

‘ಪ್ರಜಾವಾಣಿ’ ಓದಿನ ಮಹತ್ವ...

ದಿನಪತ್ರಿಕೆಯ ಮಹತ್ವವನ್ನು ತಿಳಿಸಿದ ಜಿಲ್ಲಾಧಿಕಾರಿ ರಾಜೇಂದ್ರ ‘ನಿತ್ಯವೂ ಪತ್ರಿಕೆಯನ್ನು ಮೊದಲು ಓದಬೇಕೆಂಬ ಪೈಪೋಟಿ ಅಕ್ಕ ಹಾಗೂ ನನ್ನ ನಡುವೆ ಇರುತ್ತಿತ್ತು. ಮೊದಲಿಂದ ಕೊನೆಯವರೆಗೂ ಓದುತ್ತಿದ್ದೆವು. ಈ ನಿಟ್ಟಿನಲ್ಲಿ ‘ಪ್ರಜಾವಾಣಿ’ ನನಗೆ ಬಹಳಷ್ಟು ನೆರವಾಗಿವೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬೇಕು ಎಂದು ಬಯಸುವವರು ಈ ಪತ್ರಿಕೆಗಳನ್ನು ನಿತ್ಯವೂ ಓದಬೇಕು. ಪ್ರಚಲಿತ ವಿದ್ಯಮಾನಗಳನ್ನು ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ನೋಡುತ್ತಾ ಹೋಗಬೇಕು’ ಎಂದು ಸಲಹೆ ನೀಡಿದರು. ‘ಚಿಕ್ಕವನಿದ್ದಾಗಿನಿಂದಲೂ ‘ಪ್ರಜಾವಾಣಿ’ ಓದುತ್ತಿದ್ದೆ. ಈಗಲೂ ನಿತ್ಯವೂ ಓದದಿದ್ದರೆ ಸಮಾಧಾನ ಆಗುವುದಿಲ್ಲ. ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ದಿನಪತ್ರಿಕೆಗಳನ್ನು ಓದಿದರೆ ಸಾಕಷ್ಟು ಜ್ಞಾನ ಸಿಗುತ್ತದೆ. ದಿನಪತ್ರಿಕೆಗಳು ಜಗತ್ತಿಗೆ ಇರುವ ಬಾಗಿಲುಗಳು. ಮುದ್ರಣ ಮಾಧ್ಯಮ ಈಗಲೂ ವಿಶ್ವಾಸ ಉಳಿಸಿಕೊಂಡಿವೆ. ಅದರಲ್ಲೂ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಓದು ಬಹಳ ಮಹತ್ವದ್ದು. ನಿತ್ಯವೂ ಓದುತ್ತಾ ಹೋದರೆ ಪ್ರಶ್ನೆಗಳಿಗೆ ಉತ್ತರ ಬರೆಯುವುದು ಸುಲಭವಾಗುತ್ತದೆ. ಈ ವಿಷಯವೇ ಪ್ರಶ್ನೆಯಾಗಿ ಬರಬಹುದು ಎಂದು ಭಾವಿಸಿ ಓದಿಕೊಳ್ಳಬೇಕು. ಪ್ರಶ್ನೆ ಹಾಕಿಕೊಂಡು ಉತ್ತರವನ್ನೂ ಕಂಡುಕೊಂಡರೆ ನೀವು ಸಿದ್ಧತೆಯಲ್ಲಿ ಸರಿ ದಾರಿಯಲ್ಲಿದ್ದಿರೆಂದೇ ಅರ್ಥ’ ಎಂದು ತಿಳಿಸಿದರು. ‘ಯುಪಿಎಸ್‌ಸಿ ಪರೀಕ್ಷೆಗೆ ಪದವಿ ಹಂತದಿಂದಲೇ ತಯಾರಿ ಆರಂಭಿಸಬೇಕು. ಒಳ್ಳೆಯ ಸ್ನೇಹಿತರೊಂದಿಗೆ ಕಂಬೈನ್ಡ್ ಸ್ಟಡಿ ಮಾಡಬೇಕು. ಪರೀಕ್ಷೆ ಇವತ್ತೇ ಇದೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಯಶಸ್ಸು ಗಳಿಸಬಹುದು’ ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದರು.

ಕೀಳರಿಮೆ ಬಿಡಿ ಜ್ಞಾನದ ಹಸಿವಿರಲಿ...

‘ಇನ್‌ಸೈಟ್ಸ್‌ ಐಎಎಸ್’ ಸಂಸ್ಥಾಪಕ ಹಾಗೂ ನಿರ್ದೇಶಕ ವಿನಯ್ ಕುಮಾರ್ ಜಿ.ಬಿ. ಮಾತನಾಡಿ ‘ಪಿಡಿಒ ಆಗಿದ್ದ ನಾನು ಕೆ‍ಪಿಎಸ್‌ಸಿಯಲ್ಲೂ ಪಾಸ್ ಮಾಡಿದ್ದೆ. ಆದರೆ ನಾನು ಯುಪಿಎಸ್‌ಸಿ ಮಾಡದಿದ್ದರೇನಂತೆ ಐಎಎಸ್ ಅಧಿಕಾರಿಗಳನ್ನು ತಯಾರಿಸಬೇಕೆಂದು ಇನ್‌ಸೈಟ್ಸ್‌ ಐಎಎಸ್ ಸಂಸ್ಥೆ ಮಾಡಿದೆ. ಮೊದಲನೇ ವರ್ಷವೇ ಸಂಸ್ಥೆ ಕಂಪನವನ್ನು ಸೃಷ್ಟಿಸಿತು. 40ರಿಂದ ಶುರುವಾಗಿ ಈಗ ಆರು ಸಾವಿರ ಮಂದಿ ಕೋಚಿಂಗ್‌ ಪಡೆಯುತ್ತಿದ್ದಾರೆ. ಆಫ್‌ಲೈನ್‌ನಲ್ಲಿ 7 ಸಾವಿರದಿಂದ 8 ಸಾವಿರ ಅಭ್ಯರ್ಥಿಗಳು ಕಲಿಯುತ್ತಿದ್ದಾರೆ’ ಎಂದು ತಿಳಿಸಿದರು. ‘ನಾವು ತರಗತಿ ಕೊಠಡಿಯಿಂದಾಚೆಗೆ ಪಡೆಯುವ ಜ್ಞಾನ ಬಹಳ ನೆರವಾಗುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಂದರ್ಶನದಲ್ಲಿ ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಇರುತ್ತವೆ’ ಎಂದರು. ‘ಕಂಫರ್ಟ್ ಜೋನ್‌ನಿಂದ ಹೊರಬರಬೇಕು. ಕೀಳರಿಮೆ ಇಟ್ಟುಕೊಳ್ಳಬಾರದು.‌ ಬೌಂಡರಿ ಹಾಕಿಕೊಳ್ಳಬಾರದು. ಜ್ಞಾನದ ಹಸಿವಿರಬೇಕು. ನಿತ್ಯವೂ ಮೂರು ದಿನಪತ್ರಿಕೆಗಳನ್ನು ಓದಬೇಕು. ಏಕೆಂದರೆ ಅವು ಪ್ರಚಲಿತ ವಿದ್ಯಮಾನದ ಮೂಲ ಸಂಪನ್ಮೂಲಗಳು. ಪಿಯುಸಿಯಾದ ಮೇಲೆ ಒಳ್ಳೆಯ ಕೋರ್ಸ್ ಎನ್ನುವುದಕ್ಕಿಂತ ಒಳ್ಳೆಯ ಕಾಲೇಜಿಗೆ ಸೇರಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ‘ಪದವಿ ಮುಗಿದು ಕೋಚಿಂಗ್‌ಗೆ ಹೋಗುವ ವೇಳೆಗೆ ನಮ್ಮ ದೇಹ ಹಾಗೂ ಮನಸ್ಸು ಸಿದ್ಧವಾಗಿರಬೇಕು. ಏಕೆಂದರೆ ಆಗ ಹೆಚ್ಚುವರಿ ಪುಸ್ತಕಗಳನ್ನು ಓದಿಕೊಳ್ಳಲು ಸಮಯ ಸಾಕಾಗುವುದಿಲ್ಲ. ಕೋಚಿಂಗ್‌ನಲ್ಲೇ 10ರಿಂದ 12 ಗಂಟೆ ಹೋಗುತ್ತದೆ. ಹೀಗಾಗಿ ಮುಂಚಿತವಾಗಿಯೇ ಓದಿಕೊಂಡಿರಬೇಕು. ಇದಕ್ಕಾಗಿ ಗ್ರಂಥಾಲಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

ಓದಿ ಬರೆಯಿರಿ ಹಂಚಿಕೊಳ್ಳಿ...

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ ‘ಎಲ್ಲರಲ್ಲೂ ಸಾಮರ್ಥ್ಯವಿದೆ. ಮೊದಲಿಗೆ ನಿಮ್ಮ ಮೇಲೆ ನಂಬಿಕೆ ಇಡಬೇಕು. ಸಾಧಿಸಬಲ್ಲೆ ಎಂಬ ಛಲವಿರಬೇಕು. ಓದು‌ ನಮ್ಮನ್ನು ಗಟ್ಟಿಗೊಳಿಸುತ್ತದೆ. ಹೆಚ್ಚು‌ ಓದಿದಂತೆ ಜ್ಞಾನ ವೃದ್ಧಿಸುತ್ತದೆ. ತಿಳಿದಿದ್ದನ್ನು ಬೇರೆಯವರೊಂದಿಗೆ‌ ಹಂಚಿಕೊಳ್ಳಬೇಕು. ತಿಳಿದುಕೊಂಡಿದ್ದನ್ನು ಬರೆಯಬೇಕು. ಆಗ ಅದು ಮನಸ್ಸಿನಲ್ಲಿ ಉಳಿಯುತ್ತದೆ’ ಎಂದು ಸಲಹೆ ನೀಡಿದರು. ‘ಈಗ ಅನೇಕ ಮಾಧ್ಯಮಗಳ ಮೂಲಕ ಬಹಳಷ್ಟು ಸಂಪನ್ಮೂಲ ಲಭ್ಯವಿದ್ದು ಅದನ್ನು ಬಳಸಿಕೊಳ್ಳಬೇಕು. ಯುಪಿಎಸ್‌ಸಿಯಲ್ಲಿ ಯಶಸ್ಸು ಕಾಣಲು ಬಹಳ ಓದಬೇಕು. ಬಹಳ ಕಷ್ಟಪಡಬೇಕು ಎಂದೆಲ್ಲಾ ಭಾವನೆ ಇದೆ. ಆದರೆ ಯೋಜನಾಬದ್ಧವಾಗಿ ಓದಿದರೆ ಕಷ್ಟವೇನಲ್ಲ. ಪ್ರಯತ್ನ ‌ಮುಖ್ಯವಾಗುತ್ತದೆ. ನಾಳೆ ನೋಡಿಕೊಳ್ಳೋಣ ಎಂಬ ಮುಂದೂಡುವಿಕೆಯ ಮನೋಭಾವ ಇರಬಾರದು. ಪ್ರಗತಿಯ ಚಾರ್ಟ್ ಮಾಡಿಕೊಳ್ಳಬೇಕು. ಅದರಂತೆ ಸುಧಾರಿಸುತ್ತಾ ಹೋಗಬೇಕು. ಇದರೊಂದಿಗೆ ಆರೋಗ್ಯಕರ‌ ಜೀವನಶೈಲಿ ಅಗತ್ಯ. ಉತ್ತಮ ಆಹಾರ ಸೇವಿಸಬೇಕು. ವ್ಯಾಯಾಮವನ್ನೂ‌ ಮಾಡಬೇಕು. ಸಮತೋಲನ ಬಹಳ‌ ಮುಖ್ಯ’ ಎಂದು ತಿಳಿಸಿದರು. ‘ಓದುವುದನ್ನು ಎಂಜಾಯ್ ಮಾಡಬೇಕು. ಪ್ರತಿ ದಿನವೂ ಏನಾದರೊಂದು ಹೊಸದನ್ನು  ಕಲಿತುಕೊಳ್ಳಬೇಕು. ವಾರದಲ್ಲಿ ‌ಒಂದು‌ ದಿನ ಕೇವಲ‌ ಓದಿಗಷ್ಟೇ‌ ಮೀಸಲಿಡಬೇಕು. ಬೇರೆ ವಿಷಯಗಳತ್ತ ಗಮನಹರಿಸಬಾರದು. ಇದರಿಂದ ಬಹಳ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.