ADVERTISEMENT

ಜುಲೈ 5ರಿಂದ ಗುಜರಾತ್‌ ಕರಕುಶಲ ಉತ್ಸವ

ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ 14ರವರೆಗೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 14:15 IST
Last Updated 4 ಜುಲೈ 2024, 14:15 IST

ಮೈಸೂರು: ಇಲ್ಲಿನ ವರ್ತುಲ ರಸ್ತೆಯ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಸತತ 9ನೇ ಬಾರಿಗೆ ಜುಲೈ 5ರಿಂದ 14ರವರೆಗೆ ‘ಗುಜರಾತ್‌ ಕರಕುಶಲ ಉತ್ಸವ’ವನ್ನು ಆಯೋಜಿಸಲಾಗಿದೆ.

‘ಗುಜರಾತ್ ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಇಂಡೆಕ್ಸ್‌ಟಿ –ಸಿ (ಇಂಡಸ್ಟ್ರಿಯಲ್‌ ಎಕ್ಸ್‌ಟೆನ್ಸನ್‌ ಕಾಟೇಜ್‌) ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಇಂಡೆಕ್ಸ್‌ಟಿ–ಸಿಯ ವ್ಯವಸ್ಥಾಪಕ ಆರ್‌.ಎಸ್. ಶಾ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

‘ಜುಲೈ 5ರಂದು ಸಂಜೆ 4ಕ್ಕೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಿರ್ದೇಶಕಿ ಪಿ.ಐ. ವಿದ್ಯಾ ಉದ್ಘಾಟಿಸಲಿದ್ದಾರೆ. ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಇಂಡೆಕ್ಸ್‌ಟಿ –ಸಿಯ ವ್ಯವಸ್ಥಾಪಕ ನಿರ್ದೇಶಕ ಎನ್‌.ಡಿ. ಪರ್ಮಾರ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ಮಹಾನಗರಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್‌ ಶರೀಫ್‌, ಜವಳಿ ಮಂತ್ರಾಲಯದ ರಾಷ್ಟ್ರೀಯ ಫ್ಯಾಷನ್‌ ಟೆಕ್ನಾಲಜೀಸ್ ನಿರ್ದೇಶಕ ಯತೀಂದ್ರ ಲಕ್ಕಣ್ಣ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ ಕುಶಲಕರ್ಮಿಗಳು ಒಂದೇ ಸೂರಿನಡಿ ಕರಕುಶಲ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಾರೆ. ಆ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರಿಯಾಶೀಲರಾಗಿರುವ 70  ಕುಶಲಕರ್ಮಿಗಳು ಪಾಲ್ಗೊಳ್ಳಲಿದ್ದಾರೆ. ಪಟೋಲ ಸೀರೆ, ಬಾಂದಿನಿ ಸೀರೆ, ಕಸೂತಿ ಮಾಡಿದ ಬೆಡ್‌ಶೀಟ್‌, ಟವಲ್‌, ಕುಶನ್ ಕವರ್‌, ಪರಿಸರ ಸ್ನೇಹಿ ಆಭರಣ, ಡ್ರೆಸ್ ಮೆಟೀರಿಯಲ್‌, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ ಮೊದಲಾದ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳು ದೊರೆಯಲಿವೆ. ಉಚಿತ ಪ್ರವೇಶವಿದೆ’ ಎಂದು ವಿವರಿಸಿದರು.

‘ಜುಲೈ 5ರಿಂದ 7ರವರೆಗೆ ಸಂಜೆ 6ರಿಂದ ರಾತ್ರಿ 8ರವರೆಗೆ ಗುಜರಾತ್‌ನ ಪ್ರಸಿದ್ಧ ಸಾಂಸ್ಕೃತಿಕ ಕಲಾ ತಂಡಗಳಿಂದ ಗರ್ಭಾ ನೃತ್ಯ ಪ್ರದರ್ಶನಗೊಳ್ಳಲಿದೆ. ಸಾರ್ವಜನಿಕರು ಉಚಿತವಾಗಿ ಭಾಗವಹಿಸಬಹುದು. ಶಾಲಾ ಮಕ್ಕಳು, ಮಹಿಳೆಯರು ಮತ್ತು ಆಸಕ್ತರಿಗೆ ಗುಜರಾತ್‌ನ ಪಾರಂಪರಿಕ ಕಲೆಯ ಬಗ್ಗೆ ತರಬೇತಿಯನ್ನು ಅಲ್ಲಿನ ಕುಶಲಕರ್ಮಿಗಳು ನೀಡಲಿದ್ದಾರೆ’ ಎಂದು ತಿಳಿಸಿದರು.

ಇಂಡೆಕ್ಸ್‌ಟಿ –ಸಿಯ ಮಾರುಕಟ್ಟೆ ವ್ಯವಸ್ಥಾಪಕ ಸ್ನೇಹಲ್‌ ಮಕ್ವಾನಾ, ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ ಯೋಜನಾ ನಿರ್ದೇಶಕ ಶಿವಸ್ವಾಮಿ ಹಾಗೂ ರಾಕೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.